ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರಂಗಭೂಮಿ ಕಲಾವಿದರ ಬದುಕು ಕಷ್ಟದಲ್ಲಿದೆ. ಒಪ್ಪತ್ತಿನ ಊಟ, ಚಪ್ಪಾಳೆ ಗಿಟ್ಟಿಸಿಕೊಳ್ಳುವುದಕ್ಕಾಗಿ ನಾಟಕಗಳನ್ನು ಪ್ರದರ್ಶಿಸುವಂತಾಗಿದೆ. ಸರ್ಕಾರ ಗಂಭೀರವಾಗಿ ಆಲೋಚಿಸಿ ನಾಟಕಕಾರರನ್ನು ಮೇಲೆಕ್ಕೆತ್ತುವ ಕೆಲಸ ಮಾಡಬೇಕಿದೆ ಎಂದು ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಮನವಿ ಮಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಅಂತ್ಯೋದಯ ಕಲ್ಚರಲ್ ಫೌಂಡೇಶನ್ ಚಿತ್ರದುರ್ಗ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಉಪನ್ಯಾಸ, ರಂಗ ಸನ್ಮಾನ, ರಂಗ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಜಗತ್ತೆ ಒಂದು ನಾಟಕ ರಂಗ. ಇಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಪಾತ್ರಧಾರಿಗಳು. ೨೦೦೨ ರಲ್ಲಿ ಗಿರೀಶ್ ಕಾರ್ನಾಡ್‌ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ
ರಂಗಭೂಮಿ ಕುರಿತು ಸಂದೇಶ ನೀಡಲು ಅವಕಾಶ ಸಿಕ್ಕಿತು. ಶೈಕ್ಷಣಿಕವಾಗಿಯೂ ರಂಗಭೂಮಿ ಬಗ್ಗೆ ಓದಬೇಕು. ಮನೋರಂಜನೆ, ಆಯಾಸ ಕಳೆದುಕೊಳ್ಳಲು ರಂಗಭೂಮಿ ಬೇಕು. ನಾಟಕ ಬದುಕಿನ ಒಂದು ಭಾಗ. ಮನಸ್ಸಿನ ಮೇಲೆ ಪರಿಣಾಮ ಬೀರಲಿದೆ. ಚಿತ್ರಮಂದಿರಗಳು ಕಣ್ಮರೆಯಾಗುತ್ತಿವೆ. ನಾಟಕಕಾರರ ಪರಿಸ್ಥಿತಿ ಕೆಟ್ಟದಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮೇಲೆ ಗುರುತರ ಜವಾಬ್ದಾರಿಯಿದೆ ಎಂದು ತಿಳಿಸಿದರು.
ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ಸರ್ಕಾರ ಹಾಗೂ ಪ್ರೇಕ್ಷಕರ ಮೇಲಿದೆ. ಮಾಶಾಸನಕ್ಕಾಗಿ ಕಲಾವಿದರು ಅಲೆದಾಡುತ್ತಿರುವುದನ್ನು ನೋಡುತ್ತಿದ್ದೇವೆ. ಬದುಕನ್ನು ಹಸನು ಮಾಡುವುದು ರಂಗಭೂಮಿ. ಬದುಕಿನ ಆಯಾಮವಾಗಿರುವ ರಂಗಭೂಮಿ ಕಲಾವಿದರ ಬದುಕೆ ಒಂದು ಸವಾಲು. ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೆ ಸೀಮಿತವಾಗಬಾರದು. ಸಾಂಸ್ಕೃತಿಕ ಜಗತ್ತಿನಲ್ಲಿ ವೀರರಾಗಬೇಕೆಂದು ಹೇಳಿದರು.
ದುರ್ಗದ ಸಿರಿ ಕಲಾ ಸಂಘದ ಅಧ್ಯಕ್ಷ ಮಹಂತರೆಡ್ಡಿ ರಂಗಭೂಮಿ ದಿನಾಚರಣೆ ಉದ್ಗಾಟಸಿ ಮಾತನಾಡುತ್ತ ಆಧುನಿಕ ಜಗತ್ತಿನಲ್ಲಿ ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಿದೆ. ಪ್ರೇಕ್ಷಕರು ಮನಸ್ಸು ಮಾಡಿದರೆ ತಿಂಗಳಿಗೊಂದು ನಾಟಕಗಳನ್ನು ಆಡಿಸಬಹುದು. ಆಗ ರಂಗಕಲಾವಿದರ ಬದುಕು ಸುಧಾರಣೆಯಾಗುತ್ತದೆ. ಚಳ್ಳಕೆರೆ ಭಾಗದಲ್ಲಿ ನಾಟಕಗಳು ಇನ್ನು ಜೀವಂತವಾಗಿವೆ. ರಂಗಭೂಮಿ ನಟರು ಚಿತ್ರನಟರಿಗಿಂತ ಶ್ರೇಷ್ಠರು. ರಂಗಭೂಮಿ ಎನ್ನುವುದು ಗಂಡು ಕಲೆಯಿದ್ದಂತೆ. ನಾವುಗಳು ಚಿಕ್ಕವರಿದ್ದಾಗ ರಾತ್ರಿಯಿಡಿ ನಾಟಕಗಳನ್ನು ನೋಡುತ್ತಿದ್ದೆವು. ಈಗ ಅಂತಹ ನಾಟಕಗಳು ಪ್ರದರ್ಶನಗೊಳ್ಳುವುದು ತುಂಬಾ ವಿರಳ ಎಂದು ನುಡಿದರು.
ರಂಗಭೂಮಿ ದಿನಾಚರಣೆ ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ ರಂಗಭೂಮಿ ಕಲಾವಿದ ಅಭಿನಯದಲ್ಲಿ ತಲ್ಲೀನನಾಗಬೇಕು. ಕಲಾವಿದ ಭಾವನಾತ್ಮಕ ಜೀವಿ. ಬಿ.ಇ.ಡಿ.ವಿದ್ಯಾರ್ಥಿಗಳು ರಂಗಶಿಕ್ಷಣ ತರಬೇತಿ ಪಡೆದುಕೊಳ್ಳುವುದು ಒಳ್ಳೆಯದು. ಆಳುವ ಸರ್ಕಾರಗಳು ರಂಗಭೂಮಿ ಕಲಾವಿದರುಗಳನ್ನು ಕಡೆಗಣಿಸುತ್ತಿರುವುದು ನೋವಿನ ಸಂಗತಿ. ಸಂಗೀತ, ಸಾಹಿತ್ಯ, ಕಲೆಗೆ ಎಲ್ಲರನ್ನು ತಲೆದೂಗಿಸುವ ಶಕ್ತಿಯಿದೆ. ಜಗತ್ತಿನಲ್ಲಿ ಅತಿ ಒಳ್ಳೆ ಶ್ರೇಷ್ಟ ನಟನೆಂದರೆ ಶಿಕ್ಷಕ ಎಂದು ಹೇಳಿದರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ ರಂಗಕಲೆಗೆ ತನ್ನದೆ ಆದ ಮಹತ್ವವಿದೆ. ಬಿ.ಇ.ಡಿ. ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ಬೇಕು. ಏಕೆಂದರೆ ಶಿಕ್ಷಕ ಸಕಲ ಕಲಾ ವಲ್ಲಭನಾಗಿರಬೇಕು. ರಂಗ ದಿನಾಚರಣೆಯ ಪ್ರಾಮುಖ್ಯತೆಯನ್ನು ಪ್ರಶಿಕ್ಷಣಾರ್ಥಿಗಳು ತಿಳಿದುಕೊಳ್ಳಬೇಕು. ಹವ್ಯಾಸಿ, ವೃತ್ತಿ ರಂಗಭೂಮಿಯಿದೆ. ಸಿನಿಮಾ ಟಿ.ವಿ.ಗಳಿಂದ ನಾಟಕಗಳು ಮರೆಯಾಗುತ್ತಿವೆ. ನಾಟಕಗಳಲ್ಲಿ ಕಲೆಯನ್ನು ನೇರವಾಗಿ ಪ್ರದರ್ಶಿಬಹುದು ಎಂದರು.
ನಿವೃತ್ತ ಡಿ.ವೈ.ಎಸ್ಪಿ. ಅಬ್ದುಲ್‌ರೆಹಮಾನ್, ಗಾಯಕ ಡಿ.ಓ.ಮುರಾರ್ಜಿ ವೇದಿಕೆಯಲ್ಲಿದ್ದರು. ರಂಗ ಸಂಗೀತ ನಿರ್ದೇಶಕರುಗಳಾದ ಶಿವಧರ್ಮ ಚಂದ್ರಣ್ಣ, ಡಿ.ಗಂಗಪ್ಪ, ಜಿ.ಪಿ.ಸುರೇಶ್. ರಂಗಭೂಮಿ ಕಲಾವಿದೆ ವಿ.ಲೇಖಪ್ರಿಯ ಇವರುಗಳನ್ನು ಸನ್ಮಾನಿಸಲಾಯಿತು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಹೆಚ್.ಎನ್.ಶಿವಕುಮಾರ್, ನಿವೃತ್ತ ಪ್ರಾಚಾರ್ಯರಾದ ಶಾಂತಯ್ಯ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.