ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಪ್ರಜಾಪ್ರಭುತ್ವದ ಹೆಸರಿನಲ್ಲಿ ವಂಶರಾಜಕಾರಣ—ಇದು ಸ್ವಾತಂತ್ರ್ಯವೇ ಅಥವಾ ಹೊಸ ನಿರಂಕುಶತೆಯೇ…..?” “ಪ್ರಜಾಪ್ರಭುತ್ವದ ಮುಖವಾಡದ ಹಿಂದೆ ರಾಜತಂತ್ರವೇ? — ವಂಶರಾಜಕಾರಣದ ಬೆಳಕಿನಲ್ಲಿ ಇತಿಹಾಸ, ವರ್ತಮಾನ ಮತ್ತು ನಮ್ಮ ಭವಿಷ್ಯ”.
ಪ್ರಜಾಪ್ರಭುತ್ವ… ಈ ಪದ ಕೇಳುತ್ತಿದ್ದಂತೆ ಮನಸ್ಸಿನಲ್ಲಿ ಮೂಡುವ ಚಿತ್ರ—ಜನರ ಆಡಳಿತ, ಸಮಾನ ಅವಕಾಶಗಳು, ಪ್ರತಿಭೆಗೆ ಮೌಲ್ಯ, ಜನರ ಧ್ವನಿಗೆ ಗೌರವ. ಆದರೆ ನಿಜವಾಗಿ ನಾವು ಬದುಕುತ್ತಿರುವ ವ್ಯವಸ್ಥೆ ಇದೇನಾ? ಅಥವಾ ಈ ಪದದ ಹಿಂದೆ ಅಡಗಿರುವ ಮತ್ತೊಂದು ಕಠಿಣ ವಾಸ್ತವವನ್ನು ನಾವು ಕಾಣದೇ ಇರುವುದೇ? ಇತಿಹಾಸವನ್ನು ಒಮ್ಮೆ ಆಳವಾಗಿ ನೋಡುವ ಅಗತ್ಯ ಇದೆ.
ಅಂದಿನ ನಿರಂಕುಶ ಆಡಳಿತದಲ್ಲಿ ರಾಜನೇ ಎಲ್ಲವೂ. ಅವನ ಮಾತೇ ಕಾನೂನು, ಅವನ ಕುಟುಂಬವೇ ರಾಜ್ಯದ ಭವಿಷ್ಯ. ಯೂರೋಪಿನ ಹಲವಾರು ದೇಶಗಳಲ್ಲಿ “ದೈವಿಕ ಹಕ್ಕು” ಎಂಬ ಹೆಸರಿನಲ್ಲಿ ರಾಜರು ತಮ್ಮ ಅಧಿಕಾರವನ್ನು ದೇವರ ಕೊಡುಗೆ ಎಂದು ಘೋಷಿಸಿ ಜನರ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಫ್ರಾನ್ಸ್ನಂತಹ ದೇಶಗಳಲ್ಲಿ ಜನರು ಹಸಿವಿನಿಂದ ನರಳುತ್ತಿದ್ದರೂ ಅರಮನೆಗಳಲ್ಲಿ ವೈಭವದ ಜೀವನ ನಡೆಯುತ್ತಿತ್ತು. ಕೊನೆಗೆ ಆ ಅನ್ಯಾಯದ ವಿರುದ್ಧ ಜನರ ಕೋಪವೇ ಕ್ರಾಂತಿಯಾಗಿ ಸ್ಫೋಟಗೊಂಡಿತು.
ನಮ್ಮ ಭಾರತದಲ್ಲಿಯೂ ಇದೇ ಕಥೆ ಬೇರೆ ರೂಪದಲ್ಲಿ ಕಂಡುಬಂತು. ಅನೇಕ ಸಂಸ್ಥಾನಗಳಲ್ಲಿ ರಾಜಮನೆತನವೇ ಆಡಳಿತದ ಕೇಂದ್ರ. ಜನರ ಪಾಲ್ಗೊಳ್ಳುವಿಕೆ ಅಷ್ಟೇನೂ ಇರಲಿಲ್ಲ. ಅಧಿಕಾರವು ಒಂದು ವಂಶದ ಕೈಯಲ್ಲಿ ಸೀಮಿತವಾಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟದ ಮೂಲಕ ನಾವು ಆ ವ್ಯವಸ್ಥೆಯನ್ನು ತಳ್ಳಿ ಹಾಕಿ “ಜನರೇ ಆಡಳಿತದ ಮೂಲ” ಎಂಬ ಮಹತ್ವದ ತತ್ವವನ್ನು ಅಳವಡಿಸಿಕೊಂಡೆವು.
ಆದರೆ ಪ್ರಶ್ನೆ ಇಲ್ಲಿದೆ: ಅದು ನಿಜವಾಗಿಯೂ ಅಳಿದುಹೋಗಿದೆಯಾ? ಅಥವಾ ಹೊಸ ರೂಪದಲ್ಲಿ ಮರಳಿ ಬಂದಿದೆಯಾ?. ಇಂದಿನ ರಾಜಕೀಯವನ್ನು ಗಮನಿಸಿ. ಅಜ್ಜನ ನಂತರ ಮಗ. ಮಗನ ನಂತರ ಮೊಮ್ಮಗ. ಮತ್ತೆ ಅವರ ಮುಂದಿನ ಪೀಳಿಗೆ. ಇದು ಕೇವಲ ಯಾದೃಚ್ಛಿಕವೆ? ಅಥವಾ ನಿಖರವಾಗಿ ರೂಪುಗೊಂಡ ವಂಶಾಧಾರಿತ ರಾಜಕೀಯ ವ್ಯವಸ್ಥೆಯೇ?.
ಒಂದು ಪಕ್ಷಕ್ಕೆ ಸೀಮಿತವಲ್ಲ: ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಈ ಧೋರಣೆ ಸ್ಪಷ್ಟ. ವರ್ಷಗಳ ಕಾಲ ದುಡಿದ ಕಾರ್ಯಕರ್ತರು, ಹೋರಾಟಗಾರರು, ನೆಲಮಟ್ಟದಲ್ಲಿ ಪಕ್ಷವನ್ನು ಕಟ್ಟಿದವರು. ಅವರಿಗೆ ಕೊನೆಗೆ ಸಿಗೋದು ಏನು? ಬಹುಮಟ್ಟಿಗೆ ಕೇವಲ ನಿರೀಕ್ಷೆ. ಆದರೆ ಅಧಿಕಾರದ ಕುರ್ಚಿ? ಅದು ಮತ್ತೆ ಅದೇ ಕುಟುಂಬದ ಒಳಗೆ!. ಇದು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನೇ ಪ್ರಶ್ನಿಸುವ ವಿಚಾರ.
ಪ್ರಜಾಪ್ರಭುತ್ವ ಅಂದ್ರೆ ಸಮಾನ ಅವಕಾಶಗಳ ವ್ಯವಸ್ಥೆ. ಆದರೆ ಇಲ್ಲಿ ಅವಕಾಶವೇ ಒಂದು ಕುಟುಂಬಕ್ಕೆ ಸೀಮಿತವಾಗಿದ್ರೆ, ಅದನ್ನು ಪ್ರಜಾಪ್ರಭುತ್ವ ಅಂತ ಕರೆಯೋದು ಹೇಗೆ?.
ಇಲ್ಲಿ ಇತಿಹಾಸ ಮತ್ತು ಇಂದಿನ ರಾಜಕೀಯವನ್ನು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡೋಣ: ನಿರಂಕುಶ ರಾಜತಂತ್ರ (ಅಂದಿನದು):
ಅಧಿಕಾರ ವಂಶಪಾರಂಪರ್ಯ, ಜನರ ಪಾತ್ರ ಅಲ್ಪ, ವಿರೋಧಕ್ಕೆ ಅವಕಾಶ ಇಲ್ಲ. ವಂಶಾಧಾರಿತ ರಾಜಕೀಯ (ಹಿಂದಿನದು):
ಜನರ ಹೆಸರಿನಲ್ಲಿ ಅಧಿಕಾರ, ಆದರೆ ಕುಟುಂಬದ ಪ್ರಭಾವ ಸ್ಪಷ್ಟ, ಕಾರ್ಯಕರ್ತರಿಗಿಂತ ವಾರಸುದಾರರಿಗೆ ಆದ್ಯತೆ.
ಇಂದಿನ ರಾಜಕೀಯ ವಾಸ್ತವ:
ಪ್ರಜಾಪ್ರಭುತ್ವದ ವ್ಯವಸ್ಥೆ, ಆದರೆ ಟಿಕೆಟ್, ಅಧಿಕಾರ, ಕುಟುಂಬದ ಸುತ್ತ, ಹಣ, ಜಾತಿ, ಧರ್ಮ, ಪ್ರಭಾವ, ಇವೆಲ್ಲವೂ ಸೇರಿ ಜನರ ಆಯ್ಕೆಯನ್ನು ಪ್ರಭಾವಿಸುತ್ತಿವೆ.
ಹೀಗಾದರೆ ವ್ಯತ್ಯಾಸ ಎಲ್ಲಿ?.
ಹೆಸರುಗಳಲ್ಲಿ… ರೂಪದಲ್ಲಿ… ಆದರೆ ಆತ್ಮದಲ್ಲಿ?. ಹಿಂದೆ ಕತ್ತಿಯಿಂದ ಕಾಪಾಡಿದ ಅಧಿಕಾರವನ್ನು, ಇವತ್ತು ಹಣ, ಮತ್ತು ಜಾತಿ ಧರ್ಮಗಳ ಪ್ರಭಾವದಿಂದ ಕಾಪಾಡಿಕೊಳ್ಳಲಾಗುತ್ತಿದೆ. ಹಿಂದೆ ಸಿಂಹಾಸನವನ್ನು ಅರಮನೆಗಳಲ್ಲಿ ಕಾಯ್ದುಕೊಳ್ಳಲಾಗುತ್ತಿತ್ತು.
ಇವತ್ತು ಅದನ್ನು ಪಕ್ಷ ಕಚೇರಿಗಳಲ್ಲಿ ಮತ್ತು ರಾಜಕೀಯ ವ್ಯೂಹಗಳಲ್ಲಿ ಕಾಯ್ದುಕೊಳ್ಳಲಾಗುತ್ತಿದೆ. ಈ ವಂಶಪ್ರೇಮದ ಪರಿಣಾಮವೇನು?.
ಪ್ರತಿಭಾವಂತ ನಾಯಕರು ಹೊರಗುಳಿಯುತ್ತಾರೆ. ಸಾಮಾನ್ಯ ಕಾರ್ಯಕರ್ತರ ಉತ್ಸಾಹ ಕುಗ್ಗುತ್ತದೆ. ರಾಜಕೀಯದಲ್ಲಿ ಹೊಸ ಆಲೋಚನೆಗಳಿಗೆ ಅವಕಾಶ ಕಡಿಮೆಯಾಗುತ್ತದೆ. ಜನರ ನಂಬಿಕೆ ನಿಧಾನವಾಗಿ ಕುಸಿಯುತ್ತದೆ.
ಅತ್ಯಂತ ಗಂಭೀರ ಸಂಗತಿ ಏನೆಂದರೆ: ಜನರು ಇದನ್ನು ಸಹಜವೆಂದು ಒಪ್ಪಿಕೊಳ್ಳಲು ಆರಂಭಿಸುತ್ತಾರೆ. “ಅವನ ಮಗನೇ ಬರ್ತಾನೆ” ಅನ್ನೋ ಮನೋಭಾವವೇ ಪ್ರಜಾಪ್ರಭುತ್ವದ ಆತ್ಮಕ್ಕೆ ದೊಡ್ಡ ಹೊಡೆತ.
ಇದು ಕೇವಲ ರಾಜಕೀಯದ ಸಮಸ್ಯೆ ಅಲ್ಲ: ಇದು ಸಮಾಜದ ಪ್ರತಿಬಿಂಬ. ನಾವು ಪ್ರಶ್ನೆ ಕೇಳದಿದ್ದರೆ, ನಾವು ವಿರೋಧ ವ್ಯಕ್ತಪಡಿಸದಿದ್ದರೆ, ಈ ವ್ಯವಸ್ಥೆ ಎಂದಿಗೂ ಬದಲಾಗುವುದಿಲ್ಲ.
ಇತಿಹಾಸ ನಮಗೆ ಏನು ಕಲಿಸುತ್ತದೆ?. ಅನ್ಯಾಯವನ್ನು ಸಹಿಸಿದ ಸಮಾಜ ಕೊನೆಗೆ ತನ್ನ ಹಕ್ಕುಗಳನ್ನು ಕಳೆದುಕೊಳ್ಳುತ್ತದೆ. ಪ್ರಶ್ನಿಸಿದ ಸಮಾಜ ಮಾತ್ರ ಬದಲಾವಣೆಯನ್ನು ಕಾಣುತ್ತದೆ. ಫ್ರಾನ್ಸ್ ಕ್ರಾಂತಿ, ಭಾರತದ ಸ್ವಾತಂತ್ರ್ಯ ಹೋರಾಟ. ಇವೆಲ್ಲವೂ ಒಂದು ಸಂದೇಶ ನೀಡುತ್ತವೆ:
“ಅಧಿಕಾರ ಜನರದ್ದು—ಅದು ಯಾವ ವಂಶದ ಸ್ವತ್ತೂ ಅಲ್ಲ.” ಇಂದು ಮತ್ತೆ ನಾವು ಆ ತಿರುವಿನಲ್ಲಿದ್ದೇವೆ. ಪ್ರಜಾಪ್ರಭುತ್ವವನ್ನು ಉಳಿಸಬೇಕಾ?. ಅಥವಾ ಅದನ್ನು ವಂಶಪಾರಂಪರ್ಯದ ಹೆಸರಿನಲ್ಲಿ ಮೌನವಾಗಿ ಕಳೆದುಕೊಳ್ಳಬೇಕಾ?. ಈ ಪ್ರಶ್ನೆಗೆ ಉತ್ತರ ನೀಡೋದು ರಾಜಕಾರಣಿಗಳು ಅಲ್ಲ ಜನರು.
ಜನರು ಜಾಗೃತರಾದರೆ, ವ್ಯವಸ್ಥೆ ಬದಲಾಗುತ್ತದೆ. ಜನರು ಮೌನವಾಗಿದ್ದರೆ, ವಂಶರಾಜಕಾರಣ ಇನ್ನಷ್ಟು ಗಟ್ಟಿಯಾಗುತ್ತದೆ.

ಕೊನೆಗೆ ಒಂದು ಕಠಿಣ ಸತ್ಯ: ರಾಜರು ಹೋಗಿದ್ದಾರೆ… ಆದರೆ ರಾಜತಂತ್ರದ ಮನೋಭಾವ ಇನ್ನೂ ಬದುಕಿದೆ. ಅದನ್ನು ಮುರಿಯಬೇಕಾದ ಜವಾಬ್ದಾರಿ ನಮ್ಮದು. ಅದನ್ನು ಪ್ರಶ್ನಿಸಬೇಕಾದ ಧೈರ್ಯ ನಮ್ಮಲ್ಲಿರಬೇಕು.
ಆಗ ಮಾತ್ರ… ಪ್ರಜಾಪ್ರಭುತ್ವ ಕೇವಲ ಪದವಾಗಿರದೇ, ನಿಜವಾದ ವ್ಯವಸ್ಥೆಯಾಗುತ್ತದೆ.
ಲೇಖನ:ಶ್ರೀನಿವಾಸ್ ಕೆ ಟಿ, ಬೆಂಗಳೂರು.

