ವಿದ್ಯುತ್ ಶಾರ್ಟ್ ಸರ್ಕ್ಯೂಟ್, ತೆಂಗು, ಮಾವು, ದಾಳಿಂಬೆ, ಶ್ರೀಗಂಧ, ತೇಗ ಸಂಪೂರ್ಣ ಭಸ್ಮ
ಲಕ್ಷಾಂತರ ರೂ.ಗಳ ಹಾನಿ, ಬೀದಿಗೆ ಬಿದ್ದ ರೈತರು
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ರೈತರ ತೋಟಗಳಿಗೆ ಬೆಂಕಿ ತಗುಲಿದ ಪರಿಣಾಮ ತೆಂಗಿನ ಮರಗಳು, ಬೆಲೆ ಬಾಳುವ ತೇಗ, ಶ್ರೀಗಂಧ, ಬೇವು ಇತರೆ ಮರಗಳು, ಮಾವಿನ ತೋಟ ಸೇರಿದಂತೆ ಹನಿ ನೀರಾವರಿ ಉಪಕರಣಗಳು, ವಿದ್ಯುತ್ ಉಪಕರಣಗಳು, ದಾಳಿಂಬೆ ತೋಟ ಸೇರಿದಂತೆ ಇತರೆ ಕೃಷಿ ಉಪಕರಣಗಳೆಲ್ಲವೂ ಬೆಂಕಿಗೆ ಆಹುತಿಯಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರಿಯಬ್ಬೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಬೆಂಕಿ ತಗುಲಿದ ಪರಿಣಾಮ ಹರಿಯಬ್ಬೆ ಗ್ರಾಮದ ರೈತ ಗುಂಡೇಗೌಡರ 11 ಎಕರೆ ಜಮೀನಿನಲ್ಲಿನ ಫಸಲು ಬಿಡುತ್ತಿದ್ದ 30 ತೆಂಗಿನ ಮರಗಳು, 200 ಶ್ರೀಗಂಧದ ಮರಗಳು, 60 ಮಾವಿನ ಮರಗಳು, 95 ತೇಗದ ಮರಗಳು, ಹನಿ ನೀರಾವರಿ ಉಪಕರಣಗಳು, ವಿದ್ಯುತ್ ಮೋಟರ್ ಪಂಪ್ ಸೆಟ್, ಪೈಪ್ ಲೈನ್ ಸೇರಿದಂತೆ ಸಂಪೂರ್ಣ ಹಾನಿಯಾಗಿ ಲಕ್ಷಾಂತರ ರೂ.ನಷ್ಟವಾಗಿದೆ.
ಶ್ರವಣಗೆರೆ ರೈತ ಗೋವಿಂದರೆಡ್ಡಿ ಅವರ ಜಮೀನಿನಲ್ಲಿನ ಫಸಲಿಗೆ ಬಂದಿದ್ದ 2500 ದಾಳಿಂಬೆ ಹಣ್ಣಿನ ಗಿಡಗಳು, ಹನಿ ನೀರಾವರಿ ಉಪಕರಣಗಳು, ವಿದ್ಯುತ್ ಮೋಟರ್ ಪಂಪ್ ಸೆಟ್ ಸೇರಿದಂತೆ ಎಲ್ಲ ಎಲ್ಲ ಕೃಷಿ ಉಪಯೋಗಿ ಉಪಕರಣಗಳು ಬೆಂಕಿಗಾಹುತಿಯಾಗಿವೆ.
ಬೆಂಕಿ ಹೇಗೆ ಬಿತ್ತು- ಆರಂಭದಲ್ಲಿ ರೈತ ಗೋವಿಂದರೆಡ್ಡಿ ಅವರ ದಾಳಿಂಬೆ ತೋಟದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ವಿದ್ಯುತ್ ಪರಿವರ್ತಕ ಸಿಡಿದು ಬೆಂಕಿ ಇಡೀ ಆವರಿಸಿದೆ. ಬೆಂಕಿ ಇಡೀ ದಾಳಿಂಬೆ ತೋಟವನ್ನು ಆಪೋಶನ ತೆಗೆದುಕೊಂಡ ನಂತರ ದಾಳಿಂಬೆ ತೋಟದ ಪಕ್ಕದ ಜಮೀನಿನಲ್ಲೇ ಇದ್ದ ಗುಂಡೇಗೌಡರ ತೆಂಗು, ಮಾವು, ಶ್ರೀಗಂಧ, ತೇಗ ಮರಗಳಿದ್ದ ತೋಟಕ್ಕೂ ಆವರಿಸಿ ಇಡೀ ತೋಟವನ್ನು ಭಸ್ಮ ಮಾಡಿದೆ.
ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕ ಪಕ್ಕದ ರೈತರು ಸಾಕಷ್ಟು ಪ್ರಯತ್ನ ಮಾಡಿದರೂ ಆ ವೇಳೆಗಾಗಲೇ ಬೆಂಕಿಯ ಕೆನ್ನಾಲಿಗೆ ಇಡೀ ತೋಟವನ್ನು ಭಸ್ಮ ಮಾಡಿದೆ. ಇದಾದ ನಂತರ ಹಿರಿಯೂರು ಅಗ್ನಿಶಾಮಕ ದಳದ ಸಿಬ್ಬಂದಿಗಳು ತಡವಾಗಿ ಆಗಮಿಸಿದ್ದು ರೈತರ ತೋಟಗಳಲ್ಲಿನ ಗಿಡ ಮರಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಕಂದಾಯ, ಬೆಸ್ಕಾಂ, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು, ಸಂಕಷ್ಟದಲ್ಲಿರುವ ರೈತನಿಗೆ ಆಗಿರುವ ನಷ್ಟವನ್ನು ಸರ್ಕಾರದಿಂದ ತುಂಬಿಸಿಕೊಡಬೇಕು ಎಂದು ಸಂತ್ರಸ್ತ ರೈತರ ಪರವಾಗಿ ಹರಿಯಬ್ಬೆ, ಶ್ರವಣಗೆರೆ ರೈತರು ಒತ್ತಾಯಿಸಿದ್ದಾರೆ.