ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭ್ರಷ್ಟ ಕರ್ನಾಟಕ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬಡಿದ ಗ್ರಹಣ! ಎಂದು ವಿಧಾನ ಪರಿಷತ್ ಶಾಸಕ ಸಿ.ಟಿ ರವಿ ಕೆಂಡಮಂಡಲವಾಗಿದ್ದಾರೆ.
ಇದು ಪದೇ ಪದೇ ಸಾಬೀತಾಗುತ್ತಲೇ ಬಂದಿದ್ದು, ಇಂದು ಚಂದ್ರ ಗ್ರಹಣವಾಗಿದ್ದರೂ, ರಾಜ್ಯದ ಜನರಿಗೆ ಆಡಳಿತಾತ್ಮಕ ಗ್ರಹಣ ಪ್ರತಿದಿನವೂ ಅನುಭವಕ್ಕೆ ಬರುತ್ತಿದೆ.
ಅವೈಜ್ಞಾನಿಕ ಗ್ಯಾರಂಟಿಯ ಹೆಸರಿನಲ್ಲಿ ‘ಶಕ್ತಿ‘ ಯೋಜನೆಯನ್ನು ಜಾರಿಗೆ ತಂದಿರುವ ರಾಜ್ಯ ಸರ್ಕಾರ, ಕೆಎಸ್ಆರ್‌ಟಿಸಿಯನ್ನು ನಿಶ್ಶಕ್ತಗೊಳಿಸಿದೆ. ಚಿಕ್ಕಮಗಳೂರು ನಗರದ ಕೇಂದ್ರ ಭಾಗದಲ್ಲಿ ಬಸ್ಸೊಂದಕ್ಕೆ ಬೆಂಕಿ ಹತ್ತಿರುವುದು ಆಘಾತಕಾರಿ ಮತ್ತು ಅಪಾಯಕಾರಿ ಎಂದು ರವಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸರ್ಕಾರಿ ಬಸ್‌ಗಳ ಫಿಟ್ನೆಸ್ ಪರೀಕ್ಷೆ ನಿಜಕ್ಕೂ ನಡೆಯುತ್ತಿದೆಯೇ? ಕಾಲಕಾಲಕ್ಕೆ ಸರ್ವಿಸ್ ನಡೆಸಲಾಗುತ್ತಿದೆಯೇ? ಅಥವಾ ಹದಗೆಟ್ಟ ಬಸ್‌ಗಳನ್ನು ರಾಜ್ಯದ ಬೇರೆ ಪ್ರದೇಶಗಳಿಗೆ ಸಾಗಹಾಕಲಾಗುತ್ತಿದೆಯೇ? ತಕ್ಷಣವೇ ರಾಜ್ಯದ ಬಸ್‌ಗಳ ಕೂಲಂಕಷ ಪರಿಶೀಲನೆ ಆಗಬೇಕು. ಜನರ ಜೀವದ ಜೊತೆ ಆಟವಾಡುವುದು ನಿಲ್ಲಲೇಬೇಕು.
ಇಂತಹ ದುರಂತಗಳಿಗೆ ಸಾರಿಗೆ ಸಚಿವರಾದ ಆರ್.ರಾಮಲಿಂಗಾರೆಡ್ಡಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರ ಹೊಣೆ ಎಂದು ಸಿಟಿ ರವಿ ಎಚ್ಚರಿಸಿದ್ದಾರೆ.

