ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
KSIIDC ವತಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಾಯುಯಾನ ತರಬೇತಿ ಸಂಸ್ಥೆ ಸ್ಥಾಪನೆ ಆಗಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯಾಭಿವೃದ್ಧಿ ನಿಗಮದ (KSIIDC) ವತಿಯಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮೊದಲ ವಾಯುಯಾನ ತರಬೇತಿ ಸಂಸ್ಥೆ (FTO) ಸ್ಥಾಪಿಸಲಾಗುತ್ತಿರುವುದನ್ನು ಸಚಿವ ಪಾಟೀಲ್ ಘೋಷಿಸಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದ್ದಾರೆ.
100 ಕೆಡೆಟ್ ಗಳಿಗೆ ಪೈಲೆಟ್ ತರಬೇತಿ ನೀಡುವ ಗುರಿಯೊಂದಿಗೆ ವಾಯುಯಾನ ತರಬೇತಿ ಸಂಸ್ಥೆ (FTO) ಆರಂಭಿಸುತ್ತಿದ್ದು ಮೊದಲ ವರ್ಷ 50 ಶಿಕ್ಷಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ಸಚಿವ ಎಂ.ಬಿ ಪಾಟೀಲ್ ತಿಳಿಸಿದ್ದಾರೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಶುಲ್ಕ ರಿಯಾಯಿತಿಯೊಂದಿಗೆ ಶೇ. 25 ಪ್ರವೇಶವನ್ನು ಕಾಯ್ದಿರಿಸಲಾಗುವುದು. 3,500 ಚದರ ಮೀಟರ್ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಈ ಸಂಸ್ಥೆಯಲ್ಲಿ ವಿಮಾನಗಳ ಹ್ಯಾಂಗರ್‌ಗಳು, ಸಿಮ್ಯುಲೇಟರ್‌ಗಳು, ಗ್ರಂಥಾಲಯ, ರೇಡಿಯೋ ಟೆಲಿಫೋನಿ ತರಬೇತಿ ಕೇಂದ್ರ ಸೇರಿದಂತೆ ಹಲವಾರು ಸೌಲಭ್ಯಗಳು ಇರುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಈ ಯೋಜನೆಯ ಮೂಲಕ ಸ್ವಾವಲಂಬಿ ವಾಯುಯಾನ ತರಬೇತಿ ವ್ಯವಸ್ಥೆ ನಿರ್ಮಿಸಲು ಮತ್ತು ಕೌಶಲ್ಯಪೂರ್ಣ ಪ್ರತಿಭೆಗಳನ್ನು ಉತ್ತೇಜಿಸಲು ಕರ್ನಾಟಕ ಮತ್ತೊಂದು ಮಹತ್ವದ ಹೆಜ್ಜೆ ಇಡುತ್ತಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ವಿಮಾನಯಾನ ಕ್ಷೇತ್ರದಲ್ಲಿ ರಾಜ್ಯದ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸಂಸ್ಥೆ ಆರಂಭಿಸಲಾಗುತ್ತದೆ. ರಾಜ್ಯ ಸರ್ಕಾರವು ನಿರ್ವಹಿಸುತ್ತಿರುವ ಮೊದಲ ಮತ್ತು ಏಕೈಕ ವಿಮಾನ ನಿಲ್ದಾಣ ಇದಾಗಿದೆ. ರಾಜ್ಯದ ಅಭ್ಯರ್ಥಿಗಳಿಗೆ ಉತ್ತೇಜನ ನೀಡುವುದಕ್ಕಾಗಿ ಶೇ 25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಮೀಸಲಿಡಲಾಗುವುದು. ಅವರಿಗೆ ರಿಯಾಯಿತಿ ದರದಲ್ಲಿ ಶುಲ್ಕ ವಿಧಿಸಲಾಗುವುದು.
ಮೂರು ತಿಂಗಳೊಳಗೆ ಸಂಸ್ಥೆ ಆರಂಭವಾಗುವ ನಿರೀಕ್ಷೆಯಿದ್ದು, ಒಪ್ಪಂದಕ್ಕೆ ಸಹಿ ಹಾಕಿದ ಒಂಬತ್ತು ತಿಂಗಳೊಳಗೆ ಪೂರ್ಣ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆ. ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರಿನ ಶಿವಮೊಗ್ಗ ವಿಮಾನ ನಿಲ್ದಾಣವನ್ನು, 2023 ರ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದನ್ನು ಸ್ಮರಿಸಬಹುದಾಗಿದೆ.
ನಗರ ಕೇಂದ್ರದಿಂದ ಸರಿಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಸೋಗಾನೆಯಲ್ಲಿ ನೆಲೆಗೊಂಡಿರುವ ಇದು, 3,200 ಮೀಟರ್ ರನ್‌ವೇಯನ್ನು ಹೊಂದಿದೆ. ಇದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಕರ್ನಾಟಕದ ಎರಡನೇ ಅತಿ ಉದ್ದದ ರನ್‌ವೇ ಆಗಿದೆ ಮತ್ತು ATR 72 ನಿಂದ ತೊಡಗಿ ಏರ್‌ಬಸ್ A320 ವರೆಗಿನ ವಿಮಾನಗಳ ಲ್ಯಾಂಡಿಂಗ್, ಟೇಕಾಫ್ಗೆ ಅವಕಾಶ ಒದಗಿಸಬಲ್ಲ ವಿಮಾನ ನಿಲ್ದಾಣ ಇದಾಗಿದೆ.