ಇ-ಪೌತಿ ಆಂದೋಲನ ಪ್ರಾರಂಭ : ಸದುಪಯೋಗಕ್ಕೆ ಮನವಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿನಿಂದ ಇ-ಪೌತಿ ಆಂದೋಲನ ಪ್ರಾರಂಭಿಸಿದ್ದು, ಸಂಬಂಧಿಸಿದ ಜಮೀನಿನ ಪೌತಿ ವಾರಸುದಾರರು ಕನಿಷ್ಟ ದಾಖಲೆಗಳನ್ನು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗೆ ನೀಡಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.      

2025-26ನೇ ಸಾಲಿನ ಆಯವ್ಯಯ ಭಾಷಣ ಕಂಡಿಕೆ 418 ರಲ್ಲಿ ಪಹಣಿಗಳಿಗೆ ಆಧಾರ್ ಜೋಡಣೆ ಸಂದರ್ಭದಲ್ಲಿ ಪೌತಿ ಎಂದು ಗುರುತಿಸಲಾದ ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಪ್ರಸಕ್ತ ಸಾಲಿನಲ್ಲಿ ಇ-ಪೌತಿ ಆಂದೋಲನ ಜಾರಿಗೊಳಿಸಲು ಕಂದಾಯ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ.

- Advertisement - 

ಕೃಷಿ ಜಮೀನಿನ ಮಾಲೀಕರು ಮರಣ ಹೊಂದಿದ ನಂತರ ಪೌತಿ, ವಾರಸಾ ರೀತ್ಯ ಮಾಲೀಕತ್ವವು ಮೃತರ ಉತ್ತರಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಹೊಂದಿದ್ದರೂ ಸಹ ಕುಟುಂಬಸ್ಥರಿಗೆ ಜಮೀನು ಅಭಿವೃದ್ಧಿಪಡಿಸಲು ಸಾಲ, ಸೌಕರ್ಯಗಳು ದೊರೆಯುವುದಿಲ್ಲ.

ಪ್ರಕೃತಿ ವಿಕೋಪದಂತಹ ವಿಪತ್ತುಗಳಿಂದಾಗಿ ಫಸಲು ನಾಶವಾದಾಗ ಸರ್ಕಾರದಿಂದ ನೀಡಲಾಗುವ ವಿಮೆ, ಪರಿಹಾರದ ಮೊಬಲಗನ್ನು ಪಡೆಯುವುದು ಕಷ್ಟವಾಗುತ್ತದೆ. ಈ ಹಿನ್ನಲೆಯಲ್ಲಿ ಮರಣದ ದೃಢೀಕರಣ ಪತ್ರ,  ಅಫಿಡವಿಟ್ ಮತ್ತು ವಂಶವೃಕ್ಷದಂತಹ ಕನಿಷ್ಟ ದಾಖಲೆಗಳ ಆಧಾರದ ಮೇಲೆ ಇ-ಪೌತಿ ತಂತ್ರಾಂಶದ ಮೂಲಕ ಇ-ಪೌತಿ ಆಂದೋಲನವನ್ನು ಪ್ರಾಯೋಗಿಕವಾಗಿ 2024ರ ಡಿಸೆಂಬರ್ 17 ರಿಂದ ಕೆಲವು ತಾಲ್ಲೂಕುಗಳಲ್ಲಿ ಪ್ರಾರಂಭಿಸಿದ್ದು, ಈಗ ರಾಜ್ಯದಾದ್ಯಂತ ನಡೆಸಲು ಸರ್ಕಾರವು ತೀರ್ಮಾನಿಸಿರುತ್ತದೆ.     

- Advertisement - 

ಅದರಂತೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಸಹ ಕಳೆದ ಒಂದು ತಿಂಗಳಿನಿಂದ ಇ-ಪೌತಿ ಆಂದೋಲನ ಪ್ರಾರಂಭಿಸಿದ್ದು, ಸಂಬಂಧಿಸಿದ ಜಮೀನಿನ ಪೌತಿ ವಾರಸುದಾರರು ಕನಿಷ್ಟ ದಾಖಲೆಗಳನ್ನು ಸಂಬಂಧಿಸಿದ ಗ್ರಾಮ ಆಡಳಿತ ಅಧಿಕಾರಿಗೆ ನೀಡಿ, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

 

 

Share This Article
error: Content is protected !!
";