ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲೂಕು ಹಿರೇಗುಂಟನೂರು ಹೋಬಳಿ ಈಚಲನಾಗೇನಹಳ್ಳಿ ಗ್ರಾಮದ ವಾಸಿ ರಂಗಮ್ಮ ತಿಪ್ಪೇಸ್ವಾಮಿ ಇವರು ಬುಧವಾರ ಸುರಿದ ಮಳೆಯಿಂದಾಗಿ ಮನೆ ಬಿದ್ದು ಮೃತ ಪಟ್ಟಿದ್ದು ಸ್ಥಳಕ್ಕೆ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ರವರು ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ನೀಡಿದರು.
ಮೃತ ಮಹಿಳೆ ರಂಗಮ್ಮ(63) ಅವರಿಗೆ ಇಬ್ಬರು ಹೆಣ್ಣು,ಇಬ್ಬರು ಗಂಡು ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತ ಮಹಿಳೆ ತನ್ನ ಮಗನೊಂದಿಗೆ ಮನೆಯಲ್ಲಿ ವಾಸವಾಗಿದ್ದು ತನ್ನ ಮಗ ಕೆಲಸಕ್ಕೆ ತೆರಳಿದ್ದು ತಾನು ಮನೆಯಲಿದ್ದ ಸಂದರ್ಭದಲ್ಲಿ ಮನೆಯ ಗೋಡೆ ಮತ್ತು ಚಾವಡಿ ಕುಸಿದು ಬಿದ್ದು ಸಾವನ್ನಿಪ್ಪಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶಾಸಕ ವೀರೇಂದ್ರ ಪಪ್ಪಿ ರವರು ಮೃತರ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ತಹಶೀಲ್ದಾರರಿಗೆ ಸೂಚಿಸಿದ್ದು ಕೇಂದ್ರ ಸರ್ಕಾರದ ಎಸ್.ಡಿ.ಆರ್.ಎಫ್/ಎನ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಪ್ರಕೃತಿ ವಿಕೋಪದಿಂದಾಗಿ ಜೀವ ಹಾನಿಯಾದ ಮೃತರ ವಾರಸುದಾರರಿಗೆ 4 ಲಕ್ಷ ರೂ.ಗಳನ್ನು ಪಾವತಿ ಮಾಡುವಂತೆ ಆದೇಶಿಸಿದರು. ರಾಜ್ಯ ಸರ್ಕಾರದ ಆದೇಶದಂತೆ ಮೃತರ ಕುಟುಂಬಕ್ಕೆ ಹೆಚ್ಚುವರಿಯಾಗಿ 1 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿದರು.
ಒಟ್ಟು 5 ಲಕ್ಷ ರೂ.ಗಳನ್ನು ಪ್ರಕೃತಿ ವಿಕೋಪದಿಂದಾಗಿ ಜೀವ ಹಾನಿಯಾದಂತಹ ಸಂದರ್ಭದಲ್ಲಿ ಪರಿಹಾರ ಪಾವತಿಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದರು.
ಮೃತ ಕುಟುಂಬಕ್ಕೆ 5 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಕುಟುಂಬದವರಿಗೆ ಆದೇಶ ಪ್ರತಿಯನ್ನು ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಮತ್ತು ತಹಶೀಲ್ದಾರ್ ನಾಗವೇಣಿ ನೀಡಿದರು.
ಪಂಚಾಯ್ತಿ ಅಧ್ಯಕ್ಷೆ ನಿರ್ಮಲ ದೇವರಾಜ್, ಸದಸ್ಯರಾದ ಸುರೇಶ್, ಮಾಜಿ ಸದಸ್ಯರಾದ ಸಿದ್ದಣ್ಣ, ಜಿಲ್ಲಾ ಕಾಂಗ್ರೆಸ್ ಪದವೀಧರರ ವಿಭಾಗದ ಅಧ್ಯಕ್ಷ ಪ್ರಕಾಶ್ ರಾಮಾನಾಯ್ಕ್, ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ಸಯ್ಯದ್ ಖುದ್ದೂಸ್, ಎಸ್ಟಿ ವಿಭಾಗದ ಅಧ್ಯಕ್ಷ ಬಿ ಮಂಜುನಾಥ್ , ಕೆಡಿಪಿ ಸದಸ್ಯರಾದ ನಾಗರಾಜ್, ಜಗದೀಶ್ ಮತ್ತಿತರು ಉಪಸ್ಥಿತರಿದ್ದರು.