ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಕರ್ನಾಟಕ ಕಾಂಗ್ರೆಸ್ ಹೇಳಿದ್ದು ಅಧಿಕಾರಕ್ಕೆ ಬಂದರೆ ಒಂದೇ ವರ್ಷದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು, ಆದರೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದರೂ ಒಂದೇ ಒಂದು ಹುದ್ದೆಯನ್ನು ಭರ್ತಿ ಮಾಡಿಲ್ಲ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಕಾಲಹರಣ ಮಾಡಿ, ಈಗ ಕಾಲಮಿತಿಯಲ್ಲಿ ಮಾಡುತ್ತೇವೆ ಎಂದರೇ ಏನರ್ಥ? 2028ಕ್ಕೆ ಮಾಡುತ್ತೀರಾ? ಡಿಕೆ ಶಿವಕುಮಾರ್ ಅವರೇ ಎಷ್ಟು ಸುಳ್ಳುಗಳನ್ನು ಹೇಳುತ್ತೀರಿ? ನಿಮ್ಮ ಸುಳ್ಳುಗಳಿಗೂ ಒಂದು ಇತಿಮಿತಿ ಬೇಡವೇ ? ಜನರನ್ನು ಎಷ್ಟು ಬಾರಿ ಮೋಸ ಮಾಡುತ್ತೀರಿ? ಎಂದು ಜೆಡಿಎಸ್ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಹಿಂದೆ ನೀವೇ ಮಾಡಿದ್ದ ಟ್ವೀಟ್ ವಚನ ಭ್ರಷ್ಟತೆಗೆ ಹಿಡಿದ ಕೈಗನ್ನಡಿ. ರಾಜ್ಯದಲ್ಲಿ ಸರ್ಕಾರಿ ಹುದ್ದೆ ಪಡೆಯಲು ಚಾತಕ ಪಕ್ಷಿಗಳಂತೆ ಕಾಯುತ್ತಿರುವ ದೊಡ್ಡ ಯುವ ಸಮೂಹವೇ ಇದೆ. ಲಕ್ಷಾಂತರ ಮಂದಿ ಉದ್ಯೋಗ ಆಕಾಂಕ್ಷಿಗಳು ಸರ್ಕಾರಿ ನೌಕರಿಗಾಗಿ ಹಗಲು ರಾತ್ರಿ ಕಷ್ಟಪಟ್ಟು ಓದಿದ್ದು, ಅವರು ವಯಸ್ಸು ಕೂಡ ಮೀರಿದೆ. ಉದ್ಯೋಗಗಳಿಲ್ಲದೆ ಬೀದಿಯಲ್ಲಿ ಕಣ್ಣೀರಿಟ್ಟು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಪರೀಕ್ಷೆಗಳನ್ನು ನಡೆಸಿ ಎಂದು ಹೋರಾಡುವಂತಾಗಿದೆ.
ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿರುವ ಕಾಂಗ್ರೆಸ್ ಸರ್ಕಾರಕ್ಕೆ ನೊಂದವರ ಶಾಪ ತಟ್ಟದೇ ಬಿಡುವುದಿಲ್ಲ. ರಾಜ್ಯದ ಜನ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ ಎಂದು ಜೆಡಿಎಸ್ ಎಚ್ಚರಿಸಿದೆ.

