ಚಂದ್ರವಳ್ಳಿ ನ್ಯೂಸ್, ಉಡುಪಿ :
ಕುಟುಂಬ ಮತ್ತು ಸಾಮಾಜಿಕವಾಗಿ ಬದುಕುತ್ತಿರುವ ಯುವಕರು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಬೇಕು. ಬದುಕಿನ ಜಂಜಾಟಗಳಿಗೆ ಮನಸೋಲದೆ ಸಾಧನೆಯ ಗುರಿಯತ್ತ ಚಿತ್ತವಿರಬೇಕು ಎಂದು ಉದ್ಯಮಿ ರಂಜನ್ ಕಲ್ಕೂರ ಅಭಿಪ್ರಾಯಪಟ್ಟರು.
ಅವರು, ಕೌಟುಂಬಿಕ ಹಾಗೂ ಸಾಮಾಜಿಕ ಹಿಂಸೆ ಮತ್ತು ದೌರ್ಜನ್ಯದ ವಿರುದ್ಧ ಜನಜಾಗೃತಿ ಮತ್ತು ಎಚ್ಚರಿಕೆ ಮೂಡಿಸುವ ಸಲುವಾಗಿ ವನಸುಮ ಟ್ರಸ್ಟ್ ಕಟಪಾಡಿ ವತಿಯಿಂದ ಜೆಸಿಐ ಕಟಪಾಡಿ ಮತ್ತು ಜೆಸಿಐ ಉಡುಪಿ ಸಿಟಿ ಸಹಯೋಗದಲ್ಲಿ ಯುವಕರಾದ ದೃಶಾ ಕೊಡಗು ಮತ್ತು ಉಜ್ವಲ್ ಕಾಮತ್ ಇವರು 12 ದಿನಗಳ ಕಾಲ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ಒಟ್ಟು ಮೂರು ಸಾವಿರ ಕಿಲೋಮೀಟರ್ ಬೈಕ್ ಸಂಚಾರವು ಇಂಡಿಯ ಬುಕ್ ಆಫ್ ರೆಕಾಡ್೯ ಸೇರ್ಪಡೆಯಾದ ಪ್ರಯುಕ್ತ ನಗರದ ಶಾರದಾ ಇಂಟರ್ ನ್ಯಾಷನಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಕಾಪು ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಉತ್ತಮ ಸಂವೇದನೆ, ಜೀವನ ಮೌಲ್ಯಗಳು ಹಾಗೂ ಸ್ಪೂರ್ತಿದಾಯಕ ನುಡಿಗಳು ಪ್ರತಿಯೊಂದೂ ಕುಟುಂಬಗಳಿಗೆ ಅವಶ್ಯಕತೆಯಾಗಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ಡಾ. ವಿಜಯೇಂದ್ರ ವಸಂತ್ ಕೌಟುಂಬಿಕ ಕಲಹಗಳು, ಸಾಮಾಜಿಕ ಪಿಡುಗುಗಳು ಜನಜೀವನ ಅಸ್ತವ್ಯಸ್ತಗೊಳಿಸುತ್ತವೆ. ಅವರವರ ಜವಾಬ್ದಾರಿಗಳನ್ನು ಅರಿತು ಸಮಸ್ಯೆಗಳನ್ನು ನಿವಾರಿಸಿಕೊಂಡರೆ ಮಾತ್ರ ಕುಟುಂಬ ಮತ್ತು ಸಾಮಾಜಿಕವಾಗಿ ಬದುಕು ಸುಗಮವಾಗುತ್ತದೆ. ಯುವಕರು ಮಾದಕ ವ್ಯಸನಗಳ ದುಶ್ಚಟಗಳಿಗೆ ಬಲಿಯಾಗದಂತೆ ಸಾಹಸ ಪ್ರವೃತ್ತಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು. ಅಸಾಧಾರಣ ಪ್ರತಿಭೆ ದೃಶ ಕೊಡಗು ಸಾಧನೆಗಳನ್ನು ಅನಾವರಣ ಮಾಡಿದರು.
ಅಂತರಾಷ್ಟ್ರೀಯ ಉತ್ತಮ ಬಾಲನಟ ಪ್ರಶಸ್ತಿ ಪುರಸ್ಕೃತ, ಚಲನಚಿತ್ರ ನಟ ಹಾಗೂ ಬೈಕ್ ಸಂಚಾರದಲ್ಲಿ ಸಾಧನೆ ಮಾಡಿದ ದೃಶಾ ಕೊಡಗು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಭೇಟಿ ನೀಡಿದ ಮೂರೂ ರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿ ಊರುಗಳಲ್ಲಿ ನಮ್ಮ ಯುವಕರೇ ಇವರು ಎಂದು ಗೌರವಿಸಿ ಶುಭ ಹಾರೈಸಿದರು.
ನನ್ನೊಟ್ಟಿಗೆ ಗೆಳೆಯ ಉಜ್ವಲ್ ಕಾಮತ್ ಇದ್ದರು. ಹೆಚ್ಚಿನ ಸಾಧನೆಗಾಗಿ ಪೋಷಕರು ಮತ್ತು ಸಾಮಾಜಿಕ ವಲಯದಲ್ಲಿರುವ ಸಾರ್ವಜನಿಕರು ನಮ್ಮಂತಹ ಯುವಕರಲ್ಲಿ ಪ್ರೋತ್ಸಾಹದ ನುಡಿಗಳನ್ನು ತುಂಬಬೇಕು. ಉತ್ತಮ ಆರೋಗ್ಯ, ಸಾಧನೆಯತ್ತ ಯುವಕರ ಚಿತ್ತವಿರಬೇಕು. ಮತ್ತು ಕಲಿಕೆಯತ್ತ ಆಸಕ್ತಿ ಮೂಡಿಸಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಚಲನಚಿತ್ರ ನಟ ಸ್ವರಾಜ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದಿನಕರ್ ಹೇರೂರು, ಹಿರಿಯ ಜೇಸಿ ಡೆನಿಸ್ ಡಿಸೋಜ, ಜೇಸಿ ವಲಯ ನಿಕಟ ಪೂರ್ವಧ್ಯಕ್ಷ ಅಭಿಲಾಷ್, ವಲಯಧಿಕಾರಿ ಸ್ವರಾಜ್,
ವನಸುಮ ವೇದಿಕೆ ಅಧ್ಯಕ್ಷ ವಿನಯ್ ಆಚಾರ್ಯ, ಹಿರಿಯ ರಂಗ ನಿರ್ದೇಶಕ ಬಾಸುಮ ಕೊಡಗು, ಅಸಾಮಾನ್ಯ ಸಾಧಕಿ ಆದಿಸ್ವರೂಪ, ಜೆಸಿಐ ಸಿಟಿ ಅಧ್ಯಕ್ಷೆ ಪಲ್ಲವಿ ಕೊಡಗು, ಚಿತ್ರದುರ್ಗ ಜಿಲ್ಲೆಯ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ ಹಾಗೂ ಕಟ್ಟೆಮಾರ್ ಸಿನಿಮಾ ತಂಡದ ನಿರ್ದೇಶಕರು ಮತ್ತು ಕಲಾವಿದರು ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಜೆಸಿಐ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

