ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಇವಿಎಂಗಳನ್ನು ಹ್ಯಾಕ್ ಮಾಡುವುದಾಗಲಿ ಅಥವಾ ಇವಿಎಂಗಳನ್ನು ತಿರುಚುವುದಾಗಲಿ ಸಾಧ್ಯವಿಲ್ಲ, ಈ ಕುರಿತು ಕೇಳಿ ಬರುತ್ತಿರುವ ಆರೋಪಗಳು ಆಧಾರರಹಿತ ಎಂದು ನ್ಯಾಯಾಲಯಗಳು 42 ಬಾರಿ ತೀರ್ಪು ನೀಡಿವೆ ಎಂದು ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿ ಮಾಧ್ಯಮಗಳೊಂದಿಗೆ ಮಾತನಾಡಿ ಅವರು, ಮತಯಂತ್ರಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಈ ಮೂಲಕ ಅವರು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಸುಳ್ಳಿನ ಬಲೂನುಗಳನ್ನು ನಂಬದಿರಿ ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಮತದಾನದ ದಿನಕ್ಕಿಂತ ಏಳರಿಂದ ಎಂಟು ದಿನಗಳ ಮೊದಲು ಮಾತ್ರ ಇವಿಎಂಗಳನ್ನು ನಿಯೋಜಿಸಲಾಗುತ್ತದೆ ಮತ್ತು ಅಭ್ಯರ್ಥಿಗಳಿಗೆ ಅವರ ಏಜೆಂಟರ ಮೂಲಕ ಪ್ರತಿ ಹಂತದಲ್ಲೂ ಇವಿಎಂಗಳ ಕುರಿತು ಮಾಹಿತಿ ನೀಡಲಾಗುತ್ತದೆ ಎಂದು ರಾಜೀವ್ ಕುಮಾರ್ ಹೇಳಿದರು.
ಮತದಾನದ ಡೇಟಾವನ್ನು ಬದಲಾಯಿಸುವುದು ಅಸಾಧ್ಯ ಮತ್ತು ಸಂಜೆ 5 ಗಂಟೆಯ ನಂತರ ಮತದಾನ ಹೆಚ್ಚಾಗುತ್ತಿದೆ ಎಂಬ ಬಗ್ಗೆ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಸಿಇಸಿ ಪುನರುಚ್ಚರಿಸಿದರು.
ಮಾಹಿತಿಯನ್ನು ಬಹಿರಂಗಪಡಿಸುವುದು ನಮ್ಮ ಮುಖ್ಯ ಆಧಾರಸ್ತಂಭವಾಗಿದೆ. ವಿವರವಾದ ಮಾರ್ಗಸೂಚಿಗಳು ಮತ್ತು ಡೇಟಾಸೆಟ್ಗಳು ನಮ್ಮ ವೆಬ್ಸೈಟ್ನಲ್ಲಿ ಲಭ್ಯವಿವೆ ಎಂದು ಅವರು ಹೇಳಿದರು.
ಸೋಮವಾರ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ. ನಮ್ಮ ದೇಶದ ಮತದಾರರ ಸಂಖ್ಯೆ 99 ಕೋಟಿ ದಾಟುತ್ತಿದೆ. ಶೀಘ್ರದಲ್ಲೇ ಒಂದು ಶತಕೋಟಿ ಮತದಾರರ ರಾಷ್ಟ್ರವಾಗಲಿದ್ದೇವೆ. ಮತದಾನದಲ್ಲಿ ಇದು ಮತ್ತೊಂದು ದಾಖಲೆಯಾಗಲಿದೆ ಎಂದು ರಾಜೀವ್ ಕುಮಾರ್ ತಿಳಿಸಿದರು.
ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಪಂಜಾಬ್ ಎಸ್ಎಸ್ಆರ್ ಘೋಷಿಸಿದ ನಂತರ 99 ಕೋಟಿ ಮತದಾರರನ್ನು ದಾಟಲಿದ್ದೇವೆ. ಮಹಿಳಾ ಮತದಾರರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗುತ್ತಿದೆ ಎಂದು ಸಿಇಸಿ ಹೇಳಿದರು.