ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ಗ್ರಾಮಗಳ ಪ್ರೌಢಶಾಲೆಗಳಲ್ಲಿ ಇದೇ ಆಗಸ್ಟ್ 25 ರಿಂದ ನೀರು ಮತ್ತು ನೈರ್ಮಲ್ಯದ ಕುರಿತು ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.
ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯವ ನೀರು ಮತ್ತು ನೈರ್ಮಲ್ಯ ವಿಭಾಗ, ಅನುಷ್ಠಾನ ಬೆಂಬಲ ಸಂಸ್ಥೆ (ಗ್ರಾಮ್ಸ್) ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿಯಲ್ಲಿ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಬರುವ ಗ್ರಾಮೀಣ ಪ್ರೌಢಶಾಲೆ ಮಕ್ಕಳಿಗೆ ಇದೇ ಆಗಸ್ಟ್ 25 ರಿಂದ ನೀರು ಮತ್ತು ನೈರ್ಮಲ್ಯದ ಕುರಿತು ಆಯ್ದ 90 ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ ಮತ್ತು ಆಯ್ದ 80 ಪ್ರೌಢಶಾಲೆಗಳಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ.
ನೀರು ಮತ್ತು ನೈರ್ಮಲ್ಯದ ಮಹತ್ವ, ನೀರಿನ ಸಂರಕ್ಷಣೆ, ಘನತ್ಯಾಜ್ಯ ನಿರ್ವಹಣೆ ಬಗ್ಗೆ ಹಾಗೂ ಮಳೆ ನೀರು ಕೊಯ್ಲು ಈ ವಿಷಯಗಳ ಬಗ್ಗೆ ಕುಡಿಯುವ ನೀರಿನ ಸಂರಕ್ಷಣೆ, ಶುದ್ಧ ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಈ ಬಗ್ಗೆ ಶಿಕ್ಷಣ ನೀಡುವುದು ಬಹಳ ಉಪಯುಕ್ತವಾಗುತ್ತದೆ.
ಅಲ್ಲದೆ ಮಕ್ಕಳಲ್ಲಿ ನೀರು ಮತ್ತು ನೈರ್ಮಲ್ಯದ ಕುರಿತು ನವೀನ ಕಲ್ಪನೆಗಳು ತಿಳಿಯಲು ಮಕ್ಕಳಲ್ಲಿರುವ ಮನೋಭಾವನೆ ಮತ್ತು ಜ್ಞಾನ ಹೊರ ಸೂಸುವ ಸಲುವಾಗಿ ಶಾಲಾ ಮಕ್ಕಳಿಗಾಗಿ ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಶಿಕ್ಷಣ ಇಲಾಖೆಯ ಸಹಕಾರದಿಂದ ಆಯೋಜಿಸಲಾಗಿರುತ್ತದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಿ ಅತ್ಯುತ್ತಮವಾಗಿ ಪ್ರಬಂಧ ಮತ್ತು ಚಿತ್ರಕಲೆ ಬರೆದವರಿಗೆ ಪ್ರಥಮ, ದ್ವಿತೀಯ, ತೃತೀಯ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸನಗೌಡ ಪಾಟೀಲ್ ತಿಳಿಸಿದ್ದಾರೆ.

