ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ಹದಿಮೂರು ಗ್ರಾಮಗಳ 1.777ಎಕರೆ ಕೃಷಿ ಭೂಮಿಯನ್ನು ಕೆ. ಐ. ಎ. ಡಿ. ಬಿ. ಯ ಸ್ವಾದೀನ ದಿಂದ ಕೈ ಬಿಟ್ಟಿರುವ ಸರ್ಕಾರದ ನಿಲುವನ್ನು ಸ್ವಾಗತಿಸಿ ಇದು ರೈತರ ಮೂರು ವರ್ಷಗಳ ನಿರಂತರ ಹೋರಾಟಕ್ಕೆ ಸಂದ ಜಯ ಎಂದು ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಕನ್ನಡ ಪಕ್ಷ, ರಾಜ್ಯ ರೈತ ಸಂಘ, ಕಮ್ಯುನಿಸ್ಟ್, ಕನ್ನಡ, ರೈತ, ದಲಿತ, ಕಾರ್ಮಿಕ ಪರ ಸಂಘಟನೆಗಳ ಹೋರಾಟಗಾರರು ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.
ಸಂಭ್ರಮಾಚರಣೆಯಲ್ಲಿ ಕನ್ನಡಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್ ಮಾತನಾಡಿ ಚನ್ನರಾಯಪಟ್ಟಣದ ರೈತರ ಕೃಷಿ ಭೂಮಿ ಉಳಿಸುವ ಹೋರಾಟಕ್ಕೆ ಕನ್ನಡಪಕ್ಷ, ಕಮ್ಯುನಿಸ್ಟ್, ರೈತ ಸಂಘಟನೆಗಳು ಸೇರಿದಂತೆ ದೊಡ್ಡಬಳ್ಳಾಪುರದ ಹಲವಾರು ಸಂಘಟನೆಗಳ ಹೋರಾಟಗಾರರು ಪರ್ಸತಿಭಟನೆಯಲ್ಲಿ ಭಾಗವಹಿಸಿ ಧರಣಿ ನಿರತ ರೈತರಿಗೆ ಬೆಂಬಲ ಸೂಚಿಸಿದ್ದವು. ಇದರ ಸಂಬಂಧ ಕೆಲ ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಹೆಚ್. ಮುನಿಯಪ್ಪ ನವರನ್ನು ಬೇಟಿ ಮಾಡಿ ರೈತರ ಕೃಷಿ ಭೂಮಿ ಸ್ವಾದೀನ ವನ್ನು ಕೈ ಬಿಡಬೇಕೆಂದು ಮನವಿ ಪತ್ರ ಸಲ್ಲಿಸಲಾಗಿತ್ತು. ನಮ್ಮೆಲ್ಲ ಹೋರಾಟಗಾರರ, ರೈತರ ಹೋರಾಟಕ್ಕೆ ಮಣಿದು ರಾಜ್ಯ ಸರ್ಕಾರ ಭೂ ಸ್ವಾದೀನ ಪ್ರಕ್ರಿಯೆಯನ್ನು ಕೈ ಬಿಟ್ಟಿದೆ.
ಇದು ದೇಶದ ಐತಿಹಾಸಿಕ ಮೂರು ವರ್ಷಗಳ ಧೀರ್ಘ ಕಾಲದ ನಿರಂತರ ಹೋರಾಟಕ್ಕೆ ಇಂದು ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಹಿಂದೆ ರೈತ ಹೋರಾಟಗಾರರಿಗೆ ನೀಡಿದ್ದ ಬರವಸೆಯನ್ನು ಸ್ವಾದೀನ ಪ್ರಕ್ರಿಯೆಯನ್ನು ಕೈ ಬಿಡುವುದರ ಮುಖಾಂತರ ತಮ್ಮ ಮಾತನ್ನು ಉಳಿಸಿ ಕೊಂಡು ರೈತ ಪರ ನಿಲುವನ್ನು ತಾಳಿರುವುದು ಸ್ವಾಗತಾರ್ಹ ಸಂಗತಿ. ಹಾಗಾಗಿ ತಾಲೂಕಿನ ಎಲ್ಲಾ ಹೋರಾಟಗಾರರ ಪರವಾಗಿ ಸಿದ್ದರಾಮಯ್ಯ ನವರನ್ನು ಅಭಿನಂದಿಸುತ್ತೇವೆ. ಒಟ್ಟಾರೆ ರೈತರ ಅಹರ್ನಿಷಿ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಇದೊಂದು ಐತಿಹಾಸಿಕ ಜಯ ಎಂದು ಹೇಳಿದರು.
ಕಮ್ಯುನಿಸ್ಟ್ ಪಕ್ಷದ ಮುಖಂಡ ರುದ್ರಾರಾಧ್ಯ ಮಾತನಾಡಿ ಹಸಿರು, ಕೆಂಪು, ಹಳದಿ ಬಾವುಟಗಳು ಒಟ್ಟಾಗಿ ಹೋರಾಟ ಮಾಡಿದರೆ ಜಯ ಖಚಿತ ಎಂದು ಸಾಬೀತಾಗಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಯಾರ ವಿರೋಧವೂ ಇಲ್ಲ. ಆದರೆ ಬಂಡವಾಳ ಶಾಹಿಗಳ ಹಾಗೂ ಕಾರ್ಪೋರೆಟ್ ಕಂಪನಿಗಳ ಹಿತಾಸಕ್ತಿಗೋಸ್ಕರ ನೂರಾರು ಜನರಿಗೆ ಅನ್ನ ನೀಡುವ ಫಲವತ್ತಾದ ಭೂಮಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಸ್ವಾದಿನ ಪಡಿಸಿಕೊಳ್ಳುವ ಅವೈಜ್ಞಾನಿಕ ನೀತಿಗೆ ನಮ್ಮ ವಿರೋಧ ಇದ್ದೆ ಇರುತ್ತದೆ ಎಂದರು.
ರಾಜ್ಯ ರೈತ ಸಂಘದ ಪ್ರಸನ್ನ, ಕನ್ನಡಜಾಗೃತ ಪರಿಷತ್ತಿನ ಡಿ. ಪಿ. ಆಂಜನೇಯ, ಕಾರ್ಮಿಕ ಮುಖಂಡ ಪಿ. ಎ. ವೆಂಕಟೇಶ್ ಮತ್ತಿತರರು ಮಾತನಾಡಿ ಕಾರ್ಪೋರೆಟ್ ಕಂಪನಿಗಳ ಒತ್ತಡದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ರೈತರಿಗೆ ಹೋರಾಟಗಾರರಿಗೆ ನೀಡಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ. ಗ್ರಾಮಾಂತರ ಜಿಲ್ಲೆಯ ತಾಲೂಕುಗಳಲ್ಲಿ ಅವೈಜ್ಞಾನಿಕವಾಗಿ ನಡೆಯುತ್ತಿರುವ ಇನ್ನಿತರೆ ಭೂ ಸ್ವಾದೀನ ವನ್ನು ಕೈಬಿಡಬೇಕು. ರಾಜಧಾನಿಗೆ ಅನತಿ ದೂರದಲ್ಲಿರುವ ಜಿಲ್ಲೆಯ ರೈತರಿಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೆ ಸೂಕ್ತ ಅವಕಾಶ ಕಲ್ಪಿಸಿದರೆ ಗ್ರಾಮೀಣ ಭಾಗದ ಜನರಿಗೆಉದ್ಯೋಗ ತಾನಾಗಿಯೇ ದೊರೆಯಲಿದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಿದೆ ಎಂದು ಹೇಳಿದರು.
ಸಂಭ್ರಮಾಚರಣೆಯಲ್ಲಿ ಕನ್ನಡಪಕ್ಷದ ಜಿಲ್ಲಾಧ್ಯಕ್ಷ ಮುನಿ ಪಾಪಯ್ಯ, ತಾಲೂಕು ಅಧ್ಯಕ್ಷ ವೆಂಕಟೇಶ್, ರಾಜ್ಯ ರೈತ ಸಂಘದ ಮುತ್ತೇಗೌಡ, ಸತೀಶ್, ಡಾ. ರಾಜ್ ಅಭಿಮಾನಿ ಸಂಘದ ವಿ. ಪರಮೇಶ್ ಶಿವರಾಜ್ ಸೇನಾ ಸಮಿತಿಯ ರಮೇಶ್, ಕರವೇ ಆರಾಧ್ಯ, ಪ್ರಾಂತಿಯ ರೈತ ಸಂಘ, ಕಮ್ಯುನಿಸ್ಟ್ ಪಕ್ಷ, ಆಟೋ ಚಾಲಕರ ಸಂಘ, ಕನ್ನಡ, ದಲಿತ, ಪ್ರಗತಿಪರ ಸಂಘಟನೆಗಳ ಹಲವಾರು ಮುಖಂಡರು ಭಾಗವಹಿಸಿದ್ದರು.