ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭೀಕರ ಬರಗಾಲವಲ್ಲ, ಹಿಂಗಾರು ಹಂಗಾಮಿನ ಮಳೆಗಾಲ ಇನ್ನೂ ಪೂರ್ಣಗೊಂಡಿಲ್ಲ, ಜೀವನದಿ ಹರಿವು ಕುಸಿದಿಲ್ಲ, ವಿತರಣಾ ನಾಲೆಗಳಲ್ಲಿ ನೀರು ಹರಿಯುವುದಿಲ್ಲ ನಿಂತಿಲ್ಲ, ಕೆರೆ- ಕಟ್ಟೆಗಳಲ್ಲಿ ನೀರಿಲ್ಲ ಎನ್ನುವಂತಿಲ್ಲ. ಅಂತರ್ಜಲ ಬತ್ತಿ ಹೋಗಿ ಬೋರ್‌ವೆಲ್‌ಗಳಲ್ಲಿ ನೀರು ಖಾಲಿಯಾಗಿದೆ ಎನ್ನುವಂತಿಲ್ಲ.
ವಾಣಿ ವಿಲಾಸ ಸಾಗರ ಡ್ಯಾಂ ಭರ್ತಿಯಾಗಿ ಪ್ರತಿನಿತ್ಯ ಎರಡು-ಮೂರು ಸಾವಿರ ಕ್ಯೂಸೆಕ್ ನೀರು ಹರಿದು ಹಳ್ಳ ಸೇರುತ್ತಿದೆ. ಸೂಳಕೆರೆ ಕೂಡ ಭರ್ತಿಯಾಗಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲು ಅನೇಕ ಕಾರಣಗಳಿರುತ್ತವೆ. ಮುಖ್ಯವಾಗಿ ಅತಿಯಾದ ಬೇಡಿಕೆ, ಕಡಿಮೆ ಮಳೆಯಿಂದಾಗಿ ಜಲಾಶಯಗಳ ನೀರಿನ ಕುಸಿತ ಇದ್ಯಾವುದು ಕಾಣಿಸಿಕೊಳ್ಳುತ್ತಿಲ್ಲವಾದರೂ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಇದು ನಗರಸಭೆ ಮತ್ತು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯ ಲೋಪ, ಉದಾಸೀನತೆಯಿಂದಾಗಿ ಕಳೆದ ಒಂದು ತಿಂಗಳಿಂದ ಚಿತ್ರದುರ್ಗದ ಅರ್ಧ ನಗರಕ್ಕೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಕುಡಿಯುವ ನೀರಿಗಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ. ಆದರೆ ಆಡಳಿತ ರೂಢರಿಗೆ ಈ ಸಮಸ್ಯೆ ಕಾಡುತ್ತಿಲ್ಲ. ಬುದ್ದಿವಂತ ನಗರಸಭೆ ಅಧಿಕಾರಿಗಳು ಎಚ್ಚರವಹಿಸಿ ತುರ್ತು ರೂಪದಲ್ಲಿ ಟ್ಯಾಂಕರ್ ಮೂಲಕ ಒಂದಿಷ್ಟು ಮಂದಿಗೆ ನಗರ ಪ್ರದೇಶಗಳಲ್ಲೇ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ.

ನೀರಿನ ಮೂಲಗಳ ನಿರ್ವಹಣೆಯ ಕೊರತೆಯಿಂದಾಗಿ ಬಿರು ಬೇಸಿಗೆ ಆರಂಭಕ್ಕೆ ಮುನ್ನವೇ ಕುಡಿಯುವ ನೀರಿಗೆ ಬರ ಎದುರಾಗಿದೆ. ನೀರಿನ ಹಾಹಾಕಾರ ನೀಗಿಸಲು ನಗರಸಭೆ ಆಡಳಿತ ಸಿದ್ಧತೆ ನಡೆಸಿದ್ದು, ನೀರಿನ ಸಮಸ್ಯೆ ನಿವಾರಣೆಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.
ಚಿತ್ರದುರ್ಗ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲು ಪ್ರಮುಖ ಕಾರಣ ಸೂಳೆಕೆರೆ ಬಳಿ ಇರುವ ಒಂದು ವಿದ್ಯುತ್ ಪರಿವರ್ತಕ ಸುಟ್ಟು ಹೋಗಿದ್ದು ಆದರಿಂದಾಗಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ.
ಯಾಕೆ ಕುಡಿಯುವ ನೀರು ಬಂದಿಲ್ಲ ಎಂದು ಪ್ರಶ್ನಿಸುವಂತವರಿಗೆ ಮಾತ್ರ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿರುವುದು ವಿಪರ್ಯಾಸವಾಗಿದೆ. ಬೇಡಿಗೆ ಇರುವ ಜನ ಸಾಮಾನ್ಯರಿಗೆ ಕುಡಿಯುವ ನೀರು ಮರೀಚಿಕೆಯಾಗಿದೆ.
ನೀರು ಪೂರೈಕೆಯ ಹೊಣೆ ಹೊತ್ತಿರುವ ನಗರಸಭೆಯ ಇಂಜಿನಿಯರ್ ಒಬ್ಬರು ಊರಿನ ಉಸಾಬರಿ ಬೇಡ, ನಿಮಗೆ ನೀರು ಬರುತ್ತೋ ಇಲ್ಲವೋ ತಿಳಿಸಿ ವ್ಯವಸ್ಥೆ ಮಾಡುತ್ತೇನೆ ಎಂದು ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ.
ಅಲ್ಲದೆ ಸಮಸ್ಯೆ ಇರುವ ಕಡೆ ತುರ್ತಾಗಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಪೂರೈಕೆಗೆ ಕ್ರಮವಹಿಸಲಾಗಿದೆ. ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗೃತೆ ವಹಿಸಿದ್ದೇವೆ ಎನ್ನುವ ಮಾತುಗಳು ನಗರಸಭೆ ಅಧಿಕಾರಿಗಳಿಂದ ಬರುತ್ತಿದೆ.
ಎಲ್ಲೆಲ್ಲಿ ನೀರು ಪೂರೈಕೆಯಿಲ್ಲ-
ಚಿತ್ರದುರ್ಗ ನಗರದ ಹೃದಯ ಭಾಗವಾದ ಜಿಲ್ಲಾ ಆಸ್ಪತ್ರೆ, ಜಿಲ್ಲಾಧಿಕಾರಿಗಳ ಕಚೇರಿ, ವಸತಿ ಪ್ರದೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವಸತಿ ಮತ್ತು ಕಚೇರಿ ಪ್ರದೇಶ, ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಇವರ ವಾಸದ ಮನೆ ಲೈನ್, ಇದೇ ಲೈನ್ ನಲ್ಲಿ ಜಿಲ್ಲಾ ನ್ಯಾಯಾಧೀಶರ ವಸತಿ ಕೂಡ ಇದ್ದೂ ಅಲ್ಲೂ ನೀರು ಪೂರೈಕೆ ಆಗುತ್ತಿಲ್ಲ, ಜಿಪಂ ಸಿಇಒ, ಉಪವಿಭಾಗಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ವಾಸಿಸುವ ಮನೆ ಮತ್ತು ಬೀದಿಗಳು, ತಿಪ್ಪಜ್ಜಿ ಸರ್ಕಲ್, ತುರುವನೂರು ರಸ್ತೆಯ ವಾಸವಿ ಲ್ಯಾಬ್ ಸುತ್ತ ಮುತ್ತ, ಡಿಪೋ ರಸ್ತೆ, ಚರ್ಚ್ ಹಿಂಭಾಗ, ಜಿಲ್ಲಾಧಿಕಾರಿಗಳ ವೃತ್ತದ ಸುತ್ತ ಮುತ್ತಲ ಪ್ರದೇಶ ಸೇರಿದಂತೆ ಇಡೀ ಹೃದಯ ಭಾಗದಲ್ಲಿ ಕಳೆದ ಒಂದು ತಿಂಗಳಿಂದ ಸೂಳೆಕೆರೆ ಅಥವಾ ವಾಣಿ ವಿಲಾಸ ಸಾಗರದ ನೀರು ಪೂರೈಕೆಯಾಗಿಲ್ಲ ಎನ್ನುತ್ತಾರೆ ಜನ ಸಾಮಾನ್ಯರು.
ಬುದ್ದಿವಂತ ನಗರಸಭೆ-
ಕುಡಿಯುವ ನೀರು ಪೂರೈಕೆಯ ಹೊಣೆ ಹೊತ್ತಿರುವ ನಗರಸಭೆ ಇಂಜಿನಿಯರ್ ಮತ್ತು ಆಯುಕ್ತರು ಬುದ್ದವಂತ ನಡೆ ಪ್ರದರ್ಶಿಸಿದ್ದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲ ಪಂಚಾಯಿತಿ ಮುಖ್ಯಕಾರ್ಯನಿರ್ವಾಣಾಧಿಕಾರಿಗಳು ಸೇರಿದಂತೆ ಮತ್ತಿತರ ಆಡಳಿತ ರೂಢ ಅಧಿಕಾರಿಗಳಿಗೆ ಯಾವುದೇ ನೀರಿನ ಕೊರತೆ ಕಾಣದಂತೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಅಲ್ಲದೆ ಪ್ರಶ್ನೆ ಮಾಡುವಂತ ಜನ ಸಾಮಾನ್ಯರ ಬೀದಿಗೂ ಆಗೊಮ್ಮೆ ಈಗೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗುತ್ತದೆ. ಹೋಟೆಲ್ ಗಳು, ಜನ ಸಾಮಾನ್ಯರ ವಸತಿ ಪ್ರದೇಶಗಳಿಗೆ ಟ್ಯಾಂಕರ್ ನೀರಾಗಲಿ, ಕುಡಿಯುವ ನೀರಾಗಲಿ ಮರೀಚಿಕೆಯಾಗಿದೆ.
ವಿದ್ಯುತ್ ಪರಿವರ್ತಕ-
ಸೂಳೆಕೆರೆಯ ನೀರು ಪೂರೈಕೆಗಾಗಿ ಅಳವಡಿಸಲಾಗಿರುವ ಮತ್ತೊಂದು ವಿದ್ಯುತ್ ಪರಿವರ್ತಕ ಕೆಲಸ ಮಾಡುತ್ತಿದೆ. ಆದರೆ ಈ ಒಂದು ವಿದ್ಯುತ್ ಪರಿವರ್ತಕದಿಂದ ಲಿಫ್ಟ್ ಮಾಡುವ ನೀರು ಚಿತ್ರದುರ್ಗ ನಗರಕ್ಕೆ ಸಾಕಾಗುವುದಿಲ್ಲ. ಸೂಳೆಕೆರೆ ನೀರಿನ ಟ್ಯಾಂಕ್ ಬಳಿ ಇರುವ ಎಲ್ಲ ವಿದ್ಯುತ್ ಪರಿವರ್ತಕಗಳು ಸುಸ್ಥಿತಿಯಲ್ಲಿದ್ದು ಕೆಲಸ ಮಾಡಿದರೆ ಮಾತ್ರ ಎಲ್ಲರಿಗೂ ನೀರು ಸರಬರಾಜು ಮಾಡಲು ಸಾಧ್ಯ.
ಬರುವ ಸ್ವಲ್ಪ ನೀರಿಗೂ ಅಡ್ಡಿ, ಆತಂಕ-
ಸೂಳೆಕೆರೆಯಿಂದ ಪಂಪ್ ಆಗಿ ಬರುವ ನೀರಿಗೂ ಸಾಕಷ್ಟು ಅಡ್ಡಿ ಆತಂಕಗಳು ಎದುರಾಗಿವೆ. ಸೂಳೆಕೆರೆ-ಚಿತ್ರದುರ್ಗ ಮಾರ್ಗ ಮಧ್ಯದದ ಕಂದವಾಡಿ, ಬಿ ದುರ್ಗ, ಭೀಮಸಮುದ್ರ, ಹಿರೇಗುಂಟನೂರು, ಮಾನಂಗಿ, ಮಾಳಪ್ಪನಹಟ್ಟಿ, ಚೇಳುಗುಡ್ಡ, ಕನಕ ಸರ್ಕಲ್ ಬಳಿ ಪೈಪ್ ಒಪನ್ ಮಾಡಿ ನೀರು ಬಿಟ್ಟುಕೊಳ್ಳುತ್ತಿರುವುದರಿಂದ ಎತ್ತರದ ಪ್ರದೇಶಗಳಿಗೆ ನೀರು ಏರುವುದಿಲ್ಲ, ತಗ್ಗು ಪ್ರದೇಶಗಳಿಗೆ ಮಾತ್ರ ನೀರು ಹರಿಯಲಿದೆ. ಈ ಎಲ್ಲ ಅಡೆ ತಡೆಗಳನ್ನು ಮೀರಿ ಬರುವ ನೀರು ದೊಡ್ಡಪೇಟೆ, ಚಿಕ್ಕಪೇಟೆ, ಹೊರಪೇಟೆಗೆ ಸ್ವಲ್ಪ ನೀರು ಬರಲಿದೆ. ಅಲ್ಲೂ ಕೂಡ ಅಗತ್ಯ ಇರುವಷ್ಟು ನೀರು ಪೂರೈಕೆಯಾಗುತ್ತಿಲ್ಲ.
ಇನ್ನೂ ನಿತ್ಯ ಸಾವಿರಾರು ರೋಗಿಗಳು ಬಂದು ಹೋಗುವ ಮತ್ತು ಒಳ ರೋಗಿಗಳಾಗಿ ದಾಖಲಾಗಿರುವವರ ಪರಿಸ್ಥಿತಿ ಹೇಳುವಂತಿಲ್ಲ. ಸೋರಿಕೆ ನೀರಿಗೆ ಪಂಪ್ ಕೂರಿಸಿದ್ದು ಆ ನೀರನ್ನು ಆಸ್ಪತ್ರೆಗೆ ಲಿಫ್ಟ್ ಮಾಡಿಕೊಳ್ಳಲಾಗುತ್ತಿದೆ.
ನಗರಸಭೆ ಪೌರಾಯುಕ್ತೆ ಲಕ್ಷ್ಮೀ, ಜೂನಿಯರ್ ಇಂಜಿನಿಯರ್ ಆರ್.ಕೆ.ಮುನಿಸ್ವಾಮಿ ಇವರನ್ನು ಪತ್ರಿಕೆ ಸಂಪರ್ಕಿಸುವ ಕೆಲಸ ಮಾಡಿತು. ಆದರೆ ಅವರು ಫೋನ್ ರಿಸೀವ್ ಮಾಡಿಯೂ ಮಾತನಾಡದೆ ಸಮಸ್ಯೆಯಿಂದ ನುಣುಚಿಕೊಳ್ಳುವ ಕೆಲಸ ಮಾಡಿದರು.

