ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದುರ್ಗ ಅಂದ್ರೆ ಸ್ವರ್ಗ
ಚಿತ್ರ ಚಿತ್ರದಲ್ಲೂ ಚಿತ್ರ ತಾರೆಯರಲ್ಲೂ ಚಿತ್ರ ವಿಚಿತ್ರವಾಗಿ ಚಿತ್ತಾರವಾಗಿರುವ
ಈ ನಮ್ಮ ದುರ್ಗ ಅಂದ್ರೆ ನಮಗೆ ಸ್ವರ್ಗ. ಹೌದೇ, ದುರ್ಗಾ ಅಂದ್ರೆ ಸ್ವರ್ಗವೇ? ಹೌದು ಈ ಮಾತು ಅಕ್ಷರಶಃ ಸತ್ಯ. ಅದು ದುರ್ಗದಲ್ಲಿ ಹುಟ್ಟಿ ಬೆಳೆದವರಿಗೆ ದುರ್ಗ ಅರ್ಥಾತ್ ಚಿತ್ರದುರ್ಗ ಎಂದರೆ ಸ್ವರ್ಗದ ಸಮಾನವೇ ಸರಿ. ದುರ್ಗದಲ್ಲಿ ಹುಟ್ಟಿ ಬೆಳೆದು, ಬೆಟ್ಟ-ಗುಡ್ಡ ಹತ್ತಿ ಇಳಿದು, ಏಳು ಸುತ್ತಿನ ಕೋಟೆ ಸುತ್ತಿ ಅಲೆದು, ಬರದ ಬಿಸಿಲಿನಲ್ಲಿ ಆನೆ ಬಾಗಿಲು, ರಂಗಯ್ಯನ ಬಾಗಿಲುಗಳ ತಂಪಿನ ಆಶ್ರಯ ಪಡೆದ ನಮಗೆ ದುರ್ಗ ಅಂದ್ರೆ ಸ್ವರ್ಗವೇ ಸರಿ.
ಅನ್ಯ ರಾಜ್ಯದಲ್ಲಿರುವಾಗ ಕೆ.ಎ ಬೋರ್ಡ್ ಇರುವ ವಾಹನಗಳನ್ನು ನೋಡಿದರೆ ಸಾಕು ಮರಳು ಭೂಮಿಯಲ್ಲಿ ಅಮೃತ ಸಿಕ್ಕಂತೆ ಅನಿಸುತ್ತಿತ್ತು ಮತ್ತು ಬೆಂಗಳೂರಿಗೆ ಬಂದಾಗ ಅಲ್ಲಿ ಕೆ.ಎ-16 ಎಂಬ ಬೋರ್ಡ್ ಇರುವ ವಾಹನಗಳನ್ನು ನೋಡಿದರೆ ಅವರು ನಮ್ಮ ಊರಿನವರು ನಮ್ಮವರು ಎಂದು ಖುಷಿಯಿಂದ ನೋಡುತ್ತಿದ್ದೆ ಅಂತಹ ಸಮಯದಲ್ಲಿ ನನ್ನ ಪತ್ನಿ ಜೊತೆಗಿದ್ದರಂತೂ ನನ್ನನ್ನು ಕುರಿತು, “ನೋಡ್ರಿ ನಿಮ್ಮ ಊರಿನ ಕಾರು” “ಯಾರಾದರೂ ನಿಮ್ಮ ಪರಿಚಯದವರು ಇದ್ದಾರೋ ಏನೋ ಸರಿಯಾಗಿ ನೋಡಿ” ಎಂದು ಕೀಟಲೆ ಮಾಡುವುದು ಸಾಮಾನ್ಯ ಆಗಿ ಹೋಗಿದೆ. ದುರ್ಗದ ಮೇಲಿನ ಅಧಮ್ಯ ವ್ಯಾಮೋಹ ಈ ರೀತಿ ನಮ್ಮ ಮನದಲ್ಲಿ ತುಂಬಿಕೊಂಡಿದೆ.
ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಗಾದೆ ಮಾತಿನಂತೆ, ದುರ್ಗದಲ್ಲಿ ಹುಟ್ಟಿ ಬೆಳೆದವರಾದ ನಮಗೆ, ನಮ್ಮ ಊರು ಹೇಗಿದ್ದರೂ ನಮಗೆ ಸ್ವರ್ಗ ಸುಖದ ಆನಂದ ನೀಡುವುದು ಖಚಿತವೇ ಆದರೆ, ದುರ್ಗ ಈಗಲೂ ಉನ್ನತೀಕರಣ ಆಗದೆ ಇರುವುದು ಉಚಿತವೇ?. ನಮ್ಮ ದುರ್ಗದಿಂದ ಬಿಡುಗಡೆಯಾಗಿ ಕೇವಲ 24 ವರ್ಷಗಳಲ್ಲಿಯೇ ದಾವಣಗೆರೆಯು ಆಧುನಿಕವಾಗಿಯೂ ಔದ್ಯೋಗಿಕರಣವಾಗಿಯೂ ಎಲ್ಲಾ ರೀತಿಯಲ್ಲಿಯೂ ವೈಭವವಾಗಿ ಉನ್ನತೀಕರಣವಾಗಿ ಗುರುತಿಸಿಕೊಂಡಿದೆ.
ಆದರೆ, ತುಂಬಾ ಹಳೆಯದಾದ ನಮ್ಮ ಕೋಟೆನಾಡು ಚಿತ್ರದುರ್ಗ ಜಿಲ್ಲೆಯು ಮಾತ್ರ ಈಗಲೂ ಒಂದು ತಾಲ್ಲೂಕು ಸಮನಾದ ಚಿಕ್ಕ ನಗರದಂತೆ ಗೋಚರಿಸುತ್ತದೆ. ಅಲ್ಲದೆ ಯಾವುದೇ ಉನ್ನತೀಕರಣವಾಗಲಿ ಅಥವಾ ಔದ್ಯೋಗಿಕರಣವಾಗಲಿ ಸೃಷ್ಟಿಯಾಗದೆ/ಸ್ಥಾಪನೆಯಾಗದೆ ಕಳೆಗೆಟ್ಟಂತಾಗಿದೆ. ದುರ್ಗವು ಏನಾದರೂ ಹೆಸರುವಾಸಿಯಾಗಿದೆ ಎಂದರೆ ಅದೇನಿದ್ದರೂ ಪ್ರಕೃತಿದತ್ತವಾದ ಸಿರಿ ಸೊಬಗು ಸೌಂದರ್ಯದಿಂದ ಮತ್ತು ಮದಕರಿ ನಾಯಕರ ದೂರದೃಷ್ಟಿಯ ಫಲವಾಗಿ; ಕೋಟೆ-ಕೊತ್ತಲುಗಳು, ಬುರುಜು-ಬತೇರಿಗಳು, ಮಠ-ಮಂದಿರಗಳು, ಏಳು ಸುತ್ತಿನ ಕೋಟೆ ಮತ್ತು ಒನಕೆ ಓಬವ್ವನ ಕಿಂಡಿ ಎಂಬ ಐತಿಹಾಸಿಕ ನೆಲೆಯಿಂದಾಗಿ ರಾಜ್ಯದಲ್ಲಿ ದೇಶದಲ್ಲಿ ಅಷ್ಟೇ ಏಕೆ ಇಡೀ ವಿಶ್ವದಲ್ಲೇ ಹೆಸರು ಕೀರ್ತಿ ಗಳಿಸಿ ಗುರುತಿಸಿಕೊಂಡಿದೆ ಅಷ್ಟೇ ವಿನಃ, ಇಷ್ಟು ಹಳೆಯದಾದ ನಮ್ಮ ಜಿಲ್ಲೆಯು ಎಷ್ಟೊಂದು ದೊಡ್ಡದಾಗಿ ಬೆಳೆಯಬೇಕಿತ್ತು ಆದರೆ ಅದಾಗಿಲ್ಲ. ಚಿತ್ರದುರ್ಗದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆಂದು ರೋಗಿಯನ್ನು ಕರೆದುಕೊಂಡು ಹೋದರೆ, ದಾವಣಗೆರೆಗೋ ಅಥವಾ ಬೆಂಗಳೂರಿಗೋ ರೆಫರ್ ಮಾಡುವ ಪರಿಪಾಠ ಈಗಲೂ ಇದೆ. ಚಿತ್ರದುರ್ಗವು ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಮತ್ತು ಉತ್ತರ ಕರ್ನಾಟಕಕ್ಕೂ ಸಂಪರ್ಕ ಕಲ್ಪಿಸುವ ರಾಯಭಾರಿಯಂತೆ ರಾಜ್ಯದ ಮಧ್ಯಭಾಗದಲ್ಲಿದ್ದರೂ ದುರ್ಗದ ಚಿತ್ರಣ ಯಥಾಸ್ಥಿತಿ ಇದೆ.
ಚಿತ್ರದುರ್ಗದಿಂದ ಬೆಂಗಳೂರಿಗೆ ರೈಲ್ವೆಯಲ್ಲಿ ಬರಬೇಕೆಂದರೆ ಒಂದು ದಿನವೇ ಹಿಡಿಯುತ್ತದೆ ಅದರ ಬದಲು ಬಸ್ಸಿನಲ್ಲಿ ಬಂದು ಚಿಕ್ಕಪುಟ್ಟ ಕೆಲಸ ಮುಗಿಸಿಕೊಂಡು ಮತ್ತೆ ದುರ್ಗಕ್ಕೆ ವಾಪಸ್ಸು ತಲುಪುವಷ್ಟೊತ್ತಿಗೆ, ನಮ್ಮ ದುರ್ಗದ ರೈಲು ಬೆಂಗಳೂರಿಗೆ ತಲುಪುತ್ತದೆ.
ಸುಮಾರು 20 ವರ್ಷಗಳಿಂದ ನಾನು ಕೇಳುತ್ತಲೇ ಬಂದಿದ್ದೇನೆ ನಮ್ಮ ದುರ್ಗಕ್ಕೆ ನೇರ ರೈಲ್ವೆ ಸಂಪರ್ಕ ವ್ಯವಸ್ಥೆ (ತುಮಕೂರಿನಿಂದ ಚಿತ್ರದುರ್ಗ ಮಾರ್ಗವಾಗಿ ದಾವಣಗೆರೆಗೆ) ಬರುತ್ತದೆ ಎಂದು ಆದರೆ ಇಲ್ಲಿವರೆಗೂ ಅದರ ಯಾವುದೇ ಸುಳಿವು ಕಾಣುತ್ತಿಲ್ಲ ಸುಮಾರು ಹದಿನೈದು ವರ್ಷಗಳಿಂದ ರೈತರಿಂದ ಭೂಮಿಯನ್ನು ಖರೀದಿ ಮಾಡುವುದರಲ್ಲಿಯೇ ಮತ್ತು ನಕ್ಷೆ ತಯಾರಿಸುವುದರಲ್ಲಿ ಇದ್ದಾರೆ. ನಮ್ಮ ದುರ್ಗಕ್ಕೆ ಎಕ್ಸ್ಪ್ರೆಸ್ ರೈಲು ವ್ಯವಸ್ಥೆ ಅದ್ಯಾವಾಗ ಬರುವುದೋ ಗೊತ್ತಿಲ್ಲ ಆದರೆ ನಾವು (ದುರ್ಗದವರು) ಮಾತ್ರ ಭಕಪಕ್ಷಿಯಂತೆ ಕಾಯುತ್ತಿದ್ದೇವೆ.
ಎಷ್ಟೋ ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ ಮಿನಿ ವಿಧಾನಸೌಧ ಎಂಬ ಭವ್ಯ ಕಟ್ಟಡಗಳು ತಲೆ ಎತ್ತಿ ವಿಜೃಂಬಿಸುತ್ತಿವೆ ಆದರೆ ಆ ಭಾಗ್ಯವೂ ಸಹ ನಮ್ಮ ನಗರಕ್ಕೆ ಇನ್ನೂ ಕೂಡಿ ಬಂದಿಲ್ಲದಿರುವುದು ಒಂದು ವಿಪರ್ಯಾಸವೇ ಆಗಿದೆ.
2007 ಅಥವಾ 2009ನೇ ಇಸವಿ ಇರಬಹುದು ಆಗ ಚಿತ್ರದುರ್ಗ ಜಿಲ್ಲಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಬಿ.ಎಲ್ ವೇಣು ಅವರು ತಮ್ಮ ಭಾಷಣದಲ್ಲಿ “ಈ ನಮ್ಮ ಚಿತ್ರದುರ್ಗದಲ್ಲಿ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಅವರಂಥವರು ಹುಟ್ಟಿದ್ದರೆ/ಇದ್ದಿದ್ದರೆ ಈ ನಮ್ಮ ದುರ್ಗವು ಸಹ ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿತ್ತು” ಎಂದು ಹೇಳಿದ್ದರು ಆ ಮಾತು ಈಗಲೂ ತುಂಬಾ ಸತ್ಯವೆನಿಸುತ್ತದೆ.
ಇವೆಲ್ಲ ಇಲ್ಲಗಳ ನಡುವೆಯೂ “ಅಳುವ ಕಡಲೊಳು ತೇಲಿ ಬರುತಲಿದೆ ನಗುವ ಹಾಯಿದೋಣಿ” ಎಂಬ ಅಡಿಗರ ಕವಿತೆ ಸಾಲಿನಂತೆ ನಮ್ಮ ಚಿತ್ರದುರ್ಗದಲ್ಲಿ ಪ್ರಕೃತಿದತ್ತವಾಗಿ ನಮಗೆ ಆ ಪ್ರಕೃತಿ ಮಾತೆ ಕರುಣಿಸಿರುವ ಬೆಟ್ಟ ಗುಡ್ಡ ಕಾಡು ಅದರಲ್ಲಿನ ಸಸ್ಯಗಳು ಆ ಸಸ್ಯ ಗಿಡ ಮರದಿಂದ ಬರುವ ತಂಗಾಳಿ ಸುವಾಸನೆ ಅದರ ಬಗ್ಗೆ ಹೇಳದೆ ಹೋದರೆ ಅದು ನನ್ನಿಂದ ತುಂಬಾ ಲೋಪವಾಗುವುದು. ಹೌದು ನಮ್ಮ ದುರ್ಗಕ್ಕೆ ಆ ಪ್ರಕೃತಿ ಮಾತೆ ಮಾತ್ರ ಯಾವುದೇ ಕಡಿಮೆ ಮಾಡಿಲ್ಲ. ನಮಗೆ ಮಲೆನಾಡಿನ ವಾತಾವರಣ ಸೃಷ್ಟಿ ಮಾಡಿಕೊಟ್ಟಿದೆ.
ಇನ್ನು ಕೆಲವೊಮ್ಮೆ ಉತ್ತರ ಕರ್ನಾಟಕದಂತಹ ರಣಬಿಸಿಲನ್ನು ತೋರಿಸಿದೆ ಆದಾಗ್ಯೂ ನಮ್ಮ ಜೋಗಿಮಟ್ಟಿ ಪ್ರದೇಶವು ರಾಜ್ಯದಲ್ಲಿಯೇ ಏಕೆ ಇಡೀ ಏಷ್ಯದಲ್ಲೇ ಅತಿ ಹೆಚ್ಚು ಗಾಳಿ ಬೀಸುವ ಹೆಗ್ಗುರುತಾಗಿ, ಆಗೊಮ್ಮೆ ಈಗೊಮ್ಮೆ ಮಳೆ ಬೀಳುವ ಮತ್ತು ಅತಿ ಹೆಚ್ಚು ಶೀತಲ ಪ್ರದೇಶವೆಂದು ಹೆಸರಾಗಿದೆ. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳು ಸೇರಿದಂತೆ ನಾಯಕನಹಟ್ಟಿ, ತುರುವನೂರು ಹೋಬಳಿ ಪ್ರದೇಶವು ಮಳೆಯಿಂದ ಮರೆಯಾಗಿದ್ದು ರಾಜ್ಯದಲ್ಲಿಯೇ ಅತಿ ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿದೆ. ಇತ್ತೀಚೆಗಂತೂ ಬೆಟ್ಟದ ಮೇಲೆಲ್ಲಾ ಎಲ್ಲೆಂದರಲ್ಲಿ ತಾವೇ ಸ್ವತಃ ಬೆಳೆದು ನಿಂತಿದ್ದಾವೇನೋ ಎಂಬುವ ಹಾಗೆ ವಿಂಡ್ಮಿಲ್ಗಳನ್ನು ನೆಟ್ಟಿದ್ದಾರೆ ಅದು ಸಹ ಒಂದು ಪ್ರೇಕ್ಷಣೀಯ ತಾಣದಂತೆ ನೋಡುಗರಿಗೆ ತುಂಬಾ ಸೋಜಿಗವಾಗಿ ಕಾಣಿಸುತ್ತದೆ. ಬೇಸಿಗೆಯಲ್ಲಿ ಬೆಟ್ಟದ ತಪ್ಪಲಿನಲ್ಲಿ ಸಿಗುವ ನೆರಳು ಎಸಿಯಂತೆ ಭಾಸವಾಗುತ್ತದೆ. ಮಳೆಗಾಲದಲ್ಲಿ ಮಲೆನಾಡಿನಂತೆ ಕಂಗೊಳಿಸುತ್ತದೆ. ಹಬ್ಬ ಹರಿದಿನಗಳಲ್ಲಂತೂ ವರ್ಣತೀತ ಎಲ್ಲೆಂದರಲ್ಲಿ ಡೊಳ್ಳು ಹುರುಮೆ ಕಹಳೆ ವಾದ್ಯಗಳ ಸದ್ದುಗಳೆ ಗುಯ್ಗುಡುತ್ತದೆ. ಮಾತೆ ಏಕನಾಥೆ, ಬರಗೇರಮ್ಮ, ಉಚ್ಚಂಗೆಲ್ಲಮ್ಮ, ತಿಪ್ಪಿನಗಟ್ಟಮ್ಮ, ಕಣಿವೆ ಮಾರಮ್ಮ ಅವರ ಮೆರವಣಿಗೆ, ಭೇಟಿ, ಬೇಟೆ ಉತ್ಸವ, ಸಿಡಿ, ಇತ್ಯಾದಿ ಎಂಬ ಹಲವು ಹಬ್ಬದ ಕಾರ್ಯಕ್ರಮಗಳು ಮತ್ತು ಬಜರಂಗದಳದಿಂದ ಆಚರಿಸಲ್ಪಡುವ ಹಿಂದೂ ಮಹಾಗಣತಿ ಉತ್ಸವ ಹೀಗೆ ದುರ್ಗದ ಜನರ ನಾಡಿ ಮಿಡಿತದಂತೆ ಸದಾ ಒಂದಿಲ್ಲೊಂದು ಕಾರ್ಯಕ್ರಮಗಳು ಮತ್ತು ಮಾರಿ ಹಬ್ಬಗಳು ನಡೆಯುತ್ತಾ ಸಂಭ್ರಮದ ವಾತಾವರಣ ಸೃಷ್ಟಿಸಿ ಬಿಡುತ್ತದೆ.
ಈ ಹಬ್ಬದ ಸಂಭ್ರಮ ಕಂಡಾಗ ನಾವು ದುರ್ಗದಲ್ಲಿ ಹುಟ್ಟಿದ್ದೇ ನಮ್ಮ ಪುಣ್ಯ ಅನಿಸುತ್ತದೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ದುರ್ಗೋತ್ಸವ ಆಚರಿಸಿದ್ದರು. ಅಂತಹ ದುರ್ಗೋತ್ಸವವನ್ನು ಪುನಃ ಕನಿಷ್ಠ ಮೂರು ವರ್ಷಕ್ಕೊಮ್ಮೆ ಆದರೂ ನಡೆಸುವಂತೆ ದುರ್ಗದ ಜನರು ಸರ್ಕಾರದ ಮುಂದೆ ಹಲವಾರು ಬಾರಿ ವಿನಂತಿಸಿದ್ದಾರೆ. ಆದರೆ ಆ ಕಾಲ ಇನ್ನು ಕೂಡಿ ಬಂದಿಲ್ಲ. ಅಕಸ್ಮಾತ್ ದುರ್ಗೋತ್ಸವ ಏನಾದರೂ ಆಚರಣೆಗೆ ಬಂದರೆ ನಮ್ಮ ದುರ್ಗದ ಚಿತ್ರಣ ಸ್ವಲ್ಪ ವೇಗವಾಗಿ ಬೆಳೆಯಬಹುದು ಏಕೆಂದರೆ ಅಂತಹ ಉತ್ಸವದ ಸಮಯದಲ್ಲಿ ದೇಶ ವಿದೇಶಗಳಿಂದ ಹಲವಾರು ಪ್ರವಾಸಿಗರು ಭಾಗವಹಿಸುತ್ತಾರೆ ಮತ್ತು ವರ್ಷದಿಂದ ವರ್ಷಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ ಹಾಗೆ ನಮ್ಮ ದುರ್ಗವು ಇಮ್ಮಡಿಯಾಗಿ ಬೆಳೆಯುತ್ತದೆ.
ನಮ್ಮ ದುರ್ಗದ ಕೆಲವು ಜನರು ಮಾಸಿಕ 2000 ರೂಪಾಯಿ ಹಣವನ್ನಷ್ಟೇ ದುಡಿದರು ಸಹ ಅದರಲ್ಲಿಯೇ ಖುಷಿಯಾಗಿ ಬದುಕುವ ಸರಳ ಮಾರ್ಗ ಕಲಿತಿದ್ದಾರೆ. ನಮ್ಮ ದುರ್ಗದ ಏಳುಬೀಳು ಏನಾಗುತ್ತಿದೆ ಎಂಬ ಯಾವುದೇ ಗೋಜಿಗೆ ಹೋಗದೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಸುಖ ಸಂಸಾರದ ಹಲವು ಸೂತ್ರಗಳನ್ನು ಅಳವಡಿಸಿಕೊಂಡು ಹೋಗುತ್ತಿದ್ದಾರೆ.

ಆದರೂ ಮುಂದಿನ ಪೀಳಿಗೆಗೆ ನಮ್ಮ ದುರ್ಗದಲ್ಲಿಯೇ ಏನಾದರೂ ಹೊಸದಾದ ದುಡಿಯುವ ಮಾರ್ಗಗಳು ಸೃಷ್ಟಿಯಾಗಬೇಕಿವೆ. ಇನ್ನು ಮುಂದೆಯಾದರೂ ನಮ್ಮ ದುರ್ಗದ ಚಿತ್ರಣ ಬದಲಾಗಲಿ ಪರಿಸ್ಥಿತಿ ಸುಧಾರಿಸಲಿ ಉನ್ನತ ಶಿಕ್ಷಣ ಸಂಸ್ಥೆಗಳು, ಆಧುನಿಕ ವ್ಯವಸ್ಥೆಯುಳ್ಳ ಆಸ್ಪತ್ರೆಗಳು ಮತ್ತು ಜನರ ಜೀವನಮಟ್ಟ ಸುಧಾರಿಸಬಹುದಾದಂತಹ ಔದ್ಯೋಗಿಕ ಕಾರ್ಖಾನೆಗಳು ಸ್ಥಾಪನೆಯಾಗಿ, ದುರ್ಗವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡು ದುರ್ಗದ ಎಲ್ಲರ ಕನಸು ನನಸಾಗಲಿ ಎಂಬುವುದೇ ನನ್ನ ಆಶಯ.
ಲೇಖನ-ವೆಂಕಟೇಶ ಹೆಚ್ ಚಿತ್ರದುರ್ಗ, (ನವ ದೆಹಲಿ). 7760023887

