ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿ ನೋಂದಾಯಿತ, ಜಾಬ್ ಕಾರ್ಡ್ ಪಡೆದ ಕುಟುಂಬಸ್ಥರು ಇದೇ ಅಕ್ಟೋಬರ್-30 ರೊಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಗ್ರಾಮ ಪಂಚಾಯತಿ ಸಿಬ್ಬಂದಿಗಳು Face authentication ಮಾಡಲು ತಮ್ಮ ಮನೆಗಳಿಗೆ ಬಂದಾಗ ಸಹಕಾರ ಕೊಡುವುದು ಹಾಗೇ ಸಾಧ್ಯವಾದಲ್ಲಿ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್. ಆಕಾಶ್ ತಿಳಿಸಿದ್ದಾರೆ.
ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಕುಟುಂಬಗಳ ಕ್ರಿಯಾಶೀಲಾ 2,89,025 ಜಾಬ್ ಕಾರ್ಡ್ ಗಳಲ್ಲಿರುವ ಎಲ್ಲಾ ಸದಸ್ಯರುಗಳು ಇ-ಕೆವೈಸಿ ಮಾಡಿಸಬೇಕು.
ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಯಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯ ಈ ಪ್ರಕ್ರಿಯೆಗೆ ಮುಂದಾಗಿದೆ.
ಈಗಾಗಲೇ ನಮ್ಮ ಸಿಬ್ಬಂದಿಗಳು ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಇ-ಕೆವೈಸಿ ಪ್ರಕಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಪ್ರಕ್ರಿಯೆಯಲ್ಲಿ ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರೂ ತಮ್ಮ ತಮ್ಮ ಜಾಬ್ ಕಾರ್ಡ್ ಗಳಿಗೆ ಇ-ಕೆವೈಸಿ ಮಾಡಿಸಿಕೊಳ್ಳುವುದು. ಇ-ಕೆವೈಸಿ ಮಾಡಿಸಿಕೊಳ್ಳದ ಜಾಬ್ ಕಾರ್ಡ್ ಗಳು ನಿಷ್ಕ್ರೀಯವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಿ.ಪಂ ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.

