ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಮಗೆ ಇಡಿ ನೋಟಿಸ್ ನೀಡಿರುವುದು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಡಿ ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಅಲ್ಲದೆ ಇನ್ನೇನು?. ಇಡೀ ಮುಡಾ ಪ್ರಕರಣವೇ ರಾಜಕೀಯ ಪ್ರೇರಿತ ಎಂದು ಸಿಎಂ ಗಂಭೀರ ಆರೋಪ ಮಾಡಿದರು.
ಮುಡಾ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಕೊಡೋ ಆತಂಕ ಇದೆಯಾ? ಎಂಬ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ನನಗೆ ಯಾಕೆ ಆತಂಕ ಆಗುತ್ತದೆ? ನ್ಯಾಯಾಧೀಶರು ಏನು ಮಾಡ್ತಾರೆ ಗೊತ್ತಿಲ್ಲ. ನ್ಯಾಯಾಧೀಶರು ಆದೇಶ ಕಾಯ್ದಿರಿಸಿದ್ದಾರೆ. ನನಗೆ ನ್ಯಾಯ ಸಿಗುತ್ತೆ ಅಂತ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇ.ಡಿ. ಅವರು ಪತ್ನಿಗೆ ನೋಟಿಸ್ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ, ಇಡಿಯವರು ನೋಟಿಸ್ ಕೊಟ್ಟಿದ್ರು. ಅದಕ್ಕೆ ಹೈಕೋರ್ಟ್ ತಡೆ ನೀಡಿದೆ. ಯಾಕೆ ಇಷ್ಟು ಆತುರ ಅಂತ ನ್ಯಾಯಾಧೀಶರು ಕೇಳಿದ್ದಾರೆ. ತನಿಖೆ ನಡೆಯುತ್ತಿದೆ. ಸಿಬಿಐಗೆ ಕೊಡಬೇಕಾ, ಬೇಡ್ವಾ ಚರ್ಚೆ ಆಗ್ತಿದೆ. ಅದರ ಬಗ್ಗೆ ಆದೇಶ ಕಾಯ್ದಿರಿಸಿದೆ. ಈ ಹಂತದಲ್ಲಿ ನೀವು ಆತುರ ಮಾಡೋದು ಸರಿಯಲ್ಲ ಅಂತ ಕೋರ್ಟ್ ಹೇಳಿದೆ. ಹೀಗಾಗಿ ಕೋರ್ಟ್ ಸ್ಟೇ ಕೊಟ್ಟಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭ ಮೇಳ ಸಂಬಂಧದ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಅವರನ್ನೇ ಕೇಳಿ. ಪುಣ್ಯಸ್ನಾನ ಸಂಪ್ರದಾಯ ಅಷ್ಟೆನೇ. ಕುಂಭ ಮೇಳದಲ್ಲಿ ಸ್ನಾನ ಮಾಡುವುದು, ಗಂಗೆಯಲ್ಲಿ ಸ್ನಾನ ಮಾಡುವುದು ಸಂಪ್ರದಾಯ. ಪಾಪ ಪರಿಹಾರಕ್ಕೆ ಮಾಡುವುದು ಎಂಬ ನಂಬಿಕೆ ಇದೆ. ನಾವೆಲ್ಲಾ ಬಸವಣ್ಣನವರ ಅನುಯಾಯಿಗಳು ಎಂದು ಸಿಎಂ ತೀಕ್ಷ್ಣವಾಗಿ ಹೇಳಿದರು.