ಮೇಕೆದಾಟು, ಭದ್ರಾ, ಕೃಷ್ಣ, ಮಹದಾಯಿ ಯೋಜನೆಗಳಿಗೆ ಕೇಂದ್ರ ಸ್ಪಂದಿಸಲಿ-ಡಾ.ಟಿ.ಬಿ ಜಯಚಂದ್ರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಧಾನಿ ಬೆಂಗಳೂರಿನ ಜನಸಂಖ್ಯೆ 2050ರ ವೇಳೆಗೆ 3 ಕೋಟಿ ಮೀರಲಿದೆ.
ಇಷ್ಟು ಜನಸಂಖ್ಯೆಗೆ ಕುಡಿಯುವ ನೀರು ಸಿಗದೆ ಅಭಾವ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಕುಡಿಯುವ ನೀರಿನ ಮೂಲವಾಗಿರುವ ಮೇಕೆದಾಟು ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಬೇಕು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ, ಹಿರಿಯ ಶಾಸಕ ಡಾ.ಟಿ.ಬಿ. ಜಯಚಂದ್ರ ಆಗ್ರಹ ಮಾಡಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಜಯಚಂದ್ರ ಅವರು, ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಐದು ಜಿಲ್ಲೆಗಳಲ್ಲಿ ಅಂತರ್ಜಲ ಮಿತಿಮೀರಿ ಬಳಸಲಾಗಿದ್ದು ಭವಿಷ್ಯದಲ್ಲಿ ತೊಂದರೆಯಾಗಲಿದೆ‌. ಮೇಕೆದಾಟು ಯೋಜನೆ ಅನುಷ್ಠಾನಗೊಂಡರೆ 67 ಟಿಎಂಸಿ ನೀರು ಕುಡಿಯಲು ಸಿಗಲಿದೆ. ಆಗ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಹಲವು ಜಿಲ್ಲೆಗಳಿಗೆ ಕುಡಿವ ನೀರು ಪೂರೈಕೆ ಮಾಡಲು ಅನುಕೂಲ ಆಗಲಿದೆ ಎಂದು ಜಯಚಂದ್ರ ಅವರು ಪ್ರತಿಪಾದಿಸಿದರು.

ಭದ್ರಾ ಮೇಲ್ದಂಡೆ ಯೋಜನೆಯನ್ನು ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಾಗಿ ಅನುಷ್ಠಾನಗೊಳಿಸಲಾಗಿದೆ. ಕೇಂದ್ರ ಸರ್ಕಾರ ಈ ಕೂಡಲೇ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿ ಕೇಂದ್ರ ಸರ್ಕಾರದ ಪಾಲಿನ 5,300 ಕೋಟಿ ರೂ. ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಯೋಜನೆಗಳ ಜೊತೆಯಲ್ಲಿ ಕೃಷ್ಣ ಮೇಲ್ದಂಡೆ ಯೋಜನೆ ಹಾಗೂ ಮಹದಾಯಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಿದರೆ ರೈತರಿಗೆ ಅನುಕೂಲ ಆಗಲಿದೆ ಎಂದು ಜಯಚಂದ್ರ ಅಭಿಪ್ರಾಯಪಟ್ಟರು.

ಇತ್ತೀಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯ ಹೊಸ ದಾಖಲೆ ನಿರ್ಮಿಸಿದ್ದು 10.7 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ಸಾಧ್ಯತೆ ಇದೆ. ಕರ್ನಾಟಕ ರಾಜ್ಯಐಟಿಬಿಟಿ, ಔಷಧಿ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದೆ. ಕೃಷಿ ಕ್ಷೇತ್ರಕ್ಕೂ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಮುಂದಿನ ದಿನಗಳಲ್ಲಿ ರಾಜ್ಯದ ಆರ್ಥಿಕ ಶಕ್ತಿಯನ್ನು ಒಂದು ಟ್ರಿಲಿಯನ್ ಡಾಲರ್​ಗೆ ಏರಿಕೆ ಮಾಡಬೇಕು ಎಂದು ಅವರು ಹೇಳಿದರು.

ಫುಡ್ ಪಾರ್ಕ್:
ಕಳೆದ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಏಳು ಫುಡ್ ಪಾರ್ಕ್​ಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಆದರೆ ಈ ಪುಡ್ ಪಾರ್ಕ್ ಯೋಜನೆಗಳು ನೆನೆಗುದಿಗೆ ಬಿದ್ದಿರುವುದು ದುರದೃಷ್ಟಕರ ಸಂಗತಿ. ಈ ಫುಡ್ ಪಾರ್ಕ್​ಗಳಿಗೆ ಹಣ ನೀಡುವ ಮೂಲಕ ಯೋಜನೆಯನ್ನು ಮುಂದುವರಿಸಬೇಕು. ಆ ಮೂಲಕ ಆಹಾರ ಪದಾರ್ಥಗಳನ್ನು ಸಂಸ್ಕರಣೆ ಮಾಡಿ ಹೆಚ್ಚು ವಿದೇಶಿ ವಿನಿಮಯ ಗಳಿಸಬೇಕು. ಹಾಗಾದಾಗ ಮಾತ್ರ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಸಿಗಲಿದೆ ಹಾಗೂ ವಿದೇಶಿ ವಿನಿಮಯವೂ ದೊರೆಯಲಿದೆ ಎಂದು ಜಯಚಂದ್ರ ಅವರು ಒತ್ತಾಯಿಸಿದರು.

ಹುಣಸೆ ಪಾರ್ಕ್:
ಮಧ್ಯ ಕರ್ನಾಟಕದ ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಡಿಮೆ ಮಳೆ ಬೀಳುತ್ತಿದ್ದು ಸದಾ ಬರಗಾಲಕ್ಕೆ ತುತ್ತಾಗುತ್ತಿವೆ. ಈ ಜಿಲ್ಲೆಗಳಲ್ಲಿ
ಹುಣಸೆಹಣ್ಣು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಹುಣಸೆಹಣ್ಣಿನಲ್ಲಿ ಔಷಧಿ ಅಗತ್ಯವಿರುವ ಅಂಶಗಳಿದ್ದು, ದೇಶವಿದೇಶಗಳಲ್ಲಿ ಬಹಳ ಬೇಡಿಕೆ ಇದೆ. ದಕ್ಷಿಣ ಆಫ್ರಿಕಾದ ನಂತರ ಅತಿ ಹೆಚ್ಚು ಹುಣಸೆ ಬೆಳೆಯುವುದು ನಮ್ಮ ರಾಜ್ಯದಲ್ಲಿ. ಹೀಗಾಗಿ ಹುಣಸೆ ಪಾರ್ಕ್‌ಸ್ಥಾಪಿಸಬೇಕು. ಈಗಾಗಲೇ ಹುಣಸೆ ಪಾರ್ಕ್ ನಿರ್ಮಾಣಕ್ಕಾಗಿ 20 ಎಕರೆ ಭೂಮಿಯನ್ನು ತುಮಕೂರು ಜಿಲ್ಲೆಯಲ್ಲಿ ಗುರುತಿಸಲಾಗಿದೆ ಎಂದು ಜಯಚಂದ್ರ ಅವರು ತಿಳಿಸಿದರು‌‌.

ಪ್ರಸಕ್ತ ಸಾಲಿನಲ್ಲಿ ಶಿರಾ ತಾಲೂಕಿನಾದ್ಯಂತ 32,000 ಎಕರೆಯಲ್ಲಿ ಬಿಟಿ ಹತ್ತಿಯನ್ನ ಬೆಳೆಯಲಾಗಿದೆ. ಇದು ಪ್ರಮುಖ ವಾಣಿಜ್ಯ ಬೆಳೆ ಆಗಿದೆ. ಮುಂದಿನ ದಿನಗಳಲ್ಲಿ ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಯಲು ರೈತರಿಗೆ ಹೆಚ್ಚಿನ ಪೋತ್ಸಾಹ ನೀಡಬೇಕೆಂದು ಜಯಚಂದ್ರ ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ತಕ್ಷಣ 5 ಅನುಷ್ಠಾನಗೊಳಿಸಲಾಗಿದ್ದು, ನೇರವಾಗಿ ನಾಲ್ಕೂವರೆ ಕೋಟಿ ಜನಕ್ಕೆ ತಲುಪುತ್ತಿವೆ. ಮಹಿಳಾ ಆಧರಿತ ಈ ಯೋಜನೆಗಳ ಬಗ್ಗೆ ವಿಶ್ವ ಸಂಸ್ಥೆಯ ಮುಖ್ಯಸ್ಥರೆ ರಾಜ್ಯಕ್ಕೆ ಆಗಮಿಸಿ ಮೆಚ್ಚುಗೆ ಸೂಚಿಸಿರುವುದು ಈ ಯೋಜನೆಗಳ ಮಹತ್ವ ಎಷ್ಟು ಎಂದು ತಿಳಿಯಲಿದೆ ಎಂದರು. 

- Advertisement -  - Advertisement - 
Share This Article
error: Content is protected !!
";