ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಂಚಿಸಿರುವ ಆರೋಪದ ಐಶ್ವರ್ಯಾ ಗೌಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ED) ಸಮನ್ಸ್ ಜಾರಿ ಮಾಡಿದೆ.
ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ಅವರು ಮಾಜಿ ಸಂಸದ ಡಿಕೆ ಸುರೇಶ್ ಅವರ ಸಹೋದರಿ ಅಂತ ಹೇಳಿಕೊಂಡು ಕೋಟ್ಯಾಂತರ ಮೌಲ್ಯದ ಚಿನ್ನಾಭರಣ ವಂಚಿಸಿರುವ ಆರೋಪ ಕೇಳಿಬಂದಿತ್ತು.
ಐಶ್ವರ್ಯ ಗೌಡ ಹೇಳಿಕೆ ಮತ್ತು ಸಾಕ್ಷಿಗಳನ್ನು ಆಧರಿಸಿ ಜಾರಿ ನಿರ್ದೇಶನಾಲಯವು ಜೂನ್-19ರಂದು ಗುರುವಾರ ಬೆಳಗ್ಗೆ 11 ಗಂಟೆ ಸಮಯಕ್ಕೆ ವಿಚಾರಣೆಗೆ ಆಗಮಿಸುವಂತೆ ಡಿಕೆ ಸುರೇಶ್ ಅವರಿಗೆ ಸೂಚನೆ ನೀಡಿದೆ.
ಇಡಿ ಕಳುಹಿಸಿರುವ ನೋಟಿಸ್ ಪಡೆದಿರುವ ಡಿ.ಕೆ.ಸುರೇಶ್ ಅವರು ಜೂ.23ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಮಾಜಿ ಸಂಸದ ಡಿಕೆ ಸುರೇಶ್ ಇಡಿ ಸಮನ್ಸ್ ನೀಡಿರುವ ವಿಚಾರವಾಗಿ ಮಾತನಾಡಿ, ನನಗೆ ಇಡಿ ಅಧಿಕಾರಿಗಳಿಂದ ಸಮನ್ಸ್ ಬಂದಿದೆ. ಐಶ್ವರ್ಯ ಗೌಡ ಜೊತೆ ಯಾವುದೇ ಹಣದ ವ್ಯವಹಾರ ಮಾಡಿಲ್ಲ. ಜೂ.19ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ, ಜೂ.23ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದೇನೆ. ಎರಡು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರಿಂದ ನಾನು ಭಾಗಿಯಾಗಬೇಕಾಗಿದೆ ಎಂದು ಅವರು ಹೇಳಿದರು.
ಸದರಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಅಲ್ಲದೆ ನನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆಂದು ದೂರು ಕೊಟ್ಟಿದ್ದೆ. ಇಡಿ ಅಧಿಕಾರಿಗಳು ಏಳೆಂಟು ದಾಖಲೆಗಳು ಬೇಕು ಎಂದಿದ್ದಾರೆ. ಇಡಿ ಅಧಿಕಾರಿಗಳು ಕೇಳುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೇನೆ ಎಂದು ಸುರೇಶ್ ತಿಳಿಸಿದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಯಾವುದೇ ತನಿಖಾ ಸಂಸ್ಥೆ ನೋಟಿಸ್ ನೀಡಿದರೂ ಸ್ವೀಕರಿಸಿ ಅಗತ್ಯ ದಾಖಲೆಗಳನ್ನು ನೀಡುತ್ತೇವೆ. ಡಿ.ಕೆ.ಸುರೇಶ್ ಅವರು ಕಾನೂನಿನ ಚೌಕಟ್ಟಿನಲ್ಲಿ ತನಿಖೆಗೆ ಹಾಜರಾಗಿ ಇಡಿ ತನಿಖೆಗೆ ಸಹಕಾರ ನೀಡುತ್ತಾರೆ ಎಂದು ಹೇಳಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ಅವರು ತಮ್ಮ ಹೆಸರು ಹೇಳಿಕೊಂಡು ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದರು. ವಂಚನೆಗೊಳಗಾದ ಕೆಲವರು ಬಂದು ನನ್ನನ್ನು ಭೇಟಿಯಾಗಿದ್ದರು. ಈಗ ಇಡಿ ನೋಟಿಸ್ ನೀಡಿದ್ದಾರೆ, ಗೌರವದಿಂದ ಸ್ಪೀಕರಿಸಿದ್ದೇವೆ. ಮನೆಗೆ ನೋಟಿಸ್ ಅಂಟಿಸಿ ಹೋಗುವುದಾಗಿ ಹೇಳುತ್ತಿದ್ದಾರೆ ಅಂದರು. ನಾನೇ ಇಡಿ ನೋಟಿಸ್ ಸ್ವೀಕರಿಸುವಂತೆ ಮನೆಯವರಿಗೆ ಹೇಳಿದ್ದೇನೆ. ನನಗೂ, ಡಿ.ಕೆ.ಸುರೇಶ್ಗೂ ಇಡಿ ಅಧಿಕಾರಿಗಳ ತನಿಖೆ ಹೊಸದೇನಲ್ಲ. ಇಡಿ ಅಧಿಕಾರಿಗಳ ಮುಂದೆ ಹಾಜರಾಗಿ ಸ್ಪಷ್ಟೀಕರಣ ನೀಡುತ್ತೇವೆ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.