ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೌಡಿಶೀಟರ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದ ಎಂಟು ಮಂದಿ ಆರೋಪಿಗಳನ್ನು ಬಂಡೇಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೊಸ ರೋಡ್ ನಿವಾಸಿಯಾಗಿದ್ದ ಶಬ್ಬೀರ್ (29) ಹತ್ಯೆಯಾಗಿದ್ದ ರೌಡಿಶೀಟರ್. ಹಳೆ ವೈಷಮ್ಯದ ಕಾರಣದಿಂದ ಕೊಲೆ ಮಾಡಿದ ಆರೋಪದ ಮೇಲೆ ಮಂಗಮ್ಮನಪಾಳ್ಯ ನಿವಾಸಿಗಳಾದ ನೂರುಲ್ಲಾ (33), ನದೀಮ್ (34), ಸಲ್ಮಾನ್ ಖಾನ್ (27), ಮೊಹಮ್ಮದ್ ಅಲಿ (29), ಸೈಯದ್ಇಸ್ಮಾಯಿಲ್ (30), ಮೊಹಮ್ಮದ್ ಸಿದ್ದಿಕ್ (30), ಸೈಯದ್ ಕಲೀಮ್ (32) ಹಾಗೂ ಉಮೇಜ್ ರೆಹಮಾನ್ (26) ಬಂಧಿತರು.
ಏನಿದು ಘಟನೆ:
ಮೃತ ಶಬ್ಬೀರ್ ಹೊಸರೋಡ್ನ ಮನೆ ಸಮೀಪದಲ್ಲೇ ಗುಜರಿ ಅಂಗಡಿ ಇಟ್ಟುಕೊಂಡಿದ್ದ, 7-8 ವರ್ಷಗಳಿಂದ ಏರಿಯಾದಲ್ಲಿ ಪ್ರಾಬಲ್ಯ ಹೊಂದಿದ್ದ. ಸುಮಾರು 10-15 ಜನ ಅದಾಗಲೇ ಶಬ್ಬೀರ್ನಿಂದ ಹಲ್ಲೆಗೊಳಗಾಗಿದ್ದರು. ಹೀಗಾಗಿ ಶಬ್ಬೀರ್ ಇರುವವರೆಗೂ ತಮ್ಮ ವ್ಯವಹಾರಗಳಿಗೆ ಅಡ್ಡಿಯಾಗುತ್ತಾನೆಂದು ಯೋಚಿಸಿದ್ದ ಆರೋಪಿಗಳು ಆತನ ಹತ್ಯೆಗೆ ಸಂಚುರೂಪಿಸಿದ್ದರು.
ಜನವರಿ-12ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಸಂಬಂಧಿಯೊಬ್ಬರನ್ನು ನೋಡಿಕೊಂಡು ರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತರ ಜತೆ ಆಟೋದಲ್ಲಿ ಶಬ್ಬೀರ್ ಮನೆಗೆ ಹೋಗುತ್ತಿದ್ದ. ಅದೇ ವೇಳೆ ಆರೋಪಿಗಳ ಗುಂಪು ಆಟೋ ನಿಲ್ಲಿಸಿ ಶಬ್ಬಿರ್ ಕಣ್ಣಿಗೆ ಕಾರದ ಪುಡಿ ಎರಚಿ ಭೀಕರವಾಗಿ ಹಲ್ಲೆ ನಡೆಸಿ, ಹತ್ಯೆಗೈದು ಪರಾರಿಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡು ಎಂಟು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

