ವಿಜ್ಞಾನ ಕ್ಷೇತ್ರದಲ್ಲೂ ಹೆಚ್ಚಲಿ ನಾರಿ ಶಕ್ತಿ : ಡಾ.ವೈ.ಸಿ ಕಮಲಾ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ತಿಪಟೂರು:
ಭಾರತೀಯ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಕೆಲ ಮಹಿಳಾ ಸಾಧಕರು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿದ್ದು
, ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾಲಿಡಬೇಕಾಗಿದ್ದು, ಅಂತಹವರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು: ವಿಕಸಿತ ಭಾರತಕ್ಕೆ ಪ್ರೇರಕ ಶಕ್ತಿ ಎಂಬ ಧ್ಯೇಯದೊಂದಿಗೆ ಈ ಬಾರಿಯ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಗುತ್ತಿದೆ ಎಂದು ಜಿ.ಎಫ್.ಜಿ.ಸಿ ಮಲ್ಲೇಶ್ವರಂ,ಬೆಂಗಳೂರಿನ ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ವೈ.ಸಿ.ಕಮಲಾ ತಿಳಿಸಿದರು.

      ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಪಿಜೆ ಅಬ್ದುಲ್ ಕಲಾಂ ಸೆಮಿನಾರ್ ಹಾಲ್ ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅವರು, ವಿಜ್ಞಾನ ದಿನದ ಆಚರಣೆ ಏಕೆ ಮಾಡಬೇಕು, ಅದರ ಹಿನ್ನೆಲೆ, ರಾಮನ್ ಎಫೆಕ್ಟ್ ಎಂದರೇನು, ವಿಜ್ಞಾನ ಎಂದರೇನು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಲಿಂಗಾನುಪಾತ, ಕಡಿಮೆ ಲಿಂಗಾನುಪಾತಕ್ಕೆ ಕಾರಣ ಮತ್ತು ಪರಿಹಾರ ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

- Advertisement - 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ.ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ಈ ಮಟ್ಟದ ಭಾಗವಹಿಸುವಿಕೆಯನ್ನು ನಾನು ಊಹಿಸಿರಲಿಲ್ಲ. ವಿಜ್ಞಾನ ಮಾದರಿಗಳ ಪ್ರದರ್ಶನ ಸೇರಿದಂತೆ ಎಲ್ಲ ಕಾರ್ಯಕ್ರಮಗಳ ಹಿಂದೆ ನಿಂತು ಶ್ರಮಿಸಿದ ಪ್ರಾಧ್ಯಾಪಕ ಬಳಗಕ್ಕೆ ಧನ್ಯವಾದ. ಮುಂದಿನ ದಿನಗಳಲ್ಲಿ ವಿಭಾಗಕ್ಕೆ ಇನ್ನೂ ಹೆಚ್ಚಿನ ಬೆಂಬಲ ನೀಡಲಾಗುವುದು ಎಂದರು.

    ಇದೇ ಸಂದರ್ಭದಲ್ಲಿ ವಿಜ್ಞಾನ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ಮಾದರಿಗಳ ಪ್ರದರ್ಶನ, ವಿಜ್ಞಾನ ರಸಪ್ರಶ್ನೆ ಮತ್ತು ಆಶುಭಾಷಣ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಜ್ಞಾನ ರಸಪ್ರಶ್ನೆಯಲ್ಲಿ ಬಿ.ಎಸ್ಸಿ ತೃತೀಯ ವರ್ಷದ ವಿಜಯ ಚಿರಂಜೀವಿ ಪ್ರಥಮ ಸ್ಥಾನ ಪಡೆದರೆ, ವಿಜ್ಞಾನ ಮಾದರಿಗಳ ಪ್ರದರ್ಶನ ಮತ್ತು ಆಶುಭಾಷಣ ಸ್ಪರ್ಧೆಗಳಲ್ಲಿ ದ್ವಿತೀಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿ ಮೊನಿಕಾ ಎಚ್.ಬಿ ಪ್ರಥಮ ಸ್ಥಾನ ಪಡೆದರು.

- Advertisement - 

    ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀನಿವಾಸ.ಇ, ಐಕ್ಯೂಎಸಿ ಸಂಯೋಜಕರಾದ ಡಾ.ಯೋಗೀಶ್ ಮತ್ತು ಸಹ ಸಂಯೋಜಕರಾದ ಡಾ.ಸಯ್ಯದ್ ಇಬ್ರಾಹಿಂ ಸೇರಿದಂತೆ ವಿಭಾಗದ ಪ್ರಾಧ್ಯಾಪಕ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
error: Content is protected !!
";