ಹಿರಿಯೂರು, ಚಳ್ಳಕೆರೆಯ ಕೆರೆ ಕಟ್ಟೆಗಳಿಗೆ ವಿವಿ ಸಾಗರದಿಂದ ನೀರು ಹರಿಸಿ

News Desk

ಎತ್ತಿನಹೊಳೆ ಮತ್ತು ಭದ್ರಾದಿಂದ ಕನಿಷ್ಠ 10 ಟಿಎಂಸಿ ನೀರು ಹಂಚಿಕೆ ಮಾಡಲಿ
ಹೆಚ್.ಸಿ.ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಳೆಯಿಂದ ಮರೆಯಾಗಿರುವ ಹಿರಿಯೂರು, ಚಳ್ಳಕೆರೆ ತಾಲೂಕಿನ ವಿವಿಧ ಕೆರೆ, ಕಟ್ಟೆಗಳಿಗೆ ನೀರು ಹರಿಸಲು ಬ್ಯಾರೇಜ್ ಗೆ ವಿವಿ ಸಾಗರದಿಂದ ನೀರು ಹರಿಸುವ ಅಗತ್ಯವಿದೆ.

- Advertisement - 

ಮುಂಗಾರು ಹಂಗಾಮಿನ ಪೂರ್ವ ಮತ್ತು ನಂತರದ ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ಹಿರಿಯೂರು, ಚಳ್ಳಕೆರೆ ಮೊಳಕಾಲ್ಮೂರು ತಾಲೂಕುಗಳ ಕೆರೆಗಳಿಗೆ ಹನಿ ಬಂದಿಲ್ಲ. ಕೆರೆಗಳಿಗೆ ನೀರು ಬರುವುದು ಇರಲಿ, ಬಿತ್ತನೆ ಮಾಡಲು ಸರಿಯಾದ ಹದ ಮಳೆ ಕೂಡ ಬಿದ್ದಿಲ್ಲ. ಹಾಗಾಗಿ ಕೂಡಲೇ ವಾಣಿ ವಿಲಾಸ ಸಾಗರದಿಂದ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸುಮಾರು 18 ಬ್ಯಾರೇಜ್ ಕಂ ಬ್ರಿಡ್ಜ್ ಗಳಿಗೆ(ಚೆಕ್ ಡ್ಯಾಂ) ನೀರು ಹರಿಸುವ ತುರ್ತು ಅಗತ್ಯವಿದೆ.

- Advertisement - 

ಜಲಸಂಪನ್ಮೂಲ ಇಲಾಖೆಯ ವಿಶ್ವೇಶ್ವರಯ್ಯ ಜಲ ನಿಗಮದ ವ್ಯಾಪ್ತಿಗೆ ಒಳಪಟ್ಟ ಹಿರಿಯೂರು ಸಮೀಪದ ವಾಣಿ ವಿಲಾಸ ಸಾಗರ ಜಲಾಶಯವು 1933ರಲ್ಲಿ ಮೊದಲ ಬಾರಿಗೆ ಗರಿಷ್ಠ ಮಟ್ಟ 130 ಆಡಿ ತಲುಪಿ 30 ಟಿಎಂಸಿ ನೀರು ಸಂಗ್ರಹದೊಂದಿಗೆ ಭರ್ತಿಯಾಗಿತ್ತು.

ನಂತರದ ವರ್ಷಗಳಲ್ಲಿ ಮಳೆಯ ಅಭಾವದಿಂದ ಜಲಾಶಯಕ್ಕೆ ನೀರಿನ ಕೊರತೆಯುಂಟಾಗಿ 89 ವರ್ಷಗಳ ಕಾಲ ಒಮ್ಮೆಯೂ ಜಲಾಶಯ ಭರ್ತಿಯಾಗಿರಲಿಲ್ಲ. ಈ ಕೊರತೆ ನೀಗಿಸಲು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 02 ಟಿಎಂಸಿ ನೀರಿನ ಹಂಚಿಕೆ ಮಾಡಲಾಗಿದೆ.

- Advertisement - 

 2019-20ನೇ ಸಾಲಿನಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ಜಲಾಶಯಕ್ಕೆ ನೀರು ಹರಿಸಲಾಗಿದೆ. 2022ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗಿದ್ದರಿಂದ ಜಲಾಶಯಕ್ಕೆ ನೀರಿನ ಒಳಹರಿವು ಹೆಚ್ಚಾಗಿ 2022ರ ಸೆಪ್ಟೆಂಬಪ್-02 ರಂದು 89 ವರ್ಷಗಳ ನಂತರ ಮತ್ತೇ ಜಲಾಶಯದ ಗರಿಷ್ಟ ಮಟ್ಟ 130 ಅಡಿ ತಲುಪಿ ಭರ್ತಿಯಾಗಿ ಕೋಡಿ ಹರಿಯಿತು. ಈ ಸಾಲಿನ ಗರಿಷ್ಟ ಮಟ್ಟ 135 ಆಡಿ ತಲುಪಿತ್ತು. ದಿನಾಂಕ:02.09.2022 ರಿಂದ ಸುಮಾರು 4 ತಿಂಗಳ ಕಾಲ ಸತತವಾಗಿ ಕೋಡಿ ಮುಖಾಂತರ ಹೆಚ್ಚುವರಿ ಸುಮಾರು 25 TMCಯಷ್ಟು ನೀರು ವೇದಾವತಿ ನದಿ ಪಾತ್ರ ಸೇರಿದ್ದು ಇತಿಹಾಸ. 3ನೇ ಬಾರಿಗೆ 2024ರಲ್ಲಿ ವಿವಿ ಸಾಗರ ಡ್ಯಾಂ ಭರ್ತಿಯಾಗಿ ಕೋಡಿ ಹರಿದಿತ್ತು.

ವಿವಿ ಸಾಗರದ ನೀರಿನ ಹಂಚಿಕೆ-
ವಾಣಿ ವಿಲಾಸ ಸಾಗರದ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಕುಡಿಯುವ ನೀರು ಮತ್ತು ಕೆರೆ, ಚೆಕ್ ಡ್ಯಾಂಗಳಿಗೆ ನೀರು ಭರ್ತಿ ಮಾಡಲು ಸಮಗ್ರವಾಗಿ ಹಂಚಿಕೆ ಮಾಡಲಾಗಿದೆ.
ವಾಣಿ ವಿಲಾಸ ಸಾಗರದ ಅಚ್ಚುಕಟ್ಟು ಪ್ರದೇಶಕ್ಕೆ ಮುಂಗಾರು ಹಂಗಾಮು ಸೇರಿದಂತೆ ದೀರ್ಘಾವಧಿಯ ತೆಂಗು, ಅಡಿಕೆ, ಬಾಳೆ ಸೇರಿದಂತೆ ಇತರೆ ಬೆಳೆಗಳಿಗೆ 5.25ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ.

ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಡಿಆರ್ ಡಿಒ, ಐಐಎಸ್ ಸಿ, ಬಿಎಆರ್ ಸಿ ವಿಜ್ಞಾನ ಸಂಸ್ಥೆಗಳಿಗೆ ಹಾಗೂ ಮಾರ್ಗ ಮಧ್ಯದ 18 ಹಳ್ಳಿಗಳ ಕುಡಿಯುವ ನೀರಿಗಾಗಿ 0.770ಟಿಎಂಸಿ ನೀರು, ಹಿರಿಯೂರು ತಾಲ್ಲೂಕಿನ ಐಮಂಗಲ ಮತ್ತು 37 ಹಳ್ಳಿಗಳಿಗೆ ರಾಜೀವ್‌ಗಾಂಧಿ ಸಬ್‌ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿನ ಯೋಜನೆಗೆ ಮತ್ತು ಹಿರಿಯೂರು ತಾಲ್ಲೂಕಿನ ಐಮಂಗಲ ಮತ್ತು 37 ಗ್ರಾಮಗಳ ಬಹುಗ್ರಾಮಕುಡಿಯುವ ನೀರಿನ ಯೋಜನೆಗೆ 0.115ಟಿಎಂಸಿ ನೀರು, ಭದ್ರಾ ಜಲಾಶಯದಿಂದ ವಿವಿ ಸಾಗರದ ಮೂಲಕ ಚಳ್ಳಕೆರೆ ಕ್ಷೇತ್ರಕ್ಕೆ ಕುಡಿಯುವ ನೀರಿನ ಯೋಜನೆಗೆ 0.25ಟಿಎಂಸಿ ನೀರು, ಮೇ| ವಿ.ಎಸ್.ಎಲ್.ಸ್ಟೀಲ್ ಪ್ಯಾಕ್ಟರಿಗೆ 0.0353 ಟಿಸಿಎಂಸಿ ಮತ್ತು 0.034ಟಿಎಂಸಿ ನೀರು, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ 198 ಗ್ರಾಮಗಳಿಗೆ ಹಾಗೂ ಹೊಳಲ್ಕೆರೆ ಪಟ್ಟಣಕ್ಕೆ ಕುಡಿಯುವ ನೀರನ್ನು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅವಶ್ಯವಿರುವ 0.357 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರದಿಂದ ಬಳಸಲು ಅನುಮತಿ ನೀಡಲಾಗಿದೆ.

ಇದಲ್ಲದೆ ಹಿರಿಯೂರು ವಿಧಾನ ಸಭಾ ಕ್ಷೇತ್ರದ 131 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 0.220 ಟಿಎಂಸಿ ಕುಡಿಯುವ ನೀರನ್ನು ವಿ.ವಿ ಸಾಗರದಿಂದ ಬಳಸಲು ಅನುಮತಿ ನೀಡಿ ಹಂಚಿಕೆ ಮಾಡಲಾಗಿದೆ. ವಿ.ವಿ. ಸಾಗರದ ಜಲಾಶಯದಿಂದ 1.257 ಟಿಎಂಸಿ ನೀರು ಆವಿ ಆಗಲಿದೆ. ಇದರ ಜೊತೆಗೆ ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ ಬಿಟ್ಟು ಹೋಗಿದ್ದ 300 ಜನ ವಸತಿ ಪ್ರದೇಶಗಳಿಗೆ ಕುಡಿಯುವ ನೀರಿಗಾಗಿ 0.369 ಟಿಎಂಸಿ ನೀರು ಸೇರಿದಂತೆ ಒಟ್ಟು 7.616853 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.

ಪ್ರತಿ ವರ್ಷ ಸುಮಾರು 7.60 ಟಿಎಂಸಿ ನೀರು ಅಗತ್ಯವಿದೆ. ವಿಪರ್ಯಾಸ ಎಂದರೆ ಭದ್ರಾ ಮೇಲ್ದಂಡೆ ಯೋಜನೆ ಅಡಿ ಕೇವಲ 2 ಟಿಎಂಸಿ ನೀರನ್ನು ವಿವಿ ಸಾಗರಕ್ಕೆ ಹಂಚಿಕೆ ಮಾಡಲಾಗಿದೆ.

ಮತ್ತಷ್ಟು ನೀರಿಗೆ ಬೇಡಿಕೆ-
ವಾಣಿ ವಿಲಾಸ ಸಾಗರಕ್ಕೆ ನೀರಿನ ಹಂಚಿಕೆ ಅತ್ಯಾಲ್ಪ, ಆದರೆ ಬೇಡಿಕೆ ಮಾತ್ರ ಆಗಾದವಾಗಿದೆ. ಹಿರಿಯೂರು ತಾಲೂಕಿನ ಮೇಟಿಕುರ್ಕೆ ಸಮೀಪದ ರಾಷ್ಟ್ರೀಯ ಹೆದ್ದಾರಿ-4(48)ಕ್ಕೆ ಹೊಂದಿಕೊಂಡಂತಿರುವ ನಿರ್ಮಾಣ ಹಂತದ 1500 ಎಕರೆ ಪ್ರದೇಶದ ಮೇಟಿಕುರ್ಕೆ ಕೈಗಾರಿಕಾ ಹಬ್ ಗೆ, ಧರ್ಮಪುರ ಹೋಬಳಿಯ ಸುಮಾರು 15 ಕೆರೆಗಳಿಗೆ, ಈಗಾಗಲೇ ಜವನಗೊಂಡನಹಳ್ಳಿ, ಕಲ್ವಹಳ್ಳಿ ಭಾಗದ ಕೆರೆಗಳಿಗೆ ವಿವಿ ಸಾಗರದಿಂದ ನೀರು ಹರಿಸುವಂತೆ ರೈತರು ನಡೆಸುತ್ತಿರುವ ಹೋರಾಟ, ಧರ್ಮಪುರ ಹೋಬಳಿಯ ಹೊಸಹಳ್ಳಿ ಬ್ಯಾರೇಜ್ ಕಂ ಬ್ರಿಡ್ಜ್ ಮೂಲಕ ಪೈಪ್ ಮಾಡಿ 7 ಇತರೆ 2 ಸೇರಿ ಒಟ್ಟು 9 ಕೆರೆಗಳಿಗೆ ನೀರು ಹಂಚಿಕೆ ಮಾಡುವ ಅಗತ್ಯವಿದೆ.

ಹಾಗಾಗಿ ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಅಡಿ ಕನಿಷ್ಠ 10 ಟಿಎಂಸಿ ನೀರನ್ನು ಹಂಚಿಕೆ ಮಾಡುವಂತೆ ರೈತರು, ವಿವಿಧ ಹಳ್ಳಿಗಳ ಸಾರ್ವಜನಿಕರ ಬೇಡಿಕೆಯಾಗಿದೆ.

ಬರ ಪೀಡಿತ ಧರ್ಮಪುರ ಹೋಬಳಿಯ 15 ಕೆರೆಗಳು ಸೇರಿದಂತೆ ಹೊಸಳ್ಳಿ ಬ್ಯಾರೇಜ್ ಮೂಲಕ 7 ಕೆರೆಗಳಿಗೆ ನೀರು ಭರ್ತಿ ಮಾಡಿ ಅಂತರ್ಜಲ ವೃದ್ಧಿಸಬೇಕು. ವೇದಾವತಿ ಮತ್ತು ಸುವರ್ಣಮುಖಿ ನದಿಗೆ ನೀರು ಹರಿಸುವ ಮೂಲಕ ಚೆಕ್ ಡ್ಯಾಂಗಳನ್ನು ಭರ್ತಿ ಮಾಡಲಿ. ಇದರಿಂದ ರೈತರ ತೋಟಗಳು, ದನಕರು, ಕುರಿ ಮೇಕೆಗಳು ಸೇರಿದಂತೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ.
ಏಕಾಂತಪ್ಪ, ಚಿಲ್ಲಹಳ್ಳಿ, ಹಿರಿಯೂರು ತಾಲೂಕು.

Share This Article
error: Content is protected !!
";