ಬಿಬಿಎಂಪಿ ಮುಖ್ಯ ಇಂಜಿನಿಯರ್ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಮುಖ್ಯ ಇಂಜಿನಿಯರ್ ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ‌.

ಬಿಬಿಎಂಪಿ ವತಿಯಿಂದ ಕೊಳವೆ ಬಾವಿ ಕೊರೆಯುವ ಹಾಗೂ ನೀರು ಸಂಸ್ಕರಣಾ ಘಟಕಗಳ (ಆರ್.ಒ) ಸ್ಥಾಪನೆಯಲ್ಲಿ ಹಣಕಾಸು ಅಕ್ರಮ ಪ್ರಕರಣದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದ್ದು ಪರಿಶೀಲನೆಗಾಗಿ ಇಡಿ ಅಧಿಕಾರಿಗಳ ಬಿಬಿಎಂಪಿ ಕಚೇರಿಗೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.

ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿರುವ ಚೀಫ್ ಇಂಜಿನಿಯರ್ ಕಚೇರಿಯ ಮೇಲೆ ಮಂಗಳವಾರ ಬೆಳಗ್ಗೆ 11 ಗಂಟೆಗೆ 7 ಜನರಿದ್ದ ಅಧಿಕಾರಿಗಳ ತಂಡ ದಾಳಿ ನಡೆಸಿ, ದಾಖಲಾತಿ ಪರಿಶೀಲನೆ ಮಾಡಿದೆ.

ಏನಿದು ಪ್ರಕರಣ:
ಬೆಂಗಳೂರು ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ 969 ಕೋಟಿ ರೂ. ವೆಚ್ಚದಲ್ಲಿ 9,588 ಕೊಳವೆಬಾವಿ ಹಾಗೂ 976 ನೀರು ಸಂಸ್ಕರಣಾ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಆದರೆ ಇದರಲ್ಲಿ 400 ಕೋಟಿಯಷ್ಟು ಬೃಹತ್ ಅಕ್ರಮ ನಡೆದಿದೆ ಎಂದು ಆರೋಪಿಸಿ ಆರ್.ಟಿ.ಐ ಕಾರ್ಯಕರ್ತ ಹಾಗೂ ಬಿಜೆಪಿ ಮುಖಂಡ ಎನ್.ಆರ್. ರಮೇಶ್
, 2019ರಲ್ಲಿ ದಾಖಲೆಗಳ ಸಮೇತ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿದ್ದರು.

ಅದರನ್ವಯ 2016 ರಿಂದ 2018ರ ವರೆಗಿನ ಆಯುಕ್ತರು, 5 ಜನ ಜಂಟಿ ಆಯುಕ್ತರು, 5 ಜನ ಮುಖ್ಯ ಇಂಜಿನಿಯರ್‌ಗಳು ಸೇರಿದಂತೆ 40ಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿತ್ತು. ಎಸಿಬಿ ರದ್ದಾದ ಬಳಿಕ ಪ್ರಕರಣದ ತನಿಖೆಯನ್ನು ಇಡಿಗೆ ವಹಿಸಲಾಗಿತ್ತು. ಹಾಗಾಗಿ ಇಡಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";