ಹುಬ್ಬಳ್ಳಿ, ಬೆಳಗಾವಿ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಮನವಿ ಮಾಡಿದ ಎಂಬಿಪಾ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಕೆ.ರಾಮಮೋಹನ್ ನಾಯ್ಡು ಅವರನ್ನು ನವದೆಹಲಿಯಲ್ಲಿ ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್  ಭೇಟಿಯಾಗಿ ಮಾತು ಕತೆ ನಡೆಸಿದೆರು.

ಹುಬ್ಬಳ್ಳಿ, ಬೆಳಗಾವಿ ಏರ್ಪೋರ್ಟ್ ಅಂತರರಾಷ್ಟ್ರೀಯ ನಿಲ್ದಾಣಕ್ಕೆ ಮನವಿ ಮಾಡಿದರು. ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಖೈರು, ವಿಜಯಪುರ ಏರ್ಪೋರ್ಟ್ ಕಾರ್ಯಾರಂಭಕ್ಕೆ ಕೋರಿಕೆ, ಕರ್ನಾಟಕವನ್ನು ಪಾಲುದಾರ (ಸ್ಟೇಕ್ಹೋಲ್ಡರ್) ಎಂದು ಪರಿಗಣಿಸಬೇಕು ಎಂದು ಪಾಟೀಲ್ ಕೇಂದ್ರ ಸಚಿವರಲ್ಲಿ ಮನವಿ ಮಾಡಿದರು.

- Advertisement - 

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಆಖೈರು, ವಿಜಯಪುರ ವಿಮಾನ ನಿಲ್ದಾಣ ಲೋಕಾರ್ಪಣೆಗೆ ಒಪ್ಪಿಗೆ, ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವುದು ಸೇರಿದಂತೆ ಕರ್ನಾಟಕದ ವೈಮಾನಿಕ ವಲಯದ ಹಲವು ಬೇಡಿಕೆಗಳೊಂದಿಗೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಅವರನ್ನು ಭೇಟಿಯಾಗಿ, ಮನವಿ ಸಲ್ಲಿಕೆಯ ಜೊತೆಗೆ ವಿಸ್ತೃತ ಮಾತುಕತೆ ನಡೆಸಲಾಯಿತು ಎಂದು ಎಂ.ಬಿ ಪಾಟೀಲ್ ತಿಳಿಸಿದ್ದಾರೆ.

ಹುಬ್ಬಳ್ಳಿ, ಬೆಳಗಾವಿ ಏರ್ಪೋರ್ಟ್ ಮೇಲ್ದರ್ಜೆಗೇರಿಸಿ:
ಪ್ರಾದೇಶಿಕ ಮತ್ತು ಆರ್ಥಿಕ ಅಭಿವೃದ್ಧಿ
ಹಾಗೂ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಈ ಭಾಗಗಳಿಗೆ ವಿಮಾನ ಸಂಪರ್ಕ ಸುಧಾರಣೆಯ ಅಗತ್ಯಗಳನ್ನು ಪರಿಗಣಿಸಿ ಹುಬ್ಬಳ್ಳಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳನ್ನು ಅಂತಾರಾಷ್ಟ್ರೀಯ ದರ್ಜೆಗೇರಿಸಬೇಕೆಂದು ಸಚಿವರು ಒತ್ತಾಯಿಸಿದರು.

- Advertisement - 

ಎರಡೂ ವಿಮಾನ ನಿಲ್ದಾಣಗಳಲ್ಲಿ ಗಂಟೆಗೆ 2,400 ಪ್ರಯಾಣಿಕರನ್ನು ನಿರ್ವಹಿಸಬಲ್ಲ ಹೊಸ ಟರ್ಮಿನಲ್ ನಿರ್ಮಿಸಲಾಗುತ್ತಿದೆ. ಎ321 ದರ್ಜೆಯ ವಿಮಾನಗಳ ಕಾರ್ಯಾಚರಣೆ ಸಾಧ್ಯವಾಗುವಂತೆ 12 ಪಾರ್ಕಿಂಗ್ ಬೇ ಅಭಿವೃದ್ಧಿಪಡಿಸಲಾಗುತ್ತಿದ್ದು, ರಾತ್ರಿ ವೇಳೆಯಲ್ಲೂ ಲ್ಯಾಂಡಿಂಗ್ ಆಗುವಂತೆ ಕ್ರಮ ವಹಿಸಲಾಗಿದೆ ಎಂದು ಕೇಂದ್ರ ಸಚಿವರಿಗೆ ಎಂ.ಬಿ ಪಾಟೀಲ್ ಮನವರಿಕೆ ಮಾಡಿಕೊಟ್ಟರು.

ಏರೋಸ್ಪೇಸ್ ಸಾಧನಗಳು, ಅಲ್ಯುಮಿನಿಯಂ ಸಾಧನಗಳು, ಹಣ್ಣು ಮತ್ತು ತರಕಾರಿಗಳನ್ನು ಸಾಗಿಸಲು ಪ್ರತ್ಯೇಕ ಟರ್ಮಿನಲ್ ಇದೆ. ಇದಲ್ಲದೆ ಬೆಳಗಾವಿಯಲ್ಲಿ 3 ವಿ.ವಿ,ಗಳು, 3 ಮೆಡಿಕಲ್ ಕಾಲೇಜುಗಳು, ಕೆಎಲ್ಇ ವಿವಿ ಎಲ್ಲವೂ ಇದ್ದು ವಿಶೇಷವಾಗಿ  ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ಇನ್ನೊಂದೆಡೆ, ರಕ್ಷಣಾ ವಲಯಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರದ ಏರ್ಮೆನ್ ತರಬೇತಿ ಶಾಲೆ, ಕಮ್ಯಾಂಡೋ ತರಬೇತಿ ಕೇಂದ್ರ ಮತ್ತು ಐಟಿಬಿಪಿ ತರಬೇತಿ ಕೇಂದ್ರಗಳಿವೆ ಎಂದು ಸಚಿವರು ಮಾಹಿತಿ ನೀಡಿದರು.

ಮೈಸೂರು, ಶಿವಮೊಗ್ಗ, ಹಾಸನ, ಕಾರವಾರ, ರಾಯಚೂರು ವಿಮಾನ ನಿಲ್ದಾಣಗಳ ಅಭಿವೃದ್ಧಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆಯೂ ಸುದೀರ್ಘ ವಾದ ಚರ್ಚೆ ನಡೆಸಲಾಯಿತು.

ರಾಜ್ಯವನ್ನು ಪಾಲುದಾರ ಎಂದು ಪರಿಗಣಿಸಿ: ಇದೇ ಸಂದರ್ಭದಲ್ಲಿ, ನಾಗರಿಕ ವಿಮಾನಯಾನ ವಲಯದಲ್ಲಿ ಕರ್ನಾಟಕ ರಾಜ್ಯವನ್ನು ಪಾಲುದಾರ (ಸ್ಟೇಕ್ಹೋಲ್ಡರ್) ಎಂದು ಪರಿಗಣಿಸಬೇಕು. ಇದರಿಂದಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸುತ್ತಿರುವ

ರಾಜ್ಯದ ಮಂಗಳೂರು, ಮೈಸೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಬೆಳಗಾವಿ ವಿಮಾನ ನಿಲ್ದಾಣಗಳಿಂದ ರಾಜ್ಯಕ್ಕೂ ಲಾಭದ ಪಾಲು ಸಿಗಲಿದೆ. ಈ ವಿಷಯದಲ್ಲಿ ರಾಜ್ಯದ ಪಾತ್ರವನ್ನು ಭೂಸ್ವಾಧೀನ ಮತ್ತು ಸೌಕರ್ಯಗಳ ಅಭಿವೃದ್ಧಿಗೆ ಮಾತ್ರ ಸೀಮಿತಗೊಳಿಸಬಾರದು ಎಂದು ಅವರು ಕೋರಿದರು.

ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳಾ, KSIIDC ವ್ಯವಸ್ಥಾಪಕ ನಿರ್ದೇಶಕಿ ಖುಷ್ಬೂ ಗೋಯಲ್ , ರವಿ ಬೋಸರಾಜು ಅವರುಗಳು ಚರ್ಚೆಯ ವೇಳೆ ಉಪಸ್ಥಿತರಿದ್ದರು.

 

 

 

Share This Article
error: Content is protected !!
";