ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರಾದ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಚುನಾವಣೆ ನಡೆದರೂ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ.
ಕಾಂಗ್ರೆಸ್ ಪಕ್ಷದ ಶಾಸಕ, ಜಿಲ್ಲಾ ಸಚಿವ ಡಿ.ಸುಧಾಕರ್ ಒಂದು ಕಡೆಯಾದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಅವರ ವಿರುದ್ಧ ಸೆಟೆದು ನಿಲ್ಲುವುದು ಸಾಮಾನ್ಯ.
ಹಿರಿಯೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ತಯಾರಿ ಭಾರೀ ಸದ್ದು ಮಾಡುತ್ತಿದ್ದ ಸಂದರ್ಭದಲ್ಲೇ . ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ 12ಕ್ಕೆ 12 ಸ್ಥಾನಗಳಿಗೂ ಅವಿರೋಧ ಆಯ್ಕೆಗೆ ಪ್ರಯತ್ನ ನಡೆದಿತ್ತು.
ರಾಜಕೀಯವಾಗಿ ಬಹಳ ಪ್ರಭಾವವಿರುವ ಸುಧಾಕರ್ ಪಟ್ಟು ಹಿಡಿದಿದ್ದರೆ 12ಕ್ಕೆ 12 ಸ್ಥಾನಗಳನ್ನು ಕಾಂಗ್ರೆಸ್ ತೆಕ್ಕೆಗೆ ಪಡೆಯಬಹುದಾಗಿತ್ತು.
ಆದರೆ ಯುವ ನಾಯಕ ಕೆ.ದ್ಯಾಮೇಗೌಡ ಇದಕ್ಕೆ ಅವಕಾಶ ನೀಡದೆ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ 12 ಮಂದಿ ನಿರ್ದೇಶಕರನ್ನು ಅವಿರೋಧ ಮಾಡಲು ಸಾಕಷ್ಟು ಪಟ್ಟು ಹಿಡಿದರು.

ಆದರೆ ಸಚಿವ ಸುಧಾಕರ್ ಅವರಿಂದ ಸೂಚಿತವಾದ ಮುಖಂಡರು ಇದಕ್ಕೆ ಒಪ್ಪಲಿಲ್ಲ, ಕೊನೆಗೆ ದ್ಯಾಮೇಗೌಡರು ಕಾಂಗ್ರೆಸ್ ಪಕ್ಷಕ್ಕೆ 4 ಸ್ಥಾನಗಳಿಗೆ ಮಿತಿಗೊಳಿಸಿ ನೀಡಿದರು.
ಹಾಗಾಗಿ ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ನಿರ್ದೇಶಕರು 8 ಮಂದಿ, ಕಾಂಗ್ರೆಸ್ ಬೆಂಬಲಿತ 4 ಮಂದಿ ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ಮುಖಂಡರಿಗೆ ಈ ಚುನಾವಣೆ ಪ್ರತಿಷ್ಠೆಯ ವಿಷಯದೊಂದಿಗೆ ಮೇಲಾಟಕ್ಕೆ ಕಾರಣವಾಗಿತ್ತು.
ಅತಿಮುಖ್ಯವಾಗಿ 2028ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಈ ಸೊಸೈಟಿ ರಾಜಕೀಯ ವೇದಿಕೆ ಒದಗಿಸಿಕೊಟ್ಟಿಲ್ಲದೆ ಭವಿಷ್ಯದ ತಾಪಂ, ಜಿಪಂ, ಗ್ರಾಪಂ ಚುನಾವಣೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಜಂಟಿಯಾಗಿ ಒಗ್ಗೂಡಿ ಹೋರಾಟ ಮಾಡಲಾಗುತ್ತದೆ ಎನ್ನುವ ಸಂದೇಶವನ್ನು ಜಿಲ್ಲಾ ಸಚಿವರು ಹಾಗೂ ಕ್ಷೇತ್ರದ ಶಾಸಕ ಸುಧಾಕರ್ ಗೆ ರವಾನೆಸಲಾಯಿತು.
ಪತ್ತಿನ ಸಹಕಾರ ಸಂಘದ ಈ ಚುನಾವಣೆ ಮುಂಬರುವ ರಾಜಕೀಯದಲ್ಲಿ ಬಹಳ ಮಹತ್ವದ ಚುನಾವಣೆ ಇದಾಗಿತ್ತು. 8 ಸ್ಥಾನಗಳನ್ನು ಬಿಜೆಪಿ, ಜೆಡಿಎಸ್ ಬಿಟ್ಟು ಕೊಡುವ ಮೂಲಕ ಕಾಂಗ್ರೆಸ್ ಪಕ್ಷ ಮತ್ತು ಆ ಪಕ್ಷದ ಸಚಿವರು, ಮುಖಂಡರಿಗೆ ಹಿನ್ನಡೆಯಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಾಮಾನ್ಯವಾಗಿ ಚುನಾವಣಾ ತಂತ್ರಗಾರಿಕೆ ರೂಪಿಸುವಲ್ಲಿ ಕೆ.ದ್ಯಾಮೇಗೌಡ ಎತ್ತಿದ ಕೈ ಎಂದೇ ಹೆಸರಾಗಿದ್ದಾರೆ. ಈರುಳ್ಳಿ ಕಟಾವು ಮಧ್ಯಯೂ ಊರಲ್ಲಿ ಬೀಡುಬಿಟ್ಟು ದ್ಯಾಮೇಗೌಡ ತಂತ್ರಗಾರಿಕೆ ಹಣೆಯುತ್ತಿದ್ದರು.
ಚುನಾವಣೆಗೂ ಮುನ್ನವೇ, ಮೂರು ಪಕ್ಷಗಳ ಮುಖಂಡರು ಕಾರ್ಯಕರ್ತರ ನಡುವೆ, ಮಾತಿನ ಚಕಮಕಿ ನಡೆದಿತ್ತು. ಒಂದಿಷ್ಟು ಬಿಗಿ ಹಿಡಿದಿದ್ದರೆ ಅಕ್ಟೋಬರ್-26 ರಂದು ಭಾನುವಾರ ಚುನಾವಣಾ ನಡೆಯಬೇಕಿತ್ತು. ಆದರೆ ಅದಕ್ಕೆ ದ್ಯಾಮೇಗೌಡ ಅವಕಾಶ ನೀಡಲಿಲ್ಲ. ಬಹುಮತದೊಂದಿಗೆ 8 ಮಂದಿ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡುತ್ತಿದ್ದಂತೆ ಬೆಂಬಲಿಗರು ಭರ್ಜರಿ ಸಂಭ್ರಮಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.
ಅವಿರೋಧ ಆಯ್ಕೆಯಾದ ನಿರ್ದೇಶಕರು-
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ದ್ಯಾಮೇಗೌಡರ ನೇತೃತ್ವದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಬೆಂಬಲಿತ ನಿರ್ದೇಶಕರುಗಳಾದ ಕೋವೇರಹಟ್ಟಿ ಕೆ.ದ್ಯಾಮೇಗೌಡ, ರವಿ ವರ್ಮ, ಪಾಲವ್ವನಹಳ್ಳಿಯ ಬಿ.ಆರ್.ರಾಮಚಂದ್ರಪ್ಪ, ದಿನೇಶ್, ಮಂಜಕ್ಕ, ಲತಾ, ಭಾಗ್ಯಮ್ಮ ಗೋವಿಂದಪ್ಪ ಹಾಗೂ ಕಾರೋಬನಹಳ್ಳಿ ರತ್ನಮ್ಮ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಡಿ.ಸುಧಾಕರ್ ನೇತೃತ್ವದ ಕಾಂಗ್ರೆಸ್ ಪಕ್ಷದ ಬೆಂಬಲಿತ ನಿರ್ದೇಶಕರುಗಳಾದ ಪಾಲವ್ವನಹಳ್ಳಿಯ ಚಿದಾನಂದ, ರವೀಂದ್ರಪ್ಪ, ಬಾಷಾಸಾಬ್, ರಾಜಣ್ಣ ಇವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.
“ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ. ಅದೇ ರೀತಿ ಮುಂಬರುವ ಎಲ್ಲ ಚುನಾವಣೆಗಳನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಳ್ಳಲಿವೆ. ಪಾಲವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಕೂಡಾ ಬಿಜೆಪಿ-ಜೆಡಿಎಸ್ ಮೈತ್ರಿಯ ಭಾಗವಾಗಿದ್ದರಿಂದ 8 ಸ್ಥಾನಗಳನ್ನು ಮೈತ್ರಿ ಪಕ್ಷಗಳು ಪಡೆದುಕೊಂಡಿವೆ”.
ಕೆ.ದ್ಯಾಮೇಗೌಡ, ಮಾಜಿ ಉಪಾಧ್ಯಕ್ಷರು, ಜಿಪಂ, ಚಿತ್ರದುರ್ಗ.

