ಹಿರಿಯೂರು ಮಾದರಿ ನಗರ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ-ವಾಸೀಂ

News Desk

ವಾರ್ಡ್ ನಂಬರ್-1 ರಿಂದಲೇ ಯುಜಿಡಿ ಕಾಮಗಾರಿ ಆರಂಭಿಸಬೇಕು
ಹಿರಿಯೂರು ಮಾದರಿ ನಗರ ಮಾಡಲು ಪ್ರತಿಯೊಬ್ಬರ ಸಹಕಾರ ಅಗತ್ಯ-ವಾಸೀಂ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರವನ್ನು ಮಾದರಿ ಮಾಡುವ ಉದ್ದೇಶದಿಂದ ಇಡೀ ಚಿತ್ರಣ ಬದಲಿಸಿ ಅಭಿವೃದ್ಧಿ ಹೊಂದಿದ ನಗರ ನಿರ್ಮಾಣಕ್ಕೆ ಎಲ್ಲರೂ ಸಲಹೆ ಸಹಕಾರ ನೀಡಬೇಕು ಎಂದು ಪೌರಾಯುಕ್ತ ಎ ವಾಸಿಂ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2026-2027ನೇ ಸಾಲಿನ ಕರಡು ಆಯವ್ಯಯ ಅಂದಾಜು ಪಟ್ಟಿ ತಯಾರಿಕೆ ಸಂಬಂಧ ಕರೆದಿದ್ದ ಸಾರ್ವಜನಿಕರ ಸಮಾಲೋಚನಾ ಸಭೆ ಉದ್ದೇಶಿಸಿ ಮಾತನಾಡಿದರು.
ಫೆಬ್ರವರಿ ತಿಂಗಳಲ್ಲಿ ಬರುವ ಬಜೆಟ್ ನಲ್ಲಿ ಸಾರ್ವಜನಿಕರು ನೀಡುವಂತಹ ಸಲಹೆಗಳಿಗೆ ಮೊದಲ ಆದ್ಯತೆ ನೀಡಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರವರ ಆದೇಶದ ಮೇರೆಗೆ ಮಾದರಿ ನಗರ ನಿರ್ಮಾಣ ಮಾಡಲು ಆದ್ಯತೆ ನೀಡಲಾಗುತ್ತದೆ ಎಂದು ವಾಸೀಂ ಹೇಳಿದರು.

- Advertisement - 

ನಗರದ ವ್ಯಾಪಾರ ವಹಿವಾಟಿಗೆ ಸಹಾಯ ಧನ ಯೋಜನೆ ಇದ್ದು ಈಗಾಗಲೇ ಅರ್ಜಿ ಆಹ್ವಾನಿಸಲಾಗಿದ್ದು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು. ಮಟನ್ ಮಾರ್ಕೆಟ್ ನಲ್ಲಿ ಸ್ವಚ್ಛತೆ ಕಾಪಾಡಲು ಮತ್ತು ಬಾಡಿಗೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಹೊಸ ಮಾರ್ಕೆಟ್ ಮಾಡಲು ಸಚಿವರ ಗಮನಕ್ಕೆ ತರಲಾಗಿದೆ. ನಗರ ವ್ಯಾಪ್ತಿಯಲ್ಲಿ ಎರಡು ಹಂತದ ಒಳ ಚರಂಡಿ ಆಗಲಿದೆ. ಯಾವ ವಾರ್ಡ್ ಬಿಡದೇ  ಒಳ ಚರಂಡಿ ವ್ಯವಸ್ಥೆ ಮಾಡಲಾಗುವುದು ಎಂದರು.

ಬೀದಿ ಬದಿ ವ್ಯಾಪಾರಿಗಳಿಗೆ ಫುಡ್ ಕೋಡ್ ಮಾಡುವ ಯೋಜನೆ ಇದೆ. ಇಂಜಿನಿಯರ್ ಗಳನ್ನು ಕರೆದುಕೊಂಡು ಹೋಗಿ ಆಕಾರ ನೋಡಿಕೊಂಡು ಬಂದಿದ್ದೇವೆ. ಅತೀ ಶೀಘ್ರದಲ್ಲೇ ಸ್ಥಳಾವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಎಲ್ಲಾ ಕಡೆಯೂ ನಾಮಫಲಕ ಹಾಕುವ ಕೆಲಸ ಮಾಡಲಾಗುತ್ತದೆ. ಪಾರ್ಕ್ ಗಳ ಅಭಿವೃದ್ಧಿಗೆ ಅನುದಾನವಿದ್ದು ಆ ಕೆಲಸವನ್ನೂ ಶೀಘ್ರ ಮಾಡಲಾಗುವುದು. ಸಾರ್ವಜನಿಕರು ಮನೆಗಳನ್ನು ನಿರ್ಮಾಣ ಮಾಡಿಕೊಳ್ಳುವಾಗ ನಿರ್ಮಾಣ ಹಂತದ ನಿಯಮಗಳನ್ನು ಪಾಲಿಸಬೇಕು ಎಂದರು.

- Advertisement - 

ನಗರಸಭೆ ನಾಮ ನಿರ್ದೇಶನ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ ನಗರದಲ್ಲಿ ಬೀದಿ ಬದಿಯ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದ್ದು ವಾಣಿ ವಿಲಾಸ ಶಾಲಾ ಹಿಂಭಾಗದಲ್ಲಿ 12 ಅಡಿ ರಸ್ತೆ ಮತ್ತು ಜನತಾ ಸ್ಟೋರ್ ಹಿಂಭಾಗದ ಜಾಗವನ್ನು ಒತ್ತುವರಿ ಮಾಡಲಾಗಿದ್ದು ಅದನ್ನು ತೆರವುಗೊಳಿಸಿ ಬೀದಿ ಬದಿ ವ್ಯಾಪಾರಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.

ಬಿ.ಎಲ್ ಗೌಡ ನಗರ ನಿವಾಸಿ ಸಿ.ಬಿ ಮಹಾಲಿಂಗಪ್ಪ ಮಾತನಾಡಿ, ವಾರ್ಡ್ ನಂಬರ್ 1 ರಿಂದ 7ರ ತನಕದ ವಾರ್ಡ್ ಗಳನ್ನು ಯುಜಿಡಿ ಕಾಮಗಾರಿಗೆ ಪರಿಗಣಿಸಿಲ್ಲ, ಈ ವಾರ್ಡ್ ಗಳು ಬಹುತೇಕ ಸ್ಲಂಗಳಾಗಿವೆ. ಇಲ್ಲಿನ ರಸ್ತೆಗಳು ಕೂಡಾ ಕಿರಿದಾಗಿದ್ದು ಓಡಾಡಲು ಕಷ್ಟವಾಗುತ್ತಿದೆ. ಅಲ್ಲದೆ ಬಹುತೇಕ ಎಸ್ಸಿ, ಎಸ್ಟಿ ಇತರೆ ಒಬಿಸಿ ವರ್ಗಗಳೆ ಹೆಚ್ಚಾಗಿರುವುದರಿಂದ ಮೊದಲ ಹಂತದಲ್ಲೇ ಯುಜಿಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಮನವಿ ಮಾಡಿದರು.

ಬಿ.ಎಲ್.ಗೌಡ ನಗರ 1960ರಲ್ಲೇ ಅನುಮೋದನೆಯಾಗಿದೆ. ಕೆಲವರು ವಿನಾ ಕಾರಣ ರಸ್ತೆ ಮತ್ತು ಚರಂಡಿ ನಿರ್ಮಿಸಲು ಅಡ್ಡಿ ಮಾಡುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿ ಅಂಥಹ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು.

ಕಳೆದ 20 ವರ್ಷಗಳಿಂದೆ ಚರಂಡಿ, ರಸ್ತೆ ನಿರ್ಮಿಸಿದ್ದು ಈಗ ಹಾಳಾಗಿದೆ. ಆ ಬೀದಿಯಲ್ಲಿನ ನಿವಾಸಿಗಳಿಗೆ ಓಡಾಡಲು ತೊಂದರೆಯಾಗಿದ್ದು ಕೂಡಲೇ ರಸ್ತೆ. ಚರಂಡಿ ನಿರ್ಮಿಸಬೇಕು. ಜೊತೆಗೆ 5ನೇ ವಾರ್ಡ್ ನಲ್ಲಿ ಕುಡಿಯಲು ವಿವಿ ಸಾಗರದ ನೀರು ಪೂರೈಕೆಯಾಗುತ್ತಿಲ್ಲ, ಕೊಳವೆ ಬಾವಿ ನೀರು ಉಪ್ಪುರೋಸಾಗಿದ್ದು ಹಲವು ರೋಗಗಳು ಕಾಣಿಸಿಕೊಳ್ಳುತ್ತಿರುವುದರಿಂದ ಕೂಡಲೇ ವಿವಿ ಸಾಗರದ ನೀರು ಪೂರೈಕೆಗೆ ಕ್ರಮ ಜರುಗಿಸಬೇಕು ಎಂದು ಸಿ.ಬಿ ಮಹಾಲಿಂಗಪ್ಪ ಒತ್ತಾಯಿಸಿದರು.

ದಲಿತ ಮುಖಂಡ ಕೆಪಿ ಶ್ರೀನಿವಾಸ್ ಮಾತನಾಡಿ ನಗರದಲ್ಲಿ ಹಂದಿಗಳ ಹಾವಳಿ ಜಾಸ್ತಿಯಾಗಿದ್ದು ಹೊರ ವಲಯದಲ್ಲಿ ಹಂದಿಗಳ ಸಾಕಾಣಿಕೆಗೆ ಜಾಗ ನಿಗದಿ ಮಾಡಿಕೊಡಬೇಕು. ಅಲ್ಲದೆ ಬಹುತೇಕ ಬಡಾವಣೆಗಳ ರಸ್ತೆಗಳು ಅದ್ವಾನ ಆಗಿದ್ದು ಅಭಿವೃದ್ಧಿಗೊಳಿಸಬೇಕು. ನಗರಕ್ಕೆ ಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಪೌರಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಅನುದಾನ ನೀಡಬೇಕು. ಪೌರ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೂ ಬಜೆಟ್ ನಲ್ಲಿ ಅನುದಾನ ಮೀಸಲಿಡಬೇಕು ಎಂದು ಹೇಳಿದರು.

ಅಬ್ದುಲ್ ಅಜೀಜ್ ಮಾತನಾಡಿ ಮಟನ್ ಮಾರ್ಕೆಟ್ ನಿಂದ ನಗರಸಭೆಗೆ ಆದಾಯ ಬರುತ್ತಿಲ್ಲ. ಆದರೂ ಪೌರಕಾರ್ಮಿಕರು ದಿನವೂ ಅಲ್ಲಿ ಸ್ವಚ್ಛತೆ ಮಾಡುತ್ತಿದ್ದಾರೆ. ಸ್ವಚ್ಛತೆ ಕಾಪಾಡುವ ಕಾರ್ಮಿಕರನ್ನು, ಸಾರ್ವಜನಿಕರನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡುವ ವ್ಯವಸ್ಥೆ ಮಾಡಿ. ಅದರಿಂದ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಹೆಂಜಾರಪ್ಪ, ಶಿವು ಖಂಡೇನಹಳ್ಳಿ, ರಾಘವೇಂದ್ರ, ಅರುಣ್ ಕುಮಾರ್, ಸೈಯದ್ ಮುಸ್ತಾಕ್, ಮಹಾಲಿಂಗಪ್ಪ, ಗುರು ಇಂಜಿನಿಯರ್, ನಗರಸಭೆ ಇಂಜಿನಿಯರ್ ಶ್ರೀರಂಗಯ್ಯ, ಆರೋಗ್ಯ ನಿರೀಕ್ಷಕರಾದ ಸಂಧ್ಯಾ, ಮಹಾಲಿಂಗರಾಜ್ ಸೇರಿದಂತೆ ನಗರಸಭೆ ಸಿಬ್ಬಂದಿಗಳು, ಪೌರಕಾರ್ಮಿಕರು, ವರ್ತಕರು, ಸಾರ್ವಜನಿಕರು ಉಪಸ್ಥಿತರಿದ್ದರು.

 

 

 

Share This Article
error: Content is protected !!
";