ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯದಾದ್ಯಂತ ಏಪ್ರಿಲ್ 1 ರಿಂದ ಎಲ್ಲ ಟೋಲ್ ಗಳಲ್ಲಿ ಶೇ 3-5 ರಷ್ಟು ಸುಂಕ ಹೆಚ್ಚಾಗಲಿದೆ ಎನ್ನವ ಮಾಹಿತಿ ಹೊರ ಬರುತ್ತಿವೆ.
ಮುಂದಿನ ಕೆಲವೇ ದಿನಗಳಲ್ಲಿ ಟೋಲ್ ಶುಲ್ಕ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಇದರೊಂದಿಗೆ ಕರ್ನಾಟಕದ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಲಿದೆ.
ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಶುಲ್ಕ ಹೆಚ್ಚಳಕ್ಕೆ ಎನ್‌ಎಚ್‌ಎಐ ಮುಂದಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಟೋಲ್ ದರ ಎಷ್ಟು?
ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಏಪ್ರಿಲ್-1 ರಿಂದ ಜಾರಿಗೆ ಬರುವಂತೆ ದರಗಳನ್ನು ಪರಿಷ್ಕೃರಣೆ ಮಾಡಲಾಗುತ್ತಿದೆ. ಗರಿಷ್ಠ ಶೇ 5 ರಷ್ಟು ಮತ್ತು ಕನಿಷ್ಠ ಶೇ 3 ರಷ್ಟು ಹೆಚ್ಚಳವಾಗಲಿದೆ ಎಂದು ಎನ್‌ಎಚ್‌ಎಐ ಯ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಮಾಹಿತಿ ನೀಡಿದ್ದಾರೆ.
ಟೋಲ್ ಪ್ಲಾಜಾಗಳು ಯಾವುವು?
ಕರ್ನಾಟಕ ರಾಜ್ಯದ ಹಲವು ರಾಷ್ಟ್ರೀಯ ಹೆದ್ದಾರಿ ಮಾರ್ಗಗಳಲ್ಲಿ ಸುಮಾರು 66 ಟೋಲ್ ಪ್ಲಾಜಾಗಳಿವೆ.
ಟೋಲ್ ಶುಲ್ಕ ಹೆಚ್ಚಾಗುವ ಟೋಲ್ ಪ್ಲಾಜಾಗಳಾದ ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ರಿಂಗ್ ರಸ್ತೆ) ಟೋಲ್ ಪ್ಲಾಜಾಗಳು ಸೇರಿವೆ ಎನ್ನಲಾಗುತ್ತಿದೆ.
ಟೋಲ್ ನೀತಿ-
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆ ಬಳಕೆದಾರರಿಗೆ ಕೆಲವು ರಿಯಾಯಿತಿಗಳನ್ನು ನೀಡುವ ಉದ್ದೇಶದೊಂದಿಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕಗಳಿಗೆ ಹೊಸ ನೀತಿಯನ್ನು ಪರಿಚಯಿಸಲು ಸಜ್ಜಾಗಿದೆ. ಈ ವಿಚಾರವಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾರ್ಚ್ 19 ರಂದು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು.
ಭಾರತದಲ್ಲಿ ಒಟ್ಟು ಟೋಲ್ ಸಂಗ್ರಹವು 64,809.86 ಕೋಟಿ ರೂ.ಗಳನ್ನು ತಲುಪಿದೆ. ಇದು ಹಿಂದಿನ ವರ್ಷಕ್ಕಿಂತ ಶೇ 35 ರಷ್ಟು ಹೆಚ್ಚಾಗಿದೆ. 2019-20 ರಲ್ಲಿ ಟೋಲ್ ಶುಲ್ಕ ಸಂಗ್ರಹವು 27,503 ಕೋಟಿ ರೂ.ಗಳಷ್ಟಿತ್ತು ಎಂದು ಕೇಂದ್ರ ಸಾರಿಗೆ ಸಚಿವ ಗಡ್ಕರಿ ಮಾಹಿತಿ ನೀಡಿದ್ದರು.
ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲಾ ಟೋಲ್ ಪ್ಲಾಜಾಗಳನ್ನು ‘‘ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008’’ ಮತ್ತು ಸಂಬಂಧಿತ ರಿಯಾಯಿತಿ ಒಪ್ಪಂದದ ಪ್ರಕಾರ ಸ್ಥಾಪಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಇದರ ಮಧ್ಯ ರಾಜ್ಯ ಸರ್ಕಾರ ನಿರಂತರವಾಗಿ ನೋಂದಣಿ ಶುಲ್ಕ, ಹಾಲು, ವಿದ್ಯುತ್, ಬಾಂಡ್ ಪೇಪರ್, ರೈತರ ಪಹಣಿ ದರಗಳನ್ನು ಹೆಚ್ಚಿಸಿದೆ. ಈಗ ಕೇಂದ್ರ ಸರ್ಕಾರ ಟೋಲ್ ಶುಲ್ಕ ಹೆಚ್ಚಳ ಮಾಡಲು ಮುಂದಾದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.