ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಪಠ್ಯ ವಿಷಯದ ಪರಿಕಲ್ಪನೆಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಲು ಕಲಿಕಾ ಸಂಪನ್ಮೂಲಗಳು ಮತ್ತು ತಂತ್ರಜ್ಞಾನ ಬಳಕೆ ಅಗತ್ಯ ಎಂದು ಡಯಟ್ ಉಪನ್ಯಾಸಕ ಎಸ್.ಬಸವರಾಜು ಹೇಳಿದರು.
ಹೊಳಲ್ಕೆರೆ ತಾಲೂಕಿನ ತಾಳ್ಯ ಗ್ರಾಮದ ಶ್ರೀ ಆಂಜನೇಯಸ್ವಾಮಿ ಸಂಯುಕ್ತ ಪ.ಪೂ ಕಾಲೇಜು ಪ್ರೌಢಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಿದ್ಧತೆ ಕುರಿತು ವಿದ್ಯಾರ್ಥಿಗಳ ಕಲಿಕಾ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಒಂದು ಚಿತ್ರ ನೂರು ಪದಗಳಿಗೆ ಸಮನಾಗಿದ್ದು ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ಕಲಿಕಾ ಸಂಪನ್ಮೂಲ ಮತ್ತು ತಂತ್ರಜ್ಞಾನ ಬಳಕೆ ಮಾಡುವುದರಿಂದ ವಿದ್ಯಾರ್ಥಿಗಳು ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳುವರು ಇದರಿಂದ ಬೋಧನೆ ಮತ್ತು ಕಲಿಕಾ ಪ್ರಕ್ರಿಯೆ ಪರಿಣಾಮಕಾರಿಯಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು ನಿರಂತರ ಅಧ್ಯಯನದಿಂದ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಶಾಲಾ ಅವಧಿ ಮುಗಿದ ನಂತರ ಪ್ರತಿದಿನ ಮನೆಯಲ್ಲಿ ತಾವು ಸೃಜಿಸಿಕೊಂಡಿರುವ ವೇಳಾಪಟ್ಟಿಗನುಸಾರವಾಗಿ ಪ್ರತಿ ವಿಷಯದಲ್ಲಿ ಘಟಕವಾರು ಮುಖ್ಯಾಂಶಗಳನ್ನು ಟಿಪ್ಪಣಿ ಮಾಡಿಕೊಂಡು ಪುನರ್ ಮನನ ಮಾಡಿಕೊಳ್ಳಬೇಕು ಎಂದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿನ ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದರು. ಮಕ್ಕಳಲ್ಲಿ ಪರೀಕ್ಷಾ ಒತ್ತಡ ನಿವಾರಣೆಗೆ ಆತ್ಮವಿಶ್ವಾಸ ತುಂಬಲು ಗೌರವಾನ್ವಿತ ಮಾನ್ಯ ಪ್ರಧಾನ ಮಂತ್ರಿಗಳು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ. ನೋಂದಣಿ ಮಾಡಿಕೊಳ್ಳಲು ಜನವರಿ ೧೪ ಕಡೆಯ ದಿನವಾಗಿದ್ದು ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಳ್ಳುವಂತೆ ಶಿಕ್ಷಕರು ಮಕ್ಕಳಿಗೆ ಪ್ರೇರಣೆ ನೀಡಬೇಕು ಎಂದರು.
ತಾಳ್ಯ ಸಮೂಹ ಸಂಪನ್ಮೂಲ ಕೇಂದ್ರದ ಸಿ.ಆರ್.ಪಿ ಪ್ರಕಾಶ್ ಪರೀಕ್ಷಾ ಚರ್ಚಾ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ನೋಂದಣಿ ಮಾಡಿಕೊಳ್ಳುವ ಕುರಿತು ಮಾರ್ಗದರ್ಶನ ಮಾಡಿದರು.
ಮುಖ್ಯ ಶಿಕ್ಷಕಿ ಕೆ.ಸಿ.ರಶ್ಮಿ, ಶಿಕ್ಷಕರಾದ ಎಸ್.ಹೆಚ್ ಶಾಂತಕುಮಾರ, ಜೆ.ನಾಗರಾಜ, ಡಿ.ಕೆ ವೇದಮೂರ್ತಿ, ಪಿ.ಎ ಸಂಧ್ಯಾ, ಜಿ.ಎಂ ಜ್ಯೋತಿ ಮತ್ತಿತರರಿದ್ದರು.