ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಲಾರಿಯನ್ನು ನಿಲುಗಡೆ ಮಾಡುವಂತೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ನೀಡಿದ ಸೂಚನೆ ನಿರ್ಲಕ್ಷಿಸಿ ಲಾರಿ ನಿಲ್ಲಿಸಲು ಪೊಲೀಸ್ ಸಿಬ್ಬಂದಿ ಮೇಲೆ ಚಾಲಕ ಲಾರಿ ಹತ್ತಿಸಿದ ಪರಿಣಾಮ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ತಾಲೂಕಿನ ಹೆಬ್ಬಾಳ ಟೋಲ್ ಗೇಟ್ ಬಳಿ ಜರುಗಿದೆ.
ದಾವಣಗೆರೆಯ ಡಿಎಆರ್ ವಿಭಾಗದ ಪೊಲೀಸ್ ರಾಮಪ್ಪ ಪೂಜಾರ್ ದಾರುಣವಾಗಿ ಸಾವನ್ನಪ್ಪಿದ ಸಿಬ್ಬಂದಿ.
ಹೆಬ್ಬಾಳ ಟೋಲ್ ಗೇಟ್ ಬಳಿ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್ ಸಂಚಾರಿ ಪೊಲೀಸರೊಂದಿಗೆ ಲಾರಿ ನಿಲ್ಲಿಸಲು ಯತ್ನಿಸಿದ್ದಾರೆ. ಈ ವೇಳೆ, ಅತಿ ವೇಗದಲ್ಲಿ ಇದ್ದ ಲಾರಿ ಸಿಬ್ಬಂದಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ, ಚಾಲಕನನ್ನು ಹಿಡಿಯವ ಪ್ರಯತ್ನ ನಡೆಸಲಾಯಿತಾದರೂ ಆತ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಐಜಿಪಿ ಹಾಗೂ ಎಸ್ಪಿ ಭೇಟಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಟೋಲ್ ಗೇಟ್ ಬಳಿ ಯಾವುದೇ ಸಿಸಿಟಿವಿ ಕ್ಯಾಮರಾ ಅಳವಡಿಸದೇ ಇರುವ ಹಿನ್ನಲೆ ಎಸ್ಪಿ ಅಲ್ಲಿನ ಟೋಲ್ ಆಡಳಿತ ಹಾಗೂ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಕೂಡ ಜರುಗಿದೆ.
ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಮೃತರ ದೇಹ ಇಡಲಾಗಿದ್ದು, ಸ್ಥಳಕ್ಕೆ ಐಜಿಪಿ ರವಿಕಾಂತೇ ಗೌಡ ಅವರು ಭೇಟಿ ನೀಡಿದರು. ಮೃತ ಪೊಲೀಸ್ ಸಿಬ್ಬಂದಿಯ ಕುಟುಂಬಕ್ಕೆ ಧೈರ್ಯ ನೀಡಿ ಸಾಂತ್ವನ ಹೇಳಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಸಿಸಿಟಿವಿ ಕ್ಯಾಮರಾ ಅಳವಡಿಸದೆ ಇರುವುದರಿಂದ ಸಮಸ್ಯೆ ಆಗಿದೆ. ಈ ಕುರಿತು ಪರಿಶೀಲನೆ ನಡೆಸಿ ಮಾಹಿತಿ ಕೊಡುವಂತೆ ಎಚ್ಚರಿಕೆ ನೀಡಲಾಗಿದೆ ಎಂದು ಎಸ್ಪಿ ಉಮಾಪ್ರಶಾಂತ್ ತಿಳಿಸಿದರು.