ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರಿನಂತಹ ಸಾಂಸ್ಕೃತಿಕ ನಗರದಲ್ಲಿ ನೂರಾರು ಕೋಟಿಯ ಡ್ರಗ್ಸ್ ಉತ್ಪನ್ನ ಕಾರ್ಖಾನೆ ಜನನಿಬಿಡ ರಿಂಗ್ ರಸ್ತೆಯ ಸಮೀಪದಲ್ಲೇ ಕಾರ್ಯನಿರ್ವಹಿಸುತ್ತಿತ್ತು ಎಂದರೆ ರಾಜ್ಯದಲ್ಲಿ ಪರಿಸ್ಥಿತಿ ಯಾವ ಮಟ್ಟ ತಲುಪಿದೆ, ಯಾರ ಕೈಯಲ್ಲಿ ಸಮಾಜವಿದೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡಲಾಗದ, ಸಮಾಜ ವಿದ್ರೋಹಿ ಶಕ್ತಿಗಳ ಚಟುವಟಿಕೆಗಳನ್ನು ನಿಯಂತ್ರಿಸಲಾಗದ ಮಟ್ಟಿಗೆ ಗೃಹ ಇಲಾಖೆ ವೈಫಲ್ಯವಾಗಿದೆ ಎನ್ನುವುದನ್ನು ಸ್ವತಃ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರೇ ಒಪ್ಪಿಕೊಂಡಿರುವುದು, ರಾಜ್ಯ ಸರ್ಕಾರದ ದುರವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ವಿಜಯೇಂದ್ರ ತರಾಟೆ ತೆಗೆದುಕೊಂಡಿದ್ದಾರೆ.
ನೂರಾರು ಕೋಟಿ (390ಕೋಟಿ ರೂ) ಡ್ರಗ್ಸ್ ಜಾಲವನ್ನು ಮುಂಬೈ ಪೊಲೀಸರು ಬಂದು ಭೇದಿಸುವವರೆಗೂ ನಮ್ಮ ಪೊಲೀಸ್ ವ್ಯವಸ್ಥೆ ನಿದ್ರಿಸುತ್ತಿತ್ತು ಎಂದರೆ ನೂರಾರು ಕೋಟಿ ವಹಿವಾಟಿನ ಈ ಡ್ರಗ್ಸ್ ಮಾಫಿಯಾದಲ್ಲಿ ಸರ್ಕಾರದ ವ್ಯವಸ್ಥೆಯ ಕಾಣದ ‘ಕೈ‘ ಗಳು ಇದ್ದಿರಲೇಬೇಕು. ಇಲ್ಲದಿದ್ದರೆ ಇಷ್ಟು ಸ್ವೇಚ್ಛಾಚಾರವಾಗಿ ಡ್ರಗ್ಸ್ ಉತ್ಪಾದನೆ ಮೈಸೂರಿನಂತಹ ಶಾಂತಿ ಪ್ರಿಯ ನಗರದಲ್ಲಿ ನಡೆಯಲು ಹೇಗೆ ಸಾಧ್ಯ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ನೆಲದಲ್ಲಿ ಡ್ರಗ್ಸ್ ಉತ್ಪಾದನಾ ಘಟಕ ಪತ್ತೆಯಾಗಿರುವುದು ಅತ್ಯಂತ ಗಂಭೀರವೆಂದು ಪರಿಗಣಿಸಿ ಯಾವುದೇ ಪ್ರಭಾವಗಳು ನುಸುಳದಂತೆ ಕಟ್ಟುನಿಟ್ಟಿನ ಕಾರ್ಯಾಚರಣೆ ಹಾಗೂ ತನಿಖೆ ಮುಂದುವರೆದು ಡ್ರಗ್ಸ್ ಮಾಫಿಯಾವನ್ನು ಬೇರು ಸಮೇತ ಕಿತ್ತೊಗೆಯುವ ಬದ್ಧತೆಯನ್ನು ರಾಜ್ಯ ಸರ್ಕಾರ ಪ್ರದರ್ಶಿಸಬೇಕಿದೆ ಎಂದು ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

