ಮಾದಕ ದ್ರವ್ಯ ಸಮಾಜಕ್ಕಂಟಿದ ಕ್ಯಾನ್ಸರ್‌

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾದಕ ದ್ರವ್ಯ ಸಮಾಜಕ್ಕಂಟಿದ ಕ್ಯಾನ್ಸರ್‌. ಇದನ್ನು ಬುಡಸಮೇತ ಕಿತ್ತೆಸೆಯದೆ ಇದ್ದರೆ ವ್ಯಸನಿಗಳ ಬದುಕು – ಭವಿಷ್ಯವನ್ನು ಕಸಿಯುವುದು ಮಾತ್ರವಲ್ಲ, ಅನೈತಿಕ, ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರೇರಣೆಯನ್ನು ನೀಡುತ್ತದೆ. ಆ ಮೂಲಕ ಶಾಂತಿ, ಸುವ್ಯವಸ್ಥೆ, ಸಾರ್ವಜನಿಕರ ನೆಮ್ಮದಿಗೆ ಮಾರಕವಾಗಿದೆ. ಈ ಕಾರಣಕ್ಕಾಗಿ ಡ್ರಗ್ಸ್ ಮಾರಾಟ ಅಥವಾ ಸೇವನೆ ಕಂಡುಬಂದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಡ್ರಗ್ಸ್ ಮುಕ್ತ ಸಮಾಜಕ್ಕಾಗಿ ನಾವು ಇನ್ನಿಲ್ಲದಂತೆ ಶ್ರಮಿಸುತ್ತಿದ್ದೇವೆ. ಮಾದಕ ವಸ್ತುಗಳ ಪೆಡ್ಲರ್‌ಗಳಿಗೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ಸೇರಿದಂತೆ ಈಗಿರುವ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲು ನಿರ್ಧಾರ ಕೈಗೊಳ್ಳಲಾಗಿದೆ.

- Advertisement - 

ಮಾದಕ ವಸ್ತುಗಳ ಹಾವಳಿ ಸಂಪೂರ್ಣ ಮಟ್ಟ ಹಾಕಲು ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ ಎಂದು ಸಿಎಂ ಹೇಳಿದರು.

ಶಾಲೆ, ಕಾಲೇಜುಗಳಲ್ಲಿ, ವಸತಿ ಶಾಲೆಗಳಲ್ಲಿ ಈ ಕುರಿತು ಹೆಚ್ಚಿನ ನಿಗಾ ವಹಿಸಲು ಸ್ಟೂಡೆಂಟ್ ಪೊಲೀಸಿಂಗ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಎನ್‌ಸಿಸಿ, ಎನ್‌ಎಸ್‌ಎಸ್‌ ಘಟಕಗಳನ್ನು ಈ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ.

- Advertisement - 

ಔಷಧಿ ಮಳಿಗೆಗಳಲ್ಲಿ ಅನಧಿಕೃತವಾಗಿ ಸಿಂಥೆಟಿಕ್ ಡ್ರಗ್ಸ್, ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್‌ಗಳ ಮಾರಾಟವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾದವರ ಪರವಾನಗಿಯನ್ನು ರದ್ದುಪಡಿಸಲು ಕ್ರಮ ವಹಿಸಲಾಗಿದೆ.

ಮಾದಕ ದ್ರವ್ಯದ ವಿರುದ್ಧದ ಈ ಹೋರಾಟವು ಸಾಂಸ್ಥಿಕ ಹೊಣೆಗಾರಿಕೆಯನ್ನು ಮೀರಿ ಸಮುದಾಯಿಕ ಪ್ರಯತ್ನವಾಗಲಿ. ಮಾದಕ ದ್ರವ್ಯಮುಕ್ತ ಸಮಾಜ ನಿರ್ಮಾಣದ ಸಂಕಲ್ಪ ನಮ್ಮದು, ಸಹಕಾರ ನಿಮ್ಮದಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೋರಿದರು.

 

Share This Article
error: Content is protected !!
";