ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಂಧದ ನಾಡು ಎಂಬ ಪ್ರಖ್ಯಾತಿ ಹೊಂದಿದ್ದ ಕರುನಾಡನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಡ್ರಗ್ಸ್ ನಶೆಗೆ ತಳ್ಳುತ್ತಿದೆ. ರಾಜ್ಯದಲ್ಲಿ ಪಂಜಾಬ್ ಮಾಡೆಲ್ ಅನ್ನು ಸಿದ್ದರಾಮಯ್ಯ ಸರ್ಕಾರ ಅನಧಿಕೃತವಾಗಿ ಜಾರಿಗೆ ತರುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡ್ರಗ್ಸ್ ಪ್ರಕರಣದಲ್ಲಿ ಹೊರ ರಾಜ್ಯದಲ್ಲಿ ಬಂಧನವಾದ ಬೆನ್ನಲ್ಲೇ ರಾಜ್ಯದಲ್ಲಿ ಡ್ರಗ್ಸ್ ಫ್ಯಾಕ್ಟರಿ ಬೆಳಕಿಗೆ ಬಂದಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರಿ ಪ್ರಮಾಣದ ಎಂಡಿಎಂಎನ್ನು ಡ್ರಗ್ಸ್ ತಯಾರಿಕಾ ಘಟಕದಲ್ಲಿ ವಶಕ್ಕೆ ಪಡೆಯಲಾಗಿದೆ. ದುರಂತದ ಸಂಗತಿ ಏನೆಂದರೆ ಈ ಜಾಲವನ್ನು ಬೇಧಿಸಿದ್ದು ಮಹಾರಾಷ್ಟ್ರ ಪೊಲೀಸ್ ಇಲಾಖೆ! ಎಂದು ಬಿಜೆಪಿ ಚಾಟಿ ಬೀಸಿದೆ.
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ನಿಷ್ಕ್ರಿಯತೆಯಿಂದಲೇ ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಮ್ಮ ರಾಜ್ಯದಲ್ಲಿದ್ದ ಈ ಡ್ರಗ್ಸ್ ಫ್ಯಾಕ್ಟರಿಯನ್ನು ನಮ್ಮ ಪೊಲೀಸ್ ಇಲಾಖೆ ಪತ್ತೆಹಚ್ಚಲು ವಿಫಲವಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಸಚಿವರು ಉತ್ತರಿಸಬೇಕು. ಕಾಂಗ್ರೆಸ್ ಸಚಿವರ, ಆಪ್ತರ ಬೆಂಬಲದಿಂದಲೇ ಡ್ರಗ್ಸ್ ದಂಧೆ ಲೀಲಾಜಾಲವಾಗಿ ನಡೆಯುತ್ತಿದೆ ಎಂಬ ಅನುಮಾನ ಕಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿದೆ.

