ಸೆ.18 ರಂದು ಡಾ.ವಿಷ್ಣುವರ್ಧನ್ ಜಯಂತೋತ್ಸವ ಆಚರಣೆ

News Desk

ಸೆ.18 ರಂದು ಡಾ.ವಿಷ್ಣುವರ್ಧನ್ ಜಯಂತೋತ್ಸವ ಆಚರಣೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು;
ಈ ತಿಂಗಳ 18 ರಂದು ಡಾ.ವಿಷ್ಣುವರ್ಧನ್ ಅವರ 74ನೇ ವರ್ಷದ ಜಯಂತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ವಿ.ಎಸ್.ಎಸ್ ಅಭಿಮಾನ್ ಡಾ.ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ರಾಜು ಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಣ್ಯ ಭೂಮಿಯ 10 ಗುಂಟೆ ಜಾಗದಲ್ಲಿ ವಿಷ್ಣು ಅಪ್ಪಾಜಿ ಮಂಟಪಕ್ಕೆ ಹೂವಿನ ಅಲಂಕಾರ, ಪೂಜಾ ಕಾರ್ಯಕ್ರಮಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ.

ಎಂದಿನಂತೆ ಸ್ಟುಡಿಯೋ ಮುಂಭಾಗದಲ್ಲಿ ಅನ್ನದಾನ ಶಿಬಿರ, ರಕ್ತದಾನ ಶಿಬಿರವನ್ನು ಅಯೋಜಿಸಲಾಗಿದೆ. ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಡಾ. ವಿಷ್ಣುವರ್ಧನ್ ದತ್ತು ಪುತ್ರ ಶ್ರೀಧರ್ ಮೂರ್ತಿ, ಹಿರಿಯ ಕಲಾವಿದ ರಮೇಶ್ ಭಟ್, ಸಮಾಜ ಸೇವಕರು, ಬಿ ವೈ ರಮೇಶ್, ಒಳಗೊಂಡಂತೆ ಸಮಸ್ತ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಕನ್ನಡ ಚಲನಚಿತ್ರರಂಗದ ಶ್ರೇಷ್ಠ ನಟ ಡಾ.ವಿಷ್ಣುವರ್ಧನ್ಅವರ ಪುಣ್ಯ ಭೂಮಿ 10 ಗುಂಟೆ ಜಾಗದ ಸಮಸ್ಯೆ 7ವರ್ಷಗಳಿಂದ ಇತ್ಯರ್ಥವಾಗದ ಕಾರಣ ಪುಣ್ಯಭೂಮಿ ಮಂದಿರ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಇದಕ್ಕೆ ಸರ್ಕಾರಿ ಅಧಿಕಾರಿಗಳು ಹಾಗೂ ಅಭಿಮಾನ್ ಸ್ಟುಡಿಯೋ ಭೂ ಮಾಲೀಕರೇ ಕಾರಣ. ಸರ್ಕಾರಕ್ಕೆ ಹಾಗೂ ನ್ಯಾಯಾಲಯಕ್ಕೆ ಗೌರವ ನೀಡದೇ ದರ್ಪ ತೋರುತ್ತಿರುವ ಇವರ ವಿರುದ್ಧ ಮೂರನೇ ಸುತ್ತಿನ ಕಾನೂನು ಹೋರಾಟ ನಡೆಸುವುದಾಗಿ ಅವರು ಎಚ್ಚರಿಕೆ ನೀಢೀದರು.

2 ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣಕ್ಕೆ ಅವಕಾಶಮಾಡಿಕೊಟ್ಟಿಲ್ಲ. 10 ಗುಂಟೆ ದಾನವಾಗಿ ನೀಡುವುದಾಗಿ ಸರ್ಕಾರಕ್ಕೆ ಒಪ್ಪಿಗೆ ಪತ್ರ ಬರೆದುಕೊಟ್ಟಿದ್ದರೂ ವಿಧಿ ವಿಧಾನಗಳನ್ನು ಪೂರೈಸಿಲ್ಲ. ಈ ಪ್ರಕ್ರಿಯೆಗೆ ಸಹಕಾರ ನೀಡುತ್ತಿಲ್ಲ. ಬದಲಿಗೆ ಅಭಿಮಾನಿಗಳು, ಅಭಿಮಾನಿ ಸಂಘಟನೆಗಳ ವಿರುದ್ಧ ದೌರ್ಜನ್ಯವೆಸಗುತ್ತಿದ್ದಾರೆ ಎಂದರು.

ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮಗಳಿಗೆ ಸಹಕಾರ ಕೊಡದೇ ತಮ್ಮ ಮೊಂಡುತನ ಮುಂದುವರೆಸಿದ್ದಾರೆ. ಜಿಲ್ಲಾಧಿಕಾರಿಗಳು ಕರೆದ 2 ಸಭೆಗಳಿಗೆ ಗೈರು ಹಾಜರಾಗಿದ್ದಾರೆ. ಅವರ ನಿರ್ಲಕ್ಷ್ಯ ಧೋರಣೆ ವಿರುದ್ಧ ಮೂರನೇ ಬಾರಿಗೆ ಕಾನೂನು ಹೋರಾಟಕ್ಕೆ ಟ್ರಸ್ಟ್ ಅಣಿಯಾಗಿದೆ.

ಅಭಿಮಾನ್ ಸ್ಟುಡಿಯೋ wp/45042 /2015 ರ ಪ್ರಕರಣದಲ್ಲಿ ವಿ ಎಸ್ ಎಸ್ ಟ್ರಸ್ಟ್ ಹಾಗು ಸಂಘಟನೆ ಯಿಂದ 10ಗುಂಟೆ ಜಾಗದ ಬಗ್ಗೆ ಅರ್ಜಿ ಹಾಕಿದ್ದೆವು, 2023 ರ ಆಗಸ್ಟ್ 21 ರಂದು ಹೈಕೋರ್ಟ್ ಅಭಿಮಾನ್ ಸ್ಟುಡಿಯೋದ 2 ಎಕರೆ ಜಾಗದ ಪ್ರಕರಣವನ್ನು ರದ್ದುಗೊಳಿಸಿ 10 ಗುಂಟೆ ಪುಣ್ಯಭೂಮಿ ಬಗ್ಗೆ ಜಡ್ಜ್ ಮೆಂಟ್ ನಲ್ಲಿ ಉಲೇಖ ಮಾಡಿ ಸರ್ಕಾರ ಹಾಗೂ ಪ್ರಾಧಿಕಾರದ ನಡುವೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದೆ. ಸರ್ಕಾರ ಹಾಗು ಭೂ ಮಾಲೀಕರ ನಿರ್ಲಕ್ಷ್ಯ ಧೋರಣೆ ವಿರುದ್ಧ ಕಳೆದ ವರ್ಷದ ಡಿಸೆಂಬರ್ 18 ಮತ್ತು 19 ರಂದು ಸತ್ಯಾಗ್ರಹ ನಡೆಸಲಾಯಿತು,ಮನವಿ ನೀಡಲಾಗಿದೆ ಆದರು ಸರ್ಕಾರ ಯಾವುದೇ ನಿಲುವು ತೆಗೆದುಕೊಂಡಿಲ್ಲ,

ಮತ್ತೆ ಉಚ್ಚ ನ್ಯಾಯಾಲಯಕ್ಕೆ 21-12-2023ರಂದು ಪಿ ಐ ಎಲ್wp no:29408 of 2023ರ ಮೂಲಕ ಅರ್ಜಿ ಹಾಕಿದ್ದೆವು ಇದೇ ಜೂನ್ 4, 2024ರಂದು ರಂದು ನಮಗೆ ಜಾಗದ ಬಗ್ಗೆ ಕಲಾವಿದರಿಗೆ ನಿರ್ದೇಶನ ನೀಡಲು ಬರುವುದಿಲ್ಲ ಎಂದು ಅರ್ಜಿಯನ್ನು ವಜಾಗೊಳಿಸಿ ಮತ್ತೆ ಸರ್ಕಾರ ಹಾಗೂ ಪ್ರಾಧಿಕಾರದ ಜೊತೆ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಆದೇಶಿಸಿತು. ಆದಾಗ್ಯೂ ಪುಣ್ಯಭೂಮಿ ಜಾಗವನ್ನು ಸ್ಟುಡಿಯೋ ಮಾಲೀಕರು ದಾನವಾಗಿ ನೀಡಲು ತೊಂದರೆ ಇದ್ದಲ್ಲಿ ಅಭಿಮಾನಿಗಳು, ಅಭಿಮಾನಿ ಸಂಘಟನೆಗಳು 10 ಗುಂಟೆ ಜಾಗವನ್ನು ಖರೀದಿಸಲ ಸಿದ್ಧ ಎಂದು ತಿಳಿಸಿದ್ದೇವೆ. ನಂತರ ಜಿಲ್ಲಾಧಿಕಾರಿಗಳು ಕರೆದ ಮತ್ತೊಂದು ಸಭೆಗೂ ಗೈರು ಹಾಜರಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಬಿ.ವೈ ರಮೇಶ್, ಟ್ರಸ್ಟ್ ಅಧ್ಯಕ್ಷ ಶ್ರೀಧರ್ ಮೂರ್ತಿ, ಕಾರ್ಯದರ್ಶಿ ನಾರಾಯಣ್ ಕೆ, ಹೈಕೋರ್ಟ್ ವಕೀಲ ಅರುಣ್.ಕೆ.ಎಸ್, ಸಮಾಜ ಸೇವಕ ಚಂದ್ರುಗೌಡ, ಮೋಹನ್ ಶ್ರೀನಿವಾಸನ್, ಖಜಾಂಚಿ ಮಧುಸೂದನ್ ಗೌಡ, ಸಹ ಖಜಾಂಚಿ ಸ್ನೇಹ ರಶ್ಮಿ ಸಾರಂಗ್, ಸಹ ಕಾರ್ಯದರ್ಶಿ ಚಂದ್ರ ಹಾಸ್, ಉಪಾಧ್ಯಕ್ಷ ಹರೀಶ್ ಗೌಡ ಉಪಸ್ಥಿತರಿದ್ದರು.

- Advertisement -  - Advertisement - 
Share This Article
error: Content is protected !!
";