ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಅನಸೂಯಾ ಮಹಾಭಾಗಾ ತಾಪತ್ರಯ ವಿನಾಶಿನೀ। ಪತಿಸೇವಾಪರಾಧಿಷ್ಠಾ ಪತಿವ್ರತಾ ನಮೋऽಸ್ತು ತೇ॥ ಸತ್ಯಂ ಶೌಚಂ ದಯಾ ಶಾಂತಿಭಕ್ತಿರೂಪಾ ನಮಾಮ್ಯಹಮ್। ಚಿಕ್ಕಮಗಳೂರಿನಲ್ಲಿ ಪತಿವ್ರತಾ ಶಿರೋಮಣಿ ಮಾತೆ ಅನಸೂಯಾ ದೇವಿಯವರ ಜಯಂತಿಯ ಪ್ರಯುಕ್ತ ಪೂಜೆ ಸಲ್ಲಿಸಿ, ಬೋಳ ರಾಮೇಶ್ವರಸ್ವಾಮಿ ದೇವಾಲಯದಿಂದ ಕಾಮದೇನು ಗಣಪತಿ ದೇವಾಲಯದ ತನಕ ಗುರು ದತ್ತಾತ್ರೇಯರ ಪಲ್ಲಕ್ಕಿ ಹಾಗೂ ಮಾತೆ ಅನಸೂಯಾ ದೇವಿ ಚಿತ್ರಪಟವನ್ನು ಹೊತ್ತು, ಸಹಸ್ರಾರು ಜನ ಮಾತೆಯರ ಜಯಘೋಷ, ಸಂಕೀರ್ತನೆ ಯಾತ್ರೆಯ ಮೂಲಕ ದತ್ತ ಜಯಂತಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ.
ಅದ್ದೂರು ಮೆರವಣಿಗೆ-
ಅನಸೂಯ ಜಯಂತಿಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆಹೊರಟು ಪಾಲಿಟೆಕ್ನಿಕ್ ಕಾಲೇಜು ಸಮೀಪ ಮುಕ್ತಾಯಗೊಂಡಿತು.
ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಮಹಿಳೆಯರು ಭಾಗವಹಿಸಿದ್ದರು. ದತ್ತಾತ್ರೇಯ ವಿಗ್ರಹದೊಂದಿಗೆ ಮೆರವಣಿಗೆ ಸಾಗಿತು. ದತ್ತ ಭಜನೆ, ಅನಸೂಯ ಭಜನೆಯೊಂದಿಗೆ ಮೆರವಣಿಗೆ ಸಾಗಿತು. ಮಹಿಳೆಯರು ಮೆರವಣಿಗೆಯ ಬಳಿಕ ದತ್ತಪೀಠಕ್ಕೆ ತೆರಳಿ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಹೋಮ ಹವನಗಳಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮುಖಂಡರು ಭಾಗವಹಿಸಿದ್ದರು. ಚಿಕ್ಕಮಗಳೂರು ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ಮಧ್ಯಾಹ್ನದ ಬಳಿಕ ಶೋಭಾಯಾತ್ರೆ ನಡೆಯಲಿದ್ದು ಅದಕ್ಕೂ ಮೊದಲು ಕೆಲ ಕಾರ್ಯಕರ್ತರು ಭಿಕ್ಷಾಟನೆ ನಡೆಸಲಿದ್ದಾರೆ.
ಶೋಭಾಯಾತ್ರೆ ಅಂಗವಾಗಿ ಶುಕ್ರವಾರ ಬೆಳಗ್ಗೆಯಿಂದಲೇ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದ್ದು, ಮುಖ್ಯರಸ್ತೆ ಸಂಪರ್ಕಿಸುವ ಅಡ್ಡ ರಸ್ತೆಗಳಲ್ಲಿಯೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಜಿಲ್ಲೆಯಾದ್ಯಂತ ಶುಕ್ರವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಲಾಗಿದೆ. ದತ್ತ ಜಯಂತಿ ಅಂಗವಾಗಿ, ಪ್ರಮುಖ ವೃತ್ತಗಳನ್ನು ಕೇಸರಿ ಬಂಟಿಂಗ್ಸ್ಗಳಿಂದ ಸಿಂಗರಿಸಲಾಗಿದೆ. ಅನೇಕ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಸರ್ಪಗಾಗಲು ನಿಯೋಜನೆ ಮಾಡಲಾಗಿದೆ.