ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಕ್ಸಲರು ಶರಣಾದುದಲ್ಲ; ಸರಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆ ಶನಿವಾರ ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. 20-25 ವರ್ಷಗಳಿಂದ ಯಾರಿಗೂ ಸಿಗದೇ ಇರುವವರು ಇವತ್ತು ನಿಮ್ಮ ಕೈಗೆ ಹೇಗೆ ಸಿಕ್ಕಿದರು? ವಿಕ್ರಂ ಗೌಡ ಸಾವಾದ ತಕ್ಷಣ ಉಳಿದವರೆಲ್ಲರಿಗೆ ಭಯ ಬಂತೇ? ಇದರ ಹಿಂದೆ ಒಂದು ಪಿತೂರಿ ಇದೆ ಎಂದು ಆರೋಪಿಸಿದರು.
ನಕ್ಸಲರು ಬರಿಗೈಯಲ್ಲಿ ಬಂದಿದ್ದಾರೆ. ಶಸ್ತ್ರಾಸ್ತ್ರಗಳು ಎಲ್ಲಿ ಹೋದವು? ಇವರು ಇಷ್ಟೇನಾ? ಇನ್ನೂ ಇದ್ದಾರಾ? ಅಥವಾ ಶಸ್ತ್ರಾಸ್ತ್ರಗಳನ್ನು ಅವರಿಗೆ ಕೊಟ್ಟು ಬಂದಿದ್ದಾರಾ?- ಈ ಥರ ಎಲ್ಲ ಪ್ರಶ್ನೆಗಳಿವೆ ಎಂದು ತಿಳಿಸಿದರು.
ಕೋರ್ಟ್ ಅಥವಾ ಪೊಲೀಸರ ಮುಂದೆ ಅವರನ್ನು ಶರಣಾಗಲು ಸೂಚಿಸಬೇಕಿತ್ತು. ಮುಖ್ಯಮಂತ್ರಿಗಳ ಮುಂದೆ ಶರಣಾಗತಿ ಮಾಡಲು ಅವರಿಗೂ ಇವರಿಗೂ ಸಂಬಂಧ ಇತ್ತೇ ಎಂದು ಕೇಳಿದರು.
ಈ ಸರಕಾರ ಸಂಪೂರ್ಣವಾಗಿ ಭ್ರಷ್ಟರ ರಕ್ಷಣೆ ಮಾಡುತ್ತಿದೆ. ಭ್ರಷ್ಟಾಚಾರದಲ್ಲಿ ಇವರೂ ಇದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ. ನಾನು ಮುಖ್ಯಮಂತ್ರಿನಾ ನೀನಾ ಎಂಬ ಪರಿಸ್ಥಿತಿ ರಾಜ್ಯದ್ದು ಎಂದು ಆರೋಪಿಸಿದರು. ಯಾರೂ ಊಟಕ್ಕೂ ಒಟ್ಟಿಗೆ ಸೇರಬಾರದೆಂಬ ಬ್ರಿಟಿಷರು ಒಡೆದಾಳುವ ನೀತಿ ಕಾಂಗ್ರೆಸ್ಸಿನದು ಎಂದು ಟೀಕಿಸಿದರು.
ದಲಿತ ಮಾಫಿಯಾ, ದಲಿತ ವಿರೋಧಿ ಮಾಫಿಯಾ ಇಲ್ಲೊಂದು ದಲಿತ ಮಾಫಿಯಾ, ದಲಿತ ವಿರೋಧಿತನ ಇದೆ. ಖರ್ಗೆಯವರ ಕುಟುಂಬ, ಕೆ.ಎಚ್.ಮುನಿಯಪ್ಪ ಅವರ ಕುಟುಂಬ, ಎಚ್.ಸಿ.ಮಹದೇವಪ್ಪ ಅವರ ಕುಟುಂಬ- ಈ ಫ್ಯಾಮಿಲಿಗಳೇ ಇಡೀ ಕಾಂಗ್ರೆಸ್ಸನ್ನು ಆಳುತ್ತಿವೆ. ಇದರಲ್ಲಿ ಬೇರೆಯವರಿಗೆ ಅವಕಾಶವೇ ಇಲ್ಲ; ಇದುವೇ ದಲಿತ ಮಾಫಿಯಾ ಎಂದು ಛಲವಾದಿ ನಾರಾಯಣಸ್ವಾಮಿ ಅವರು ವಿಶ್ಲೇಷಿಸಿದರು.
ದಲಿತರು ಸಿಎಂ ಆಗಬಾರದು;
ಈ 3 ಕುಟುಂಬ ಬಿಟ್ಟು ಬೇರೆ ಯಾರೂ ಅಧಿಕಾರ ಪಡೆಯಬಾರದೆಂಬ ನೀತಿ ಇದೆ. ಒಂದು ದಲಿತ ಮಾಫಿಯಾ, ಇನ್ನೊಂದು ದಲಿತ ವಿರೋಧಿ ಮಾಫಿಯಾ ಎಂದು ತಿಳಿಸಿದರು. ಕಾಂಗ್ರೆಸ್ ನಾಶವಾಗುವ ಪರಿಸ್ಥಿತಿಗೆ ಬಂದಿದೆ. ಇಲ್ಲಿ ದಲಿತರಿಗೆ ಬೆಲೆಯೂ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದ ಸರಕಾರವು ಗ್ಯಾರಂಟಿಗಳನ್ನು ಕೊಟ್ಟಿದೆ. ಪರಿಶಿಷ್ಟ ಜಾತಿ- ವರ್ಗಗಳಿಗೆ ಪ್ರತ್ಯೇಕ ನಿಧಿಯನ್ನೂ ಕೊಟ್ಟಿದೆ. ಭಿಕ್ಷುಕನಿಗೆ ಕೈತುಂಬ ಚಿಲ್ರೆ ಕಾಸು ತಂದು ತಟ್ಟೆಗೆ ಹಾಕಿದರೆ ದಡದಡ ಸದ್ದಾಗುತ್ತದೆ. ಅವನು ಖುಷಿಯಾಗುತ್ತಾನೆ. ಪಕ್ಕದಲ್ಲಿ ಹಾಕಿದ್ದ ನೋಟುಗಳನ್ನು ಕದ್ದೊಯ್ಯುತ್ತಾರೆ. ಈ ಸರಕಾರವೂ ಹಾಗೇ; ಚಿಲ್ರೆ ಕಾಸನ್ನು ಸದ್ದು ಬರುವಂತೆ ಕೊಡುತ್ತದೆ. 25 ಸಾವಿರ ಕೋಟಿಯನ್ನು ಹಾಗೇ ಎತ್ಕೊಂಡು ಬಿಟ್ರಲ್ಲಾ ಎಂದು ಪ್ರಶ್ನಿಸಿದ ಅವರು, ಸಿಎಂ ಸೇರಿ ಈ ಸರಕಾರದ ಎಲ್ಲರೂ ಕಳ್ಳರೇ ಎಂದು ಟೀಕಿಸಿದರು.
ಗುತ್ತಿಗೆದಾರ ಸಚಿನ್ ಪಾಂಚಾಳ್ ಕೇಸನ್ನು ಸಿಬಿಐಗೇ ಕೊಡಬೇಕು ಎಂದ ಅವರು, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಡೆತ್ ನೋಟನ್ನು ಪರೀಕ್ಷೆಗೆ ಓದುವವರ ರೀತಿ ಪೊಲೀಸರು ಓದುತ್ತಿದ್ದರು ಎಂದು ಆಕ್ಷೇಪಿಸಿದರು. ಇದರ ಹಿಂದೆ ಏನು ಪಿತೂರಿ ಇದೆ ಎಂದು ಗೊತ್ತಾಗಬೇಕಲ್ಲವೇ ಎಂದು ಕೇಳಿದರು. ಪ್ರಾಣತ್ಯಾಗ ಸುಲಭವಾಗಿ ಆಗುವ ಕೆಲಸವಲ್ಲ ಎಂಬುದನ್ನು ಪ್ರಿಯಾಂಕ್ ಖರ್ಗೆಯವರೇ ಬಹಳ ಸಲ ಹೇಳಿದ್ದಾರೆ. ಅವರಿಗೆ ಇದು ಅನ್ವಯ ಆಗುವುದಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅವರಲ್ಲಿ ಕಲ್ಮಶ ಇಲ್ಲದಿದ್ದರೆ ಸಿಬಿಐಗೆ ಕೊಡಿ ಎನ್ನಬೇಕಿತ್ತು ಎಂದು ಸವಾಲು ಹಾಕಿದರು.
ಪ್ರಿಯಾಂಕ್ ಅನುಯಾಯಿಗಳು 15 ದಿನ ಎಲ್ಲಿ ಹೋಗಿದ್ದರು? ಬಿಜೆಪಿಯ 25 ಸಾವಿರ ಜನ ನಿಮ್ಮ ಮನೆಗೆ ಮುತ್ತಿಗೆ ಹಾಕಲು ಬಂದಿದ್ದರು. ಈಗಲೂ ಸಿಕ್ಕಿರುವುದು 5 ಜನ ಆರೋಪಿಗಳು. ಇನ್ನುಳಿದವರು ಎಲ್ಲಿ ಹೋದರು? ಎಂದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ ಹಣದ ಅವ್ಯವಹಾರ ಆಗಿತ್ತು. ನಾವು ಕೇಳಿದಾಗ ಅಷ್ಟಲ್ಲ; 87 ಕೋಟಿ ಎಂದಿದ್ದರು. ನುಂಗಿದ್ದು ಗ್ಯಾರಂಟಿ ಎಂದು ಮುಖ್ಯಮಂತ್ರಿಗಳೇ ಒಪ್ಪಿದ್ದಾರೆ; ಪ್ರಾಣತ್ಯಾಗ ಮಾಡಿದ ಚಂದ್ರಶೇಖರ್, ಮಂತ್ರಿಗಳು ಮತ್ತು ಚಯರ್ಮನ್ ಕಾರಣ ಎಂದಿದ್ದರು. ಎಸ್ಐಟಿಗೆ ಕೊಟ್ಟಾಗ ಆ ಎರಡು ಹೆಸರು ಬರಲಿಲ್ಲ. ಅವರನ್ನು ಕೈಬಿಟ್ಟಿದ್ದೇಕೆ ಎಂದು ಆಕ್ಷೇಪಿಸಿದರು.
ಪರಶುರಾಮ್ ಆತ್ಮಹತ್ಯೆ ಕೇಸನ್ನು ಸಿಐಡಿಗೆ ಕೊಟ್ಟಿದ್ದೀರಿ. ಇವತ್ತಿನವರೆಗೂ ಏನೂ ಆಗಿಲ್ಲ;
ಎಂಎಲ್ಎ ಚನ್ನಾರೆಡ್ಡಿ ಕೇಸನ್ನು ಏನು ಮಾಡಿದಿರಿ? ಜಾತಿ ನಿಂದನೆ, ಆತ್ಮಹತ್ಯೆ ಕೇಸಿನಲ್ಲಿ ಹೆಸರಿದ್ದರೂ ಚನ್ನಾರೆಡ್ಡಿ, ಅವರ ಮಗನನ್ನು ಇವತ್ತಿನವರೆಗೂ ಬಂಧಿಸಲಿಲ್ಲವೇಕೆ ಎಂದು ಕೇಳಿದರು.
ಪಕ್ಷದವರು ತಪ್ಪು ಮಾಡಿದರೆ ಅವರ ರಕ್ಷಣೆಗೆ ನಿಮ್ಮ ಸರಕಾರ ನಿಲ್ಲುತ್ತಿದೆ ಎಂದು ಆರೋಪಿಸಿದರು. ಬಿಜೆಪಿಯ ಶಾಸಕ ಸಿ.ಟಿ.ರವಿಯವರನ್ನು ಅರ್ಧ ಗಂಟೆಯಲ್ಲೇ ಬಂಧಿಸಿದ್ದೀರಿ; ಕೋರ್ಟಿಗೂ ಹಾಜರುಪಡಿಸದೆ ಕಬ್ಬಿನಗದ್ದೆ ಮತ್ತಿತರ ಕಡೆ ಸುತ್ತಿಸಿದ್ದೀರಿ ಎಂದು ಟೀಕಿಸಿದರು.