ಚಂದ್ರವಳ್ಳಿ ನ್ಯೂಸ್, ಮಂಗಳೂರು:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶದಿಂದ ಹಣಕಾಸು ವ್ಯವಹಾರ ನಡೆದಿದೆರುವ ಆರೋಪ ಕೇಳಿ ಬಂದಿದೆ.
ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವನ್ನು ಸಿಬಿಐ ಅಥವಾ ಎನ್‍ಐಎ ಸಂಸ್ಥೆಯಿಂದ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.
ಮತ್ತೊಂದೆಡೆ ರಾಜ್ಯ ಸರ್ಕಾರ ಎಸ್ಐಟಿ ತನಿಖೆ ಸಾಕು ಎನ್ನುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ED) ಧರ್ಮಸ್ಥಳ ಪ್ರಕರಣದ ತನಿಖೆಗೆ ಎಂಟ್ರಿಯಾಗಿದೆ.
ವಿದೇಶಿ NGO ಗಳಿಂದ ಹಣ ಫಂಡಿಂಗ್ ಆಗಿದೆ ಎಂಬ ಅನುಮಾನ ಹಿನ್ನೆಲೆಯಲ್ಲಿ ಒಡನಾಡಿ ಹಾಗೂ ಸಂವಾದ ಸಂಸ್ಥೆಗಳ ಅಕೌಂಟ್ ಗಳ ಬಗ್ಗೆ ಇಡಿ ಮಾಹಿತಿ ಸಂಗ್ರಹ ಮಾಡುವ ಕೆಲಸ ಆರಂಭಿಸಿದೆ. ಹೀಗಾಗಿ ಕೆಲ ಅಕೌಂಟ್ ಗಳ ಮಾಹಿತಿ ನೀಡುವಂತೆ ಬ್ಯಾಂಕ್ಗೆ ಇಡಿ ಪತ್ರದ ಮೂಲಕ ಮನವಿ ಮಾಡಿದೆ. ಕಾನೂನು ಬಾಹಿರವಾಗಿ ವಿದೇಶಿ ಮೂಲಗಳಿಂದ ಹಣ ಬಂದಿರುವ ಆರೋಪ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಕಳೆದ 5 ವರ್ಷಗಳ ಟ್ರಾನ್ಸ್ಕ್ಷನ್ ನೀಡುವಂತೆ ಕೆಲ ಬ್ಯಾಂಕ್‌ಗಳಿಗೆ ಪತ್ರ ಬರೆದಿದ್ದಾರೆ.
ವಿದೇಶದಿಂದ ಹಣ ಬಂದಿರುವ ಕುರಿತು ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಗಳು, ವಿದೇಶದಿಂದ ಹಣ ಬಂದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವಂತೆ ಬ್ಯಾಂಕ್ ಗಳಿಗೆ ಇಡಿ ಅಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ ಕುರಿತು ಸಾಕಷ್ಟು ಅಪಪ್ರಚಾರ ಮಾಡಲಾಗಿದೆ. ಶವಗಳನ್ನು ಹೂತಿಡಲಾಗಿದೆ ಎನ್ನುವ ಸುದ್ದಿಗಳು ಕೂಡ ಹರಿದಾಡಿದ್ದವು. ಮಾಸ್ಕ್ಮ್ಯಾನ್ ತೋರಿಸಿದ ಎಲ್ಲ ಕಡೆ ಎಸ್ಐಟಿ ತನಿಖೆ ಮಾಡುತ್ತಿದೆ. ತನಿಖೆ ಚುರುಕು ಪಡೆಯುತ್ತಿದ್ದಂತೆ ವಿದೇಶಗಳಿಂದ ಫಂಡಿಂಗ್ ಆಗಿರುವ ಆರೋಪಗಳು ಕೇಳಿ ಬಂದಿದ್ದವು. ಈ ದೂರು ಆಧರಿಸಿ ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ.
ಒಂದು ವೇಳೆ ಭಾರೀ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿರುವುದು ಇಡಿ ತನಿಖೆಯಲ್ಲಿ ಕಂಡುಬಂದರೆ ಹಲವರಿಗೆ ಸಂಕಷ್ಟ ಎನ್ನಲಾಗಿದೆ.
ಕೋಟ ಶ್ರೀನಿವಾಸ ಪೂಜಾರಿ ಪತ್ರ-
ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಯೂಟ್ಯೂಬರ್ಗಳಿಗೆ ವಿದೇಶಗಳಿಂದ ಹಣ ಸಂದಾಯವಾಗುತ್ತಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕು ಎಂದು ಕೋರಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದರು.
ಧರ್ಮಸ್ಥಳ ದೇವಸ್ಥಾನಕ್ಕೆ ದೇಶ ವಿದೇಶಗಳಿಂದದ ಭಕ್ತರು ಬರುತ್ತಾರೆ. ಹೀಗಾಗಿ ದೇಗುಲದ ಪಾವಿತ್ರ್ಯತೆ ಉಳಿಸಬೇಕಿದೆ. ದೇವಾಲಯದ ಗೌರವಕ್ಕೆ ಧಕ್ಕೆ ಆಗಬಾರದು. ಅವರಿಗೆ ವಿದೇಶದಿಂದ ಹಣ ಬಂದ ಬಗ್ಗೆ ದೂರುಗಳು ಕೇಳಿಬಂದಿವೆ. ಇ.ಡಿ ಮೂಲಕ ತನಿಖೆ ನಡೆಸುವಂತೆ ಸಂಸದರು ಒತ್ತಾಯ ಮಾಡಿದ್ದರು.
ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ನಾನು ವ್ಯಕ್ತಿಗತವಾಗಿ ಪತ್ರ ಬರೆದಿಲ್ಲ. ಕರ್ನಾಟಕ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಸೂಚಿಸಿದ್ದಕ್ಕೆ ಸ್ವಾಗತವಿದೆ. ಆದರೆ, ಅನಾಮಧೇಯ ಭೀಮನಿಂದ ದಾರಿ ತಪ್ಪಿಸುವ ಕೆಲಸ ಆಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದ್ದರು.

