ಮುಡಾ ಕಚೇರಿ ಮತ್ತು ದೇವರಾಜ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಅವರಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ಜಾರಿ ನಿರ್ದೇಶನಾಲಯ(ಇಡಿ
) ಅಧಿಕಾರಿಗಳು ಶುಕ್ರವಾರ ದಾಳಿ ಮಾಡಿ ಹಲವು ಮಹತ್ವದ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿದ್ದ ಲೋಕಾಯುಕ್ತ ಎಫ್‌ಐಆರ್ ಅನ್ನು ಆಧರಿಸಿ ಇತ್ತೀಚಿಗೆ ಇಸಿಐಆರ್ ದಾಖಲಿಸಿದ್ದ ಇಡಿ ಅಧಿಕಾರಿಗಳು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು ಅಕ್ರಮ ನಿವೇಶನ ಹಂಚಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

20ಕ್ಕೂ ಹೆಚ್ಚಿನ ಇಡಿ ಅಧಿಕಾರಿಗಳು ಮುಡಾ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಲ್ಲದೆ ಪ್ರಕರಣದ ನಾಲ್ಕನೇ ಆರೋಪಿ ದೇವರಾಜು ಅವರ ಬೆಂಗಳೂರಿನ ಕೆಂಗೇರಿ ನಿವಾಸದ ಮೇಲೂ ಇಡಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ಮಹಿತಿ ಸಂಗ್ರಹ ಮಾಡಿದ್ದಾರೆ.

ಇಸಿಐಆರ್ ಪೊಲೀಸ್ ಎಫ್‌ಐಆರ್‌ಗೆ ಸಮಾನವಾಗಿದೆ. ಇಡಿ ದಾಖಲಿಸಿರುವ ಇಸಿಐಆರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1(1 ಆರೋಪಿ) ಆಗಿದ್ದಾರೆ.

ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್‌ನಲ್ಲಿ ಆರೋಪಿಗಳೆಂದು ಉಲ್ಲೇಖ ಮಾಡಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಇಡಿ ಅಧಿಕಾರಿಗಳು ಪಿಎಂಎಲ್ಎ  ಕಾಯ್ದೆಯಡಿ ಇಸಿಐಆರ್ ದಾಖಲಿಸಿದ್ದು, ಇದು ಇತರ ಕೆಲವು ಬಲವಂತದ ಕ್ರಮಗಳ ಜೊತೆಗೆ ಸಿಎಂ ಮತ್ತು ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ ಎನ್ನಲಾಗಿದೆ.

ಅಲ್ಲದೆ ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯುವ ಅಧಿಕಾರ ಇಡಿ ಅಧಿಕಾರಿಗಳಿದೆ ಎನ್ನಲಾಗಿದೆ. 

- Advertisement -  - Advertisement -  - Advertisement - 
Share This Article
error: Content is protected !!
";