ಚಂದ್ರವಳ್ಳಿ ನ್ಯೂಸ್, ತುಮಕೂರು:
ಜಿಲ್ಲೆಯ ವ್ಯಾಪ್ತಿಗೊಳಪಡುವ ತುಮಕೂರು ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸದಾಗಿ ೧೨ ಮತಗಟ್ಟೆ ಸ್ಥಾಪನೆ ಮಾಡಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಗಮನಕ್ಕೆ ತಂದರು.
ತಮ್ಮ ಕೊಠಡಿಯಲ್ಲಿ ಸೋಮವಾರ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಸಂಬಂಧಿಸಿದಂತೆ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು,
ತುಮಕೂರು ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಹೊಸದಾಗಿ ೧೨ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಹೊಸ ಮತಗಟ್ಟೆಗಳ ವಿವರಃನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨ ಕಿ.ಮೀ.ಗಿಂತ ಹೆಚ್ಚು ದೂರವಿರುವ ಮತಗಟ್ಟೆ ಹಾಗೂ ೧೫೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮತಗಟ್ಟೆಗಳನ್ನು ಸ್ಥಾಪಿಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದ್ದು,
ನಗರ ವ್ಯಾಪ್ತಿಯ ೨ ಕಿ.ಮೀ.ಗಿಂತ ಹೆಚ್ಚು ದೂರವಿರುವ ಎಸ್.ಎನ್.ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ(ಮತಗಟ್ಟೆ ಸಂಖ್ಯೆ-೪ಎ) ; ೧೫೦೦ಕ್ಕೂ ಹೆಚ್ಚು ಮತದಾರರಿರುವ ಅಂತರಸನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(ಮತಗಟ್ಟೆ ಸಂಖ್ಯೆ-೯ಎ), ಶಿರಾಗೇಟ್ ಉತ್ತರ ಬಡಾವಣೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ(೧೩ಎ), ಅಗ್ರಹಾರ ಶಿಶುವಿಹಾರ ಆವರಣ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ(೩೦ಎ),
ಗಾಂಧಿನಗರದ ವಿದ್ಯೋದಯ ಕಾನೂನು ಕಾಲೇಜು(೭೩ಎ), ಚಾಂದನಿ ಚೌಕ ಭಾರತ ಮಾತಾ ಆಂಗ್ಲ ಹಿರಿಯ ಪ್ರಾಥಮಿಕ ಪಾಠಶಾಲೆ(೮೩ಎ), ಭೈರವೇಶ್ವರ ಪದವಿ ಪೂರ್ವ ಕಾಲೇಜು(೧೨೨ಎ), ಉಪ್ಪಾರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(೧೫೮ಎ), ಸರಸ್ವತಿ ಪುರಂ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಪಾಠಶಾಲೆ(೧೬೦ಎ), ಮರಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ(೧೬೪ಎ),
ಮರಳೂರು ಮಾವಿನತೋಪು ಅಂಕಿತ ಕಿರಿಯ ಪ್ರಾಥಮಿಕ ಪಾಠಶಾಲೆ(೧೬೫ಎ), ಬಡ್ಡಿಹಳ್ಳಿ ಎಸ್.ಆರ್.ಎಸ್. ಹಿರಿಯ ಪ್ರಾಥಮಿಕ ಪಾಠಶಾಲೆ(೨೨೦ಎ) ಸೇರಿ ಹೊಸದಾಗಿ ೧೨ ಮತಗಟ್ಟೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಸಭೆಗೆ ಮಾಹಿತಿ ನೀಡಿದರು.
ಅಲ್ಲದೆ ಶಿಥಿಲವಾಗಿರುವ ಕಟ್ಟಡ, ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದ ೧೨೯-ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ೨, ೧೩೨-ತುಮಕೂರು ನಗರ ವಿ.ಸ.ಕ್ಷೇತ್ರದಲ್ಲಿ ೪ ಹಾಗೂ ೧೩೮-ಮಧುಗಿರಿ ವಿ.ಸ.ಕ್ಷೇತ್ರದಲ್ಲಿ ೧ ಸೇರಿದಂತೆ ಒಟ್ಟು ೭ ಮತಗಟ್ಟೆಗಳನ್ನು ಸ್ಥಳಾಂತರಿಸಲು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ :ಪ್ರತಿ ವರ್ಷದಂತೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗಾಗಿ ಆಯಾ ಮತಗಟ್ಟೆ ಮಟ್ಟದ ಅಧಿಕಾರಿಗಳು ಈಗಾಗಲೇ ಕಳೆದ ಆಗಸ್ಟ್ ೨೦ ರಿಂದ ಮನೆ-ಮನೆ ಸಮೀಕ್ಷೆ ಕೈಗೊಂಡಿದ್ದು, ಶೇ. ೯೮ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆ.
ಸಮೀಕ್ಷೆಯಲ್ಲಿ ೧೫೦೦ಕ್ಕಿಂತ ಹೆಚ್ಚು ಮತದಾರರಿರುವ ಮತಗಟ್ಟೆ, ಸ್ಥಳಾಂತರಗೊಳಿಸಲು ಉದ್ದೇಶಿಸಿರುವ ಮತಗಟ್ಟೆಗಳನ್ನು ಗುರುತಿಸಲಾಗಿದೆಯಲ್ಲದೆ ದಿನಾಂಕ: ೧-೧-೨೦೨೫ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ, ತೆಗೆದು ಹಾಕುವುದು, ತಿದ್ದುಪಡಿ ಸೇರಿದಂತೆ ಪರಿಷ್ಕರಣೆ ಕಾರ್ಯ ನಡೆಸಲಾಗಿದೆ ಎಂದು ತಿಳಿಸಿದರು.
ಆಯೋಗದ ವೇಳಾಪಟ್ಟಿಯಂತೆ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್ ೨೯ರಂದು ಪ್ರಕಟಿಸಲಾಗುವುದು. ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ಅಕ್ಟೋಬರ್ ೨೯ ರಿಂದ ನವೆಂಬರ್ ೨೮ರವರೆಗೂ ಅವಕಾಶ ನೀಡಲಾಗುವುದು.
ಸ್ವೀಕೃತ ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್ ೨೪ರೊಳಗಾಗಿ ವಿಲೇವಾರಿ ಮಾಡಲಾಗುವುದು. ನಂತರ ೨೦೨೫ರ ಜನವರಿ ೬ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಚುನಾವಣಾ ತಹಶೀಲ್ದಾರ್ ರೇಷ್ಮ, ಮಹಾನಗರಪಾಲಿಕೆ ಉಪ ಆಯುಕ್ತ(ಆಡಳಿತ) ಗಿರೀಶ್, ಉಪ ಆಯುಕ್ತ(ಕಂದಾಯ) ರುದ್ರಮುನಿ, ತಿಪಟೂರು ತಾಲ್ಲೂಕು ತಹಸೀಲ್ದಾರ್ ಎನ್. ಪವನ್ ಕುಮಾರ್, ಮಧುಗಿರಿ ತಾಲ್ಲೂಕು ತಹಸೀಲ್ದಾರ್ ಶಿರಿನ್ ತಾಜ್ ಸೇರಿದಂತೆ ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಜರಿದ್ದರು.