ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಹೊಸದಾಗಿ ಶೋಧ ಆರಂಭಿಸಿದೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ವಿರುದ್ಧ ಇಡಿ ಪ್ರಕರಣ ದಾಖಲಿಸಿದೆ ಎನ್ನಲಾಗಿದೆ.
ಬೆಂಗಳೂರು ಮತ್ತು ಮೈಸೂರಿನ 7-8 ಸ್ಥಳಗಳಲ್ಲಿ ಮುಡಾ ಹಗರಣ ಸಂಬಂಧ ಇಡಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿದೆ ಎನ್ನಲಾಗಿದೆ.
ಕಳೆದ ಅಕ್ಟೋಬರ್ 18 ಇಡಿ ಅಧಿಕಾರಿಗಳು ಮುಡಾ ಕಚೇರಿ ಸೇರಿದಂತೆ ಮೈಸೂರಿನ ಹಲವು ಸ್ಥಳಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಬಳಿಕ, ಇಡಿ ಅಧಿಕಾರಿಗಳು ಮುಡಾದ ಆರು ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿದ್ದರು.
ಈ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸಿದ್ದರು. ಅಲ್ಲದೆ ಇಡಿ ಅಧಿಕಾರಿಗಳು ಕಳೆದ ವಾರಗಳಿಂದೆ ಬೆಂಗಳೂರಿನ ಇಡಿ ಕಚೇರಿಯಲ್ಲಿ ಮುಡಾದ ಕೆಲವು ಕೆಳಹಂತದ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದನ್ನು ಸ್ಮರಿಸಬಹುದಾಗಿದೆ.
ಬೆಂಗಳೂರಿನ ಜೆ.ಪಿ.ನಗರದ ಬಿಲ್ಡರ್ ಎನ್. ಮಂಜುನಾಥ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇಡಿ ಅಧಿಕಾರಿಗಳು ಬಿಲ್ಡರ್ಸ್ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತದಲ್ಲಿ ದಾಖಲಾದ ಎಫ್‌ಐಆರ್‌ಮಾಹಿತಿಯಂತೆ ಸಿಎಂ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಸಿಐಆರ್ ದಾಖಲಿಸಿದೆ.
ಸಿದ್ದರಾಮಯ್ಯ ಅವರ ತಮ್ಮ ಪತ್ನಿಗೆ ಮುಡಾದಿಂದ 14 ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ಲೋಕಾಯುಕ್ತ ಹಾಗೂ ಇಡಿ ತನಿಖೆ ಎದುರಿಸುತ್ತಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನು ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದನ್ನು ಸ್ಮರಿಸಬಹುದಾಗಿದೆ.

