ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪೌಲ್ಟ್ರಿ ಫೀಡ್ ಸಂಸ್ಥೆಗಳ ಬೇಡಿಕೆಯ ಪ್ರಕಾರ ಚಿತ್ರದುರ್ಗ ಜಿಲ್ಲೆಯಲ್ಲಿ 750 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಕೇಂದ್ರಗಳನ್ನು ತೆರೆಯಲು ಕ್ರಮಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಸಭೆಯಲ್ಲಿ ಸೂಚಿಸಿದಂತೆ, ಪಿಎಸಿಎಸ್ ಐಮಂಗಲ ಸಹಕಾರ ಸಂಘದಿಂದ 250 ಮೆಟ್ರಿಕ್ ಟನ್, ಟಿಎಪಿಸಿಎಂಎಸ್ ಹಿರಿಯೂರು ಸಹಕಾರ ಸಂಘದಿಂದ 250 ಮೆಟ್ರಿಕ್ ಟನ್ ಹಾಗೂ ಪಿಎಸಿಎಸ್ ಮಾಡನಾಯಕನಹಳ್ಳಿ ಸಹಕಾರ ಸಂಘದಿಂದ 250 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಸೂಚಿಸಿದ್ದಾರೆ.
ಪ್ರತಿ ಎಕರೆಗೆ 12 ಕ್ವಿಂಟಾಲ್‍ನಂತೆ ಗರಿಷ್ಟ 50 ಕ್ವಿಂಟಾಲ್ ಮೆಕ್ಕೆಜೋಳವನ್ನು ಪ್ರತಿ ಕ್ವಿಂಟಾಲ್‍ಗೆ ರೂ.2400/-ಗಳಂತೆ ಸರ್ಕಾರದ ನಿಯಮಾಳಿಗಳನ್ವಯ ಖರೀದಿಸಲು ಖರೀದಿ ಸಂಸ್ಥೆಯಾದ “ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಚಿತ್ರದುರ್ಗ ಅವರಿಗೆ ಸೂಚಿಸಿದ್ದಾರೆ.
ಸರ್ಕಾರದ ಆದೇಶದಂತೆ ಮೆಕ್ಕೆಜೋಳವು ಗುಣಮಟ್ಟದಿಂದ ಕೂಡಿರಬೇಕು. ತೇವಾಂಶ ಶೇ.12ಕ್ಕಿಂತ ಕಡಿಮೆ ಇರಬೇಕು. ಸೋಂಕು ಶೇ.3ಕ್ಕಿಂತ ಕಡಿಮೆ ಇರಬೇಕು. 100 ಗ್ರಾಂ ತೂಕಕ್ಕೆ 350 ಕಾಳು ಬರಬೇಕು. ಟಾಸ್ಕಿನ್ ಲೆವೆಲ್ 20 ಪಿಪಿಟಿ ಕ್ಕಿಂತ ಕಡಿಮೆ ಇರಬೇಕು. ಕಸ ಕಡ್ಡಿ ಇತ್ಯಾದಿ ಶೇ.1 ಕ್ಕಿಂತ ಕಡಿಮೆ ಇರಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಚಿತ್ರದುರ್ಗ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

