ವಿದ್ಯುತ್ ಪರಿವರ್ತಕಗಳ ಖರೀದಿ-ಇಂಧನ ಸಚಿವರ ಸ್ಪಷ್ಟನೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ 2024-25ನೇ ಸಾಲಿನಲ್ಲಿ ಕೈಗೊಳ್ಳಲಾದ ವಿದ್ಯುತ್ ಪರಿವರ್ತಕಗಳ ಖರೀದಿ ಪ್ರಕ್ರಿಯೆ ಮತ್ತು ಅದರಲ್ಲಿ ಅನುಸರಿಸಲಾದ ನಿಯಮಗಳ ಕುರಿತು ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಇಂದು ವಿಧಾನ ಪರಿಷತ್ತಿನಲ್ಲಿ ವಿವರವಾದ ಮಾಹಿತಿ ನೀಡಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯರಾದ ಎನ್. ರವಿಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಟ್ರಾನ್ಸ್‍ಫಾರ್ಮರ್ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಮತ್ತು ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

- Advertisement - 

2024-25ನೇ ಸಾಲಿನಲ್ಲಿ ರಾಜ್ಯದ ಎಸ್ಕಾಂಗಳಿಗೆ ಅಗತ್ಯವಿರುವ ವಿದ್ಯುತ್ ಪರಿವರ್ತಕಗಳನ್ನು ಮುಕ್ತ ಟೆಂಡರ್ ಪ್ರಕ್ರಿಯೆಯ ಮೂಲಕ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ (KTPP Act) ಅಡಿಯಲ್ಲಿ 4ಜಿ ವಿನಾಯಿತಿ ಪಡೆದು ಸರ್ಕಾರಿ ಸ್ವಾಮ್ಯದ ಕವಿಕಾ (KAVIKA) ಸಂಸ್ಥೆಯಿಂದ ಖರೀದಿಸಲಾಗಿದೆ.

ಕೇರಳ ಮೂಲದ ಕೆ.ಇ.ಎಲ್ ಸಂಸ್ಥೆ ಕುರಿತು ಸ್ಪಷ್ಟನೆ:
ಕೇರಳ ಎಲೆಕ್ಟ್ರಿಕಲ್ ಮತ್ತು ಅಲೈಡ್ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ನಿಂದ 11,721 ಟ್ರಾನ್ಸ್ ಫಾರ್ಮರ್‍ಗಳನ್ನು 174.73 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿದೆ ಎಂಬ ಆರೋಪಗಳನ್ನು ಸಚಿವರು ತಳ್ಳಿಹಾಕಿದರು. 2024-25ನೇ ಸಾಲಿನಲ್ಲಿ ಕೇರಳದ ಈ ಸಂಸ್ಥೆಯಿಂದ ಯಾವುದೇ ವಿದ್ಯುತ್ ಪರಿವರ್ತಕಗಳನ್ನು ಖರೀದಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

- Advertisement - 

ಕೇರಳದ ಚುನಾವಣಾ ವೆಚ್ಚ ಸರಿದೂಗಿಸಲು ಅಲ್ಲಿನ ಸಂಸ್ಥೆಯಿಂದ ಖರೀದಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ವಲಯದ ಚರ್ಚೆಗಳು ಕೇವಲ “ಆಧಾರರಹಿತ” ಎಂದು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ, ಕವಿಕಾ ಅಂತಹ ಸಂಸ್ಥೆಗಳು ಇಂಧನ ಇಲಾಖೆಗೆ ಅರ್ಜಿ ಸಲ್ಲಿಸಿದಾಗ, ನಿಯಮಾನುಸಾರ 4ಜಿ ವಿನಾಯಿತಿ ನೀಡಿ ಖರೀದಿ ಆದೇಶ ನೀಡಲಾಗುತ್ತದೆ. ಎಸ್ಕಾಂಗಳ ಬೇಡಿಕೆಗೆ ಅನುಗುಣವಾಗಿ ಇವುಗಳ ಪೂರೈಕೆ ನಡೆಯುತ್ತಿದೆ.

ರಾಜ್ಯದ ಇಂಧನ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅಗತ್ಯವಿರುವ ಪರಿವರ್ತಕಗಳನ್ನು ನಿಯಮಬದ್ಧವಾಗಿಯೇ ಖರೀದಿ ಮಾಡಲಾಗುತ್ತಿದೆ ಎಂದು ಸಚಿವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

Share This Article
error: Content is protected !!
";