ಕಪ್ಪು ಬಿಳುಪಿನ ಕಾಲದಿಂದ ಇಂದಿಗೂ ಉಳಿದುಕೊಂಡ ದುರ್ಗದ ಫೋಟೋ ಸ್ಟುಡಿಯೋಗಳು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಲದ ಮಾತು 55-
ಪಾಂಡು ಫೋಟೋ ಸ್ಟುಡಿಯೊ ಮರಿ, (ಸುರೇಶ)ಅನ್ನಪೂರ್ಣೆಯ ಮಹಾಭಕ್ತ. ಕೃಷ್ಣ ಫೋಟೋ ಸ್ಟುಡಿಯೊ, ಕಲ್ಪನ ಫೋಟೋ ಸ್ಟುಡಿಯೊ, ಪ್ರಭಾತ್ ಫೋಟೋ ಸ್ಟುಡಿಯೊ, ಚಿತ್ರ ಫೋಟೋ ಸ್ಟುಡಿಯೊ, ಭಾರತ್ ಫೋಟೋ ಸ್ಟುಡಿಯೋಗಳು, ಕಪ್ಪು ಬಿಳುಪಿನ ಕಾಲದಿಂದ, ಇಂದಿಗೂ ಕೆಲವು ಮಾತ್ರ ಉಳಿದುಕೊಂಡಿವೆ.

ಈ ಸಮಕಾಲಿನಕ್ಕೆ ಸಂಬಂಧಿಸಿದಂತೆ ನಮ್ಮ ಮರಿ ಯ,ಪಾಂಡು ಸ್ಟುಡಿಯೋ ಸಹ ಒಂದು. ಪಾಂಡು ಹೆಸರಿನ ವೈಶ್ಯ ಸಮುದಾಯದ ಒಬ್ಬ ಜೀವ ಗೆಳೆಯ,ಅಕಾಲ ಮರಣಕ್ಕೆ ತುತ್ತಾದ,ಆ ಗೆಳೆಯನ ಸವಿ ನೆನಪಿಗೆ ಮರಿ,ಪಾಂಡು ಹೆಸರನಲ್ಲೇ ಸ್ಟುಡಿಯೋ ಪ್ರಾರಂಭ ಮಾಡಿದ್ದು.

ಸಹೋದರಾದ ಚಿದಾನಂದ ಹಾಗೂ(ಮರಿ)ಸುರೇಶ ಇಬ್ಬರೂ,ತುಂಬಾ ಹಿಂದಿನಿಂದ ತಮ್ಮ ಜೀವಿತಾವಧಿಯ ಲಾಭನಷ್ಟಗಳನ್ನ,ಲೆಕ್ಕ ಹಾಕಿದ್ದು ಈ ಸ್ಟುಡಿಯೋಗಳಲ್ಲಿಯೇ, ಒಂದು ಈಗ ಎರಡಾಗಿ ಕವಲಾಗಿವೆ.ಹೊರನಾಡು ಅನ್ನಪೂರ್ಣೇಯ ಭಕ್ತನಾಗಿ, ಆ ತಾಯಿಯನ್ನು ಈ ದುರ್ಗಕ್ಕೆ ಕರೆತಂದದ್ದು ಸುರೇಶನೇ.ಪ್ರಾರಂಭದ ದಿನಗಳಲ್ಲಿ ಕಷ್ಟಪಟ್ಟು,ಜೋಗಿಮಟ್ಟಿ ರಸ್ತೆಯ ತಿರುವಿನಲ್ಲಿ,ಎಕರೆ ಜಮೀನು ಖರೀದಿಸಿ, ಸುತ್ತಲೂ ಬೇಲಿಯಾಕಿಸಿ, ಒಳಗೊಂದು ಆರಂಭಿಕ ತಗಡಿನ ಶೆಡ್ ಹಾಕಿ, ದುರ್ಗದಲ್ಲಿ ಅನ್ನಪೂರ್ಣೇಶ್ವರಿಯನ್ನು ಕೂರಿಸಿಯೇ ಬಿಟ್ಟ.

ಪೂಜೆ,ಹೋಮ,ಹವನಗಳು, ಸ್ಥಳದಲ್ಲಿ ನಿರಂತರವಾಗಿ ನಡೆಯುತ್ತಲೇ ಬಂದವು. ಸುರೇಶ ನನಗೆ ಈಗಲೂ ಮರಿ ಯೇ,ಈಗೀಗ ಭಕ್ತರ ದೃಷ್ಟಿಯಲ್ಲಿ ಸ್ವಾಮಿಯಾಗಿಯೇ ಪರಿವರ್ತನೆಯಾಗಿದ್ದಾನೆ. ಹುಣ್ಣಿಮೆ,ಅಮಾವಾಸ್ಯೆಗಳಿಗೆ ಸಾಧು,ಸಂತರು ಬಂದು ಹೋಗುತ್ತಿರುತ್ತಾರೆ,

ಇಲ್ಲಿಗೊಬ್ಬರು ನಡೆದಾಡುವ ನಿಜ ದೇವರು”ಸಿದ್ದೇಶ್ವರ ಗುರುಗಳು”ಬಂದು ಹೋಗಿದ್ದು,ನನಗೆ ಖುಷಿಯ ವಿಚಾರ.ಇತ್ತೀಚಿಗೆ ವಿಶೇಷ ದಿನಗಳಲ್ಲಿ ದಾಸೋಹವೂ ನಡೆಯುತ್ತಿರುತ್ತದೆ.ತುಂಬಾ ವ್ಯವಸ್ಥಿತವಾಗಿ ದೇವಾಲಯದ ಕಟ್ಟಡವೂ ಸಹ ಪ್ರಾರಂಭವಾಗಿದೆ.

 ನಮ್ಮ ಬಹುತೇಕ ವಾಯುಹಾರಿಗಳು, ಅನ್ನಪೂರ್ಣೇಶ್ವರಿ ಮಠದ ಬಯಲಿಗೆ ವಾಹನಗಳನ್ನು ನಿಲ್ಲಿಸಿ,ಹೆಜ್ಜೆಗಳನ್ನ ಪ್ರಾರಂಭಿಸುವುದು ಇಲ್ಲಿಂದಾನೇ.

ಮರಿ ಮಠ ಹುಟ್ಟಿದಾಗಿನಿಂದ,ಅಲ್ಲಿ ಕೆಲವು ಬೀದಿ ಶ್ವಾನಗಳು ಬಂದು ಸೇರಿಕೊಂಡಿದ್ದವು. ಸುರೇಶನಿಂದ ಅವುಗಳೆಲ್ಲವುಕ್ಕೂ ಒಂದೊಂದು ಹೆಸರುಗಳಿವೆ, ಅವುಗಳಲ್ಲಿ ನಮ್ಮೊಂದಿಗೆ ಸ್ನೇಹ ಬೆಳೆಸಿದ್ದು,ದತ್ತಾ ಎಂಬ ಹೆಸರಿನ ಶ್ವಾನವೊಂದು, ಎಷ್ಟೇ ಜನ ವಿಹಾರಿಗಳು ಬಂದರೂ,ಯಾರೊಂದಿಗೂ ಹೋಗದೆ,ನಮ್ಮನ್ನೇ ಕಾದು ಜೊತೆಗೆ ಕಾಡಿಗೆ ಇಳಿಯುತಿತ್ತು,ನಮ್ಮ ಜೊತೆ ವರ್ಷಾನುಗಟ್ಟಲೆಯ ವಿಹಾರಿ ಈ ದತ್ತ,ಅಂತಹ ಸಂಬಂಧ ಆ ಶ್ವಾನಕ್ಕೂ ನಮ್ಮ ಗುಂಪಿಗೂ.

ನಾವು ನಡೆಯುವ ದಾರಿಯಲ್ಲಿ ಎಲ್ಲಾದರೂ ಅಕ್ಕಪಕ್ಕದ ಮರಗಿಡಗಳ ಪೆಳೆಗಳಲ್ಲಿ ಸಪ್ಪಳವಾದರೆ,ಹಿಂದೆ ಮುಂದೆ ನೋಡದೇ ನುಗ್ಗಿಬಿಡುತ್ತಿದ್ದ,ಅಂತಹ ಬಲ ಭೀಮ.ಅದು ಮುಂದಿನ ಹೆಜ್ಜೆಗಳಲ್ಲಿದ್ದಾಗ, ಹಾವುಗಳೆನಾದರೂ ಕಂಡರಂತೂ,ನಿಂತು ನಮಗೂ ಎಚ್ಚರಿಸುತ್ತಿತ್ತು, ಅಂತ ಪ್ರಜ್ಞಾವಂತ ಶ್ವಾನವದು.ನಾವು ಕಾಡಿನ ಸ್ಥಳಗಳಲ್ಲಿ ವ್ಯಾಯಾಮ ಮಾಡುತ್ತಿದ್ದರೆ,ದೂರದಲ್ಲಿ ಮುಗಿಯುವವರೆಗೂ ನೆಲಕ್ಕೆ ತಲೆ ಇಟ್ಟು ಕೂತುಬಿಡುತ್ತಿತ್ತು. ಅದಾವ ಜನ್ಮದ ನಂಟೋ, ನಮಗೂ ಆ ಶ್ವಾನಕ್ಕೂ ದೇವರೇ ಬಲ್ಲ.

 ಅಂದೊಂದು ದಿನ ವಿಹಾರಕ್ಕೆ ನಾನು ಗುರುರಾಜ್ ಇಬ್ಬರೇ, ಬೆಳಗಿನ ಜಾವ 4:30 ಕ್ಕೆ, ಮಠದ ಮುಂದೆ ವಾಹನ ನಿಲ್ಲಿಸಿ ಹೊರಟೆವು. ದೂರದಿಂದ ಗಮನಿಸಿದ ದತ್ತ ಬಾಲ ಅಲ್ಲಾಡಿಸುತ್ತ ಬಂದೇ ಬಿಟ್ಟ,ನಮ್ಮ ಗುಂಪಿನ ಯಾರನ್ನಾದರೂ ಸರಿ,ಕಂಡರೆ ವಾಪಸ್ಸು ಹೋಗುವ ಮಾತೇ ಇಲ್ಲ ದತ್ತನಿಗೆ,ಅದು ಮುಂದೆ ನಾವುಗಳು ಹಿಂದೆ. ಕೆಳಗಿನಿಂದ ಹೆಜ್ಜೆ ಹಾಕುತ್ತ, ತನಿಖಾ ಠಾಣೆಯಿಂದ ಬಲಕ್ಕೆ,ಜೋಗಿಮಟ್ಟಿಯ ಕಡೆಗೆ ನಮ್ಮ ಪ್ರತಿದಿನದ ವಿಹಾರ.

ಆಡು ಮಲ್ಲೇಶ್ವರದ ಕಡೆಗೆ,ಆಗ ಹೆಚ್ಚಾಗಿ ಯಾರೂ ಹೋಗುತ್ತಿರಲಿಲ್ಲ.ಹೆಜ್ಜೆಗಳು ಪ್ರಾರಂಭವಾದರೆ,ಎರಡು ಗಂಟೆಗೂ ಹೆಚ್ಚಿನ ಸಮಯ ನಡೆಯುತ್ತಿದ್ದ ದಿನಗಳವು. ಜೋಗಿಮಟ್ಟಿಗೆ ಹೋಗುವ ಕಾಡಿನ ದಾರಿಯಲ್ಲಿ,ಅನೇಕ ಚೆಕ್ ಡ್ಯಾಂ ಗಳು ಬರುತ್ತವೆ. ಸಕ್ರಯ್ಯನಮಟ್ಟಿ ಹತ್ತಿರ ಬರುವ ಚೆಕ್ ಡ್ಯಾಂ,ನಮ್ಮ ಗುಂಪಿನ ವ್ಯಾಯಾಮದ ಸ್ಥಳ.ಅದನ್ನು ಜೋಗಿ ಸ್ಪಾಟ್ ಅಂತಲೂ ಕರ್ಕೊಳ್ತೀವಿ.ನಾವಿಬ್ಬರೂ ಸ್ಪಾಟ್ ಗೆ ತಲುಪಿದಾಗ, ಸಮಯ ಆರು ಗಂಟೆ ಮೇಲಾಗಿರಬಹುದು,ನಾನು ಗುರುರಾಜ್ ಶೂಗಳನ್ನು ಬಿಚ್ಚಿ,ಟಾರ್ಚ್ ಬದಿಗಿಟ್ಟು ವ್ಯಾಯಾಮ ಪ್ರಾರಂಭಿಸಿದವು.ದೂರದಲ್ಲಿ ದತ್ತ ನಮ್ಮನ್ನು ನೋಡುತ್ತಲೇ ಕುಳಿತಿದ್ದ.

 ಇನ್ನು ಮಬ್ಬುಗತ್ತಲು, ನಮ್ಮಿಂದ ಐವತ್ತು ಮೀಟರ್ ದೂರದಲ್ಲಿ,ದೊಡ್ಡ ಕರಡಿಯೊಂದು  ಪಶ್ಚಿಮದಿಂದ ಪೂರ್ವಕ್ಕೆ ರಸ್ತೆ ದಾಟುತ್ತಿದುದನ್ನ ನಾವಿಬ್ರೂ ಗಮನಿಸಿದಿವಿ,ಕರಡಿ ನಮ್ಮನ್ನೇನು ಗಮನಿಸಲಿಲ್ಲ, ಆದರ ಪಾಡಿಗೆ ಅದು ಮಟ್ಟಿಯ ಮೇಲಕ್ಕೆ ಹೋಯಿತು.ನಮಗೂ ಕರಡಿಗೂ ಸಮೀಪದ ಅಂತರವೇ, ಹಾಗಾಗಿ ಇಬ್ಬರಿಗೂ ಸ್ವಲ್ಪ ಆತಂಕನೇ.ಚಿರತೆಗಿಂತ ಕರಡಿಯಿಂದಲೇ ಮನುಷ್ಯನಿಗೆ ಅಪಾಯ ಜಾಸ್ತಿ.ಸುಮ್ಮನೆ ಕುಳಿತಿದ್ದ ದತ್ತ ಬೊಗಳಲಿಲ್ಲ,ರಸ್ತೆ ಮೂಲಕವೇ ಕರಡಿ ಕಡೆಗೆ ಹೋದ,ಅದಕ್ಕೆ ಕಾಣ್ತೋ ಇಲ್ವೋ ಗೊತ್ತಿಲ್ಲ, ಸ್ವಲ್ಪ ರಸ್ತೆ ಬಿಟ್ಟು ಕಾಡೊಳಗೂ ನುಗ್ಗಿದ.

ನಾವು ವ್ಯಾಯಾಮ ಮಾಡುತ್ತಿದ್ವಿ,ಎರಡು ನಿಮಿಷ ಆಗಿರಬಹುದು,ದೂರದ ಪೆಳೆಯಿಂದ ದತ್ತ ಒಂದೇ ಸಮನೆ ಓಡಿ ಬಂದ, ನಿಲ್ತಾನೇ ಇಲ್ಲ,ನಮ್ಮನ್ನು ದಾಟಿ ಮುಂದಕ್ಕೆ ಓಡ್ತಾನೇ ಇದಾನೆ.ತಿರುಗಿ ನೋಡಿದರೆ ಕರಡಿ,ಹತ್ತು ಮೀಟರ್ ದೂರದಲ್ಲಿ ದತ್ತ ನ್ನ, ಓಡಿಸಿಕೊಂಡು ಸಿಟ್ಟಿನಿಂದ ಬರ್ತಿದೆ.ಶೂಗಳು, ಟಾರ್ಚ್,ಮೊಬೈಲ್ ಗಳು, ಯಾವುದೂ ತಗೊಳ್ಳೋಕೆ ನಮಿಗೂ ಸಮಯವಿಲ್ಲ,ಇನ್ನೇನು ಕರಡಿ,ನಮ್ಮ ಕಡೆ ಬಂದೇ ಬಿಡ್ತು,ತಡಮಾಡ್ಲಿಲ್ಲ

ಗುರೂ ಅಂದೆ,ಓಡಣ್ಣ ಅಂದ,ಎಲ್ಲ ಬಿಟ್ಟು ಓಡ್ತಿದಿವಿ. ಜೋಗಿಮಟ್ಟಿ ತುದಿಯವರೆಗೂ ಎತ್ತರದ ಹಾದಿಯೇ,ನಮ್ಮ ಮುಂದೇ ದತ್ತ ಓಡ್ತಿದ್ರೆ,ಮಧ್ಯೆ ನಾನು ಗುರುರಾಜ್,ನಮ್ಮ ಹಿಂದೆನೇ ಸಮೀಪದಲ್ಲಿ ಕರಡಿ.ಅದಕ್ಕೆ ಈ ದತ್ತ ಏನು ಮಾಡ್ಬಂತೋ ಏನೋ,ಬಿರುಸಾಗೆ ಓಡಿ ಬರ್ತಿದೆ,ಈ ದತ್ತ ಅನ್ನೋ ಲೋಫರ್,ನಾನೇನ್ ಮಾಡೋಣ ಅಂತಾನೇ ನಮ್ಮ ಮುಂದೆ.

ನಾನು ಗುರು ನಿರಪರಾಧಿಗಳು,ಒಂದು ಕಿಲೋ ಮೀಟರ್ ಗೂ ಹೆಚ್ಚು ಓಡ್ತಾನೆ ಇದಿವಿ,ಕರಡಿಗೂ ನಮಗೂ ರೇಸಿಗೆ ಬಿಟ್ಹಂಗಾಗಿದೆ,ಅದೂ ಸರಿತಿಲ್ಲಾ,ನಾವು ನಿಲ್ತಿಲ್ಲಾ,ಸುಸ್ತಾಗಿ ತಲೆ ತಿರುಗಿ ನೆಲಕ್ಕೆ ಬೀಳುವ ಸ್ಥಿತಿ, ಕರಡಿಗೆ ಏನು ಹೊಳಿತೋ ಏನೋ,ತಿರುವಿನಲ್ಲಿ ಒಂದು ದೊಡ್ಡ ಪೆಳೆ ಇತ್ತು,ಓಡ್ತಾನೇ ಹಿಂದಕ್ಕೆ ತಿರುಗಿ ಗಮನಿಸಿದಾಗ,ಅಲ್ಲೇ ಬದಿಗೆ ಸರಿದಿದ್ದು ಕಾಣ್ತು.

ನಾವು ಮುಂದಕ್ಕೆ ಐವತ್ತು ಮೀಟರ್  ಅಂತರದಲ್ಲಿ,ಸುಸ್ತಾಗಿ ಒಂದು ಮರಕ್ಕೆ ಒರಗಿ ಕೂತ್ವಿ.ನಮಗಿಂತ ದೂರನೇ ಓಡ್ತಿದ್ದ ದತ್ತ,ತಿರುಗಿ ಸುಧಾರಿಸ್ಕೊಳ್ತನೇ ಪಕ್ಕಕ್ಕೆ ಬಂದ,ಏನಾದ್ರೂ ತಗೊಂಡು ತಲೆ ಮೇಲೆ ಹಾಕಿ ಬಿಡೋಣ ಅನ್ನುವಷ್ಟು ಸಿಟ್ಟು ಬಂದಿತ್ತು ನನಗೂ ಗುರುಗೂ. ಅದರ ನೋಟ ಹೇಗಿತ್ತಂದ್ರೆ,ಕರಡಿ ಓಡುಸ್ಕೊಂಡು ಬಂದಿದ್ದಕ್ಕೆ, ನನ್ನ ಮೇಲೆ ಯಾಕೆ ರೇಗ್ತಿರಾ ಅನ್ನುವ ಆಗಿತ್ತು.

ಓಡಿ ಓಡಿ ಇಬ್ಬರಿಗೂ ಸುಸ್ತು,ಪೆಳೆಯಲ್ಲಿ ಮರೆಯಾದ ಕರಡಿ ಮತ್ತೆ ಕಾಣಸ್ಲಿಲ್ಲಾ,ನಾವು ಬೇರೆ ಅಲ್ಲಿಂದಾನೇ ಮುಂದಕ್ಕೆ ಹೋಗಬೇಕು,ಈ ದತ್ತ ಬೇರೆ ಮುಂದಕ್ಕೂ ಹೋಗ್ತಿಲ್ಲ ಹಿಂದಕ್ಕೂ ಸರಿತಿಲ್ಲ, ನಮ್ಮಕಾಲಲ್ಲೇ,ಹೆದರ್ಕೊಂಡು ನಿಂತಿದೆ.ದೇವರೇ ಕಾಪಾಡಬೇಕು ಅಂತ, ನಿಧಾನವಾಗಿ ಬೆಕ್ಕಿನ ಹೆಜ್ಜೆಗಳ ಜೊತೆ,ನಿಶಬ್ದವಾಗಿ ಹೊರಟ್ವಿ.

ಕರಡಿ ಪೆಳೆಯಲ್ಲೇ,ಅಲ್ಲಿದ್ದ ಹುತ್ತವನ್ನ ಕೆಡವಿ, ಗೊದ್ದಗಳನ್ನ ತಿಂತಾ ಇರೋದು ಗಮನಿಸಿ, ನಿಧಾನವಾಗಿ ಪಾರಾಗಿ,ನಮ್ಮ ವಸ್ತುಗಳನ್ನು ತಗೊಂಡು ಮನೆ ದಾರಿ ಹಿಡಿದ್ವಿ. ಮುಂದಿನ ದಿನಗಳಲ್ಲಿ ದತ್ತ ನ್ನ,ಕಾಡಿಗೆ ಕರ್ಕೊಂಡು ಹೋದರೆ ಅಪಾಯನೇ ಹೆಚ್ಚು ಅಂತ,ಬಿಟ್ಟು ಹೋಗೋದಕ್ಕೆ,ಎಲ್ಲರೂ ಬಹಳ ಪ್ರಯತ್ನ ಪಟ್ವಿ.

ಅದು ನಮ್ಮ ಗುಂಪನ್ನ ಬಿಡಲಿಲ್ಲ, ಬರ್ತಾನೆ ಇತ್ತು.ಎಲ್ಲರ ಪ್ರೀತಿಗೆ ಬಹಳ ಹತ್ತಿರವಿದ್ದ ಶ್ವಾನವದು,ಕಾಡಲ್ಲಿ ಕಾಡಂದಿಗಳು ಕಂಡ್ರೆ ಹಾಗೇ ನುಗ್ಗಿ ಬಿಡೋದು,ಅದೇನಾಯ್ತೋ ಏನೋ? ಇದ್ದಕ್ಕಿದ್ದ ಹಾಗೆ,ಒಂದು ದಿನ ಕಣ್ಮರೆಯಾಯಿತು. ಮತ್ತೆಂದು ಕಾಣಿಸಲೇ ಇಲ್ಲ. ಎಲ್ಲರೂ ಮಾತಾಡ್ಕೊಂಡಿದ್ದು,ಕಾಡಲ್ಲಿ ಚಿರತೆಗೆ ಬಲಿಯಾಗಿದೆ ಅಂತ. ನಮ್ಮನ್ನ ಕಂಡೊಡನೆ ಬಾಲ ಆಡಿಸುತ್ತಾ ಬರುತ್ತಿದ್ದ,ದತ್ತನ ಪ್ರೀತಿಯ ನೆನಪುಗಳು ಇಂದಿಗೂ ನನ್ನನ್ನು ಕಾಡುತ್ತಲೇ ಇರುತ್ತವೆ.
ಮುಂದುವರೆಯುವುದು……
ಲೇಖನ-ಕುಮಾರ್ ಬಡಪ್ಪ, ಚಿತ್ರದುರ್ಗ.

 

- Advertisement -  - Advertisement - 
Share This Article
error: Content is protected !!
";