ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿರುವುದು ರಾಜ್ಯವೇ ತಲೆತಗ್ಗಿಸುವ ಘಟನೆಯಾಗಿದೆ ಎಂದು ಜೆಡಿಎಸ್ ದೂರಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಗುಪ್ತಚರ ಇಲಾಖೆ ಯಾವ ರೀತಿ ಕೆಲಸ ಮಾಡುತ್ತಿದೆ? ಇಂಟಲಿಜೆನ್ಸ್ ನಿಷ್ಕ್ರೀಯವಾಗಿರುವುದಕ್ಕೆ ಈ ಡ್ರಗ್ಸ್ ತಯಾರಿಕಾ ಕಾರ್ಖಾನೆಯ ಬಗ್ಗೆ ಕಿಂಚಿತ್ತು ಸುಳಿವು ಸಹ ಇಲ್ಲದಿರುವುದು ಸೂಕ್ತ ನಿದರ್ಶನ.
ರಾಜ್ಯದಲ್ಲಿ ಡ್ರಗ್ಸ್ ಧಂದೆ ಎಗ್ಗಿಲ್ಲದೇ ನಡೆಯುತ್ತಿದ್ದು, ಮಾದಕ ವಸ್ತುಗಳ ಹಾವಳಿ ಯುವಜನತೆಯ ಬದುಕನ್ನು ಸರ್ವನಾಶ ಮಾಡುತ್ತಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಕೆಲ ದಿನಗಳ ಹಿಂದಷ್ಟೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಾಂಗ್ರೆಸ್ ಕಾರ್ಯಕರ್ತನನ್ನು ಮಹಾರಾಷ್ಟ್ರದ ಮುಂಬೈನಲ್ಲಿ ಮಾದಕ ದ್ರವ್ಯ ಸಾಗಾಟ ಆರೋಪದಲ್ಲಿ ಬಂಧಿಸಲಾಗಿತ್ತು.
ಈ ಘಟನೆ ಮಾಸುವ ಮುನ್ನವೇ ಮೈಸೂರಿನಲ್ಲಿ ಡ್ರಗ್ಸ್ ತಯಾರಿಕಾ ಕಾರ್ಖಾನೆ ಮೇಲೆ ಮಹಾರಾಷ್ಟ್ರ ಪೊಲೀಸರು ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ.
ರಾಜ್ಯದಲ್ಲಿ ಗುಪ್ತಚರ ಇಲಾಖೆ ಜೊತೆಗೆ ಗೃಹ ಇಲಾಖೆಯೂ ಸಂಪೂರ್ಣ ಗಾಢನಿದ್ದೆಗೆ ಜಾರಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಸಮರ್ಥ ಗೃಹ ಸಚಿವ ಡಾ.ಜಿ ಪರಮೇಶ್ವರ ಅವರೇ ಮೊದಲು ರಾಜೀನಾಮೆ ಕೊಟ್ಟು ನಿಮ್ಮ ನೈತಿಕತೆ ಉಳಿಸಿಕೊಳ್ಳಿ ಎಂದು ಜೆಡಿಎಸ್ ತಾಕೀತು ಮಾಡಿದೆ.

