ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
1975ರ ತುರ್ತು ಪರಿಸ್ಥಿತಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ರಾಜಕೀಯ ಜೀವನದಲ್ಲಿ ಒಂದು ಕರಾಳ ಅಧ್ಯಾಯ ಎಂದು ಜೆಡಿಎಸ್ ಅಭಿಪ್ರಾಯಪಟ್ಟಿದೆ.
ಅಂದಿನ ಅಸಂವಿಧಾನಿಕ ತುರ್ತು ಪರಿಸ್ಥಿತಿ ಬಗ್ಗೆ ಧ್ವನಿ ಎತ್ತಿದ್ದಕ್ಕೆ ಅಂದು, ದೇವೇಗೌಡರನ್ನು ಬಂಧಿಸಿ 3 ತಿಂಗಳ ಕಾಲ ಬೆಂಗಳೂರಿನ ಕಾರಾಗೃಹದಲ್ಲಿ ಸೆರೆವಾಸದಲ್ಲಿ ಇರಿಸಲಾಗಿತ್ತು. ಇಂದಿರಾಗಾಂಧಿಯ ಸರ್ವಾಧಿಕಾರಿ ನಡೆ ಸ್ವಾತಂತ್ರೋತ್ತರ ಭಾರತದ ಭರವಸೆಯ ಆಶೋತ್ತರಗಳಿಗೆ ಎಸಗಿದ ಅಪಚಾರ. ತುರ್ತು ಪರಿಸ್ಥಿತಿ ರಾಷ್ಟ್ರೀಯ ವಿಪತ್ತಿನಂತೆ ಎರಗಿದ ಘೋರ, ಕೆಡುಕಿನ ಮನಃಸ್ಥಿತಿಯ ವಿಲಕ್ಷಣ ನಿರ್ಧಾರವಾಗಿತ್ತು.
1975ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಅಪಾಯ ಬಂತು ಎನ್ನುವ ಏಕೈಕ ಕಾರಣಕ್ಕೆ ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದು ಕ್ಷಮೆಗೆ ಅರ್ಹವಲ್ಲದ ನಡವಳಿಕೆ ಎಂದು ಜೆಡಿಎಸ್ ತಿಳಿಸಿದೆ.
ಭಾರತದ ಸಂವಿಧಾನಕ್ಕೆ ಕಪ್ಪು ಚುಕ್ಕೆ ತಂದು, ಪ್ರಜಾಪ್ರಭುತ್ವವನ್ನು ಕತ್ತಲೆಗೆ ದೂಡಿದ್ದ ಕಾಂಗ್ರೆಸ್ʼನ್ ತುರ್ತು ಪರಿಸ್ಥಿತಿಯ ಕರಾಳತೆ ಇಂದಿಗೆ 50 ವರ್ಷ. ಕಾಂಗ್ರೆಸ್ ಪಕ್ಷದ ಈ ದುಷ್ಕೃತ್ಯ ಎಂದಿಗೂ ಮರೆಯಲು ಸಾಧ್ಯವಿಲ್ಲ ಜೆಡಿಎಸ್ ತಿಳಿಸಿದೆ.

