ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೆನರಾ ಬ್ಯಾಂಕ್‍ನ 120 ನೇ ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿಸಲು ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್ ಪರಿಸರ ಕಾಳಜಿಯನ್ನು ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಲಕ್ಷಾಂತರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಮಂಗಳೂರಿನಲ್ಲಿ ಅಮ್ಮೇಬಾಳು ಸುಬ್ಬಾರಾವ್ ಪೈ ಅವರಿಂದ 1906 ರಲ್ಲಿ ಸ್ಥಾಪನೆಗೊಂಡ ಕೆನರಾ ಬ್ಯಾಂಕ್‍ಗೆ 120 ವರ್ಷಗಳು ಸಂದಿವೆ. ಗ್ರಾಹರ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವ ಕೆನರಾ ಬ್ಯಾಂಕ್ ದೇಶದ್ಯಾಂತ 9,849 ಶಾಖೆಗಳನ್ನು ಹೊಂದಿದೆ. ಸುಮಾರು 11.76 ಕೋಟಿ ಜನರು ಕೆನರಾ ಬ್ಯಾಂಕ್‍ನಲ್ಲಿ ವ್ಯವಹರಿಸುತ್ತಾರೆ. ಕೆನರಾ ಬ್ಯಾಂಕ್ ಕೇವಲ ವ್ಯಹಾರಿಕ ಬ್ಯಾಂಕ್ ಆಗಿರದೇ, ಸಾಮಾಜಿಕ ಹೊಣೆಗಾರಿಕೆಯನ್ನು ಸಹ ಜಬ್ದಾರಿಯಿಂದ ನಿರ್ವಹಿಸುತ್ತಿದೆ.
ಗ್ರಾಮೀಣ ಅಭಿವೃದ್ಧಿ, ಗ್ರಾಮೀಣೋದ್ಯೋಗಕ್ಕೆ ಉತ್ತೇಜನ ನೀಡುವುದರ ಜೊತೆಗೆ ದೇಶದ ಅಭಿವೃದ್ದಿಗೆ ಸದಾ ಕಾಲ ಇಂಬಾಗಿ ನಿಂತಿದೆ. 120ನೇ ಸಂಸ್ಥಾಪನೆ ದಿನಾಚರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸುತ್ತಿರುವ ಕೆನರಾ ಬ್ಯಾಂಕ್ ಪರಿಸರ ಕಾಳಜಿಯನ್ನು ಮೆರೆಯುತ್ತಿದೆ. ಈ ನಿಟ್ಟಿನಲ್ಲಿ ರಾಷ್ಟ್ರದಾದ್ಯಂತ ಲಕ್ಷಾಂತರ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಇದರ ಅಂಗವಾಗಿ ಚಿತ್ರದುರ್ಗ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಎನಿಸಿರುವ ಕೆನರಾ ಬ್ಯಾಂಕ್ ವತಿಯಿಂದ 120 ಗಿಡಗಳನ್ನು ಚಿತ್ರದುರ್ಗ ನಗರದ ಪ್ರಮುಖ ಸ್ಥಳಗಳಲ್ಲಿ ನೆಡಲಾಗುತ್ತಿದೆ. ಶನಿವಾರ ನಗರದ ಒನಕೆ ಓಬವ್ವ ಕ್ರೀಡಾಂಗಣ ಹಾಗೂ ಬಾಲ ಭವನ ಆವರಣದಲ್ಲಿ ಜಂಬು ನೇರಳೆ, ಪೇರಲ, ಹೊಂಗೆ ಸೇರಿದಂತೆ ಇತರೆ ತಳಿಯ ಗಿಡಗಳನ್ನು ನೆಡಲಾಯಿತು.
ಜಿಲ್ಲೆಯಲ್ಲಿ ಕೆನರಾ ಬ್ಯಾಂಕ್‍ನ 30 ಶಾಖೆಗಳಿದ್ದು, ಪ್ರತಿ ಶಾಖೆಯಲ್ಲಿಯೂ ಗಿಡ ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಪ್ರತಿ ಶಾಖೆಯ ಸಿಬ್ಬಂದಿ ಕನಿಷ್ಟ 20 ಗಿಡಗಳನ್ನು ತಮ್ಮ ಪರಿಸರದಲ್ಲಿ ನೆಡಲಿದ್ದಾರೆ. ಗಿಡ ನೆಡುವುದರ ಜೊತೆ ಅವುಗಳ ರಕ್ಷಣೆ ಹಾಗೂ ಪೋಷಣೆಗೆ ಗಮನ ಹರಿಸಲಾಗುವುದು. ಕೆನರಾ ಬ್ಯಾಂಕ್ ಸುಸ್ಥಿರ ಪ್ರಗತಿಗೆ ಸದಾ ಕಾಲ ಬದ್ದವಾಗಿದೆ. ನವೀಕರಿಸಬಹುದಾದ ಇಂಧನ ಶಕ್ತಿಗಳ ಹೂಡಿಕೆಗೆ ಕೆನರಾ ಬ್ಯಾಂಕ್ ನೆರವು ನೀಡಿದೆ ಎಂದು ಲೀಡ್‍ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಈ ಸಂದರ್ಭದಲ್ಲಿ ತಿಳಿಸಿದರು.
ಗಿಡ ನೆಡುವ ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್.ಬಿ.ವಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತನ ನೆಲವಗಿ ಭಾಗವಹಿಸಿದ್ದರು. ಈ ವೇಳೆ ಸಿಬ್ಬಂದಿಗಳಾದ ಶ್ರೀನಿವಾಸ್, ಮೂಕಪ್ಪ, ಎನ್.ಕೋಟೇಶ್, ಸೋಮಶೇಖರ್, ದರ್ಶನ್ ಸೇರಿದಂತೆ ಕ್ರೀಡಾ ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.