ಎಸ್ಸಿ-ಎಸ್ಟಿ ಮೀಸಲಾತಿಯಲ್ಲಿ ಕೆನೆಪದರ ವರ್ಗ ಹೊರಗಿಡಿ-ನ್ಯಾ.ಗವಾಯಿ

News Desk

ಚಂದ್ರವಳ್ಳಿ ನ್ಯೂಸ್, ಅಮರಾವತಿ(ಆಂಧ್ರ ಪ್ರದೇಶ):
ಎಸ್ಸಿ ಮತ್ತು ಎಸ್ಟಿ ಮೀಸಲಾತಿ ಜಾರಿಯಲ್ಲಿ ಕೆನೆಪದರ ವರ್ಗ (ಅಭಿವೃದ್ಧಿ ಹೊಂದಿದ)ವನ್ನು ಹೊರಗಿಡುವಂತೆ ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಬಿ.ಆರ್​.ಗವಾಯಿ ಅವರು ಪುನರುಚ್ಚರಿಸಿದ್ದಾರೆ.

ಅಮರಾವತಿಯಲ್ಲಿ ಇಂಡಿಯಾ ಅಂಡ್​ ದಿ ಲಿವಿಂಗ್​ ಇಂಡಿಯನ್​ ಕಾನ್​ಸ್ಟಿಟ್ಯೂಶನ್​ ಅಟ್​ 75 ಈಯರ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗವಾಯಿ, ಐಎಎಸ್ ಅಧಿಕಾರಿಯ ಮಕ್ಕಳನ್ನು ಮೀಸಲಾತಿ ವಿಚಾರದಲ್ಲಿ ಬಡ ಕೃಷಿ, ಕಾರ್ಮಿಕರ ಮಕ್ಕಳೊಂದಿಗೆ ಸಮೀಕರಿಸಲಾಗುವುದಿಲ್ಲ ಎಂದು ಗವಾಯಿ ಅವರು ಅಭಿಪ್ರಾಯಪಟ್ಟರು.

- Advertisement - 

ಇಂದಿರಾ ಸಾಹ್ನಿ ಪ್ರಕರಣದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಯಿಂದ ಕೆನೆಪದರ ವರ್ಗವನ್ನು ಹೊರಗಿಡಲಾಯಿತು. ಆದರೆ, ನಾನು ಇನ್ನೂ ಸ್ವಲ್ಪ ಮುಂದೆ ಹೋಗಿ ಯೋಚಿಸಿದೆ. ಹಿಂದುಳಿದ ವರ್ಗಗಳಿಗೆ ಅನ್ವಯವಾಗುವಂತೆ ಪರಿಶಿಷ್ಟ ಜಾತಿ-ಪಂಗಡಗಳಿಗೂ ಈ ನೀತಿ ಅನ್ವಯಿಸಬೇಕು ಎಂಬುದು ನನ್ನ ಅಭಿಮತ. ಆದರೆ, ನನ್ನ ತೀರ್ಪು ವ್ಯಾಪಕ ಟೀಕೆಗೆ ಗುರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನ್ಯಾಯಾಧೀಶರು ತಮ್ಮ ತೀರ್ಪುಗಳನ್ನು ಸಹಜವಾಗಿ ಸಮರ್ಥಿಸಿಕೊಳ್ಳಬಾರದು ಎಂಬುದು ನನ್ನ ಭಾವನೆ. ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ಕೆಳಗಿಳಿಯಲು ನನಗೆ ಇನ್ನೂ ಒಂದು ವಾರ ಸಮಯ ಇದೆ ಅಷ್ಟೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

- Advertisement - 

ದೇಶದಲ್ಲಿ ಸಮಾನತೆ ಅಥವಾ ಮಹಿಳಾ ಸಬಲೀಕರಣವು ಕಳೆದ ಕೆಲವು ವರ್ಷಗಳಿಂದ ವೇಗ ಪಡೆಯುತ್ತಿದೆ. ಸಮಾಜದಲ್ಲಿ ತಾರತಮ್ಯ ಭಾವನೆ ಕಡಿಮೆಯಾಗುತ್ತಿದೆ. ಸಮುದಾಯಗಳ ನಡುವಿನ ಅಂತರವೂ ತಗ್ಗುತ್ತಿದೆ ಎಂದು ಸಿಜೆಐ ಹೇಳಿದರು.

ಕೆನೆಪದರ ಎಂದರೇನು?:
 ಪ್ರಕರಣವೊಂದರಲ್ಲಿ 2024ರಲ್ಲಿ ನಡೆದ ನಡೆದ ವಿಚಾರಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೆನೆಪದರಕ್ಕೆ ಸೇರಿದವರನ್ನು ಗುರುತಿಸಿ ಅವರನ್ನು ಮೀಸಲಾತಿ ಸವಲತ್ತಿನಿಂದ ಹೊರಗಿಡುವ ಬಗ್ಗೆ ಸುಪ್ರೀಂ ಕೋರ್ಟ್‌ ತನ್ನ ಒಲವು ಪ್ರಕಟಿಸಿತ್ತು.
SC ಮತ್ತು ST ಗಳಲ್ಲಿಯೂ ಸಹ ಕೆನೆಪದರ ವರ್ಗವನ್ನು ಗುರುತಿಸಲು ಮತ್ತು ಅವರಿಗೆ ಮೀಸಲಾತಿಯ ಪ್ರಯೋಜನ ನಿರಾಕರಿಸಲು ರಾಜ್ಯಗಳು ನೀತಿ ರೂಪಿಸಬೇಕು ಎಂದು ನ್ಯಾಯಮೂರ್ತಿಗಳಾಗಿದ್ದ ಬಿ.ಆರ್​.ಗವಾಯಿ ಅವರು ಅಂದು ತೀರ್ಪು ನೀಡಿದ್ದರು.

ಎಸ್‌ಸಿ-ಎಸ್‌ಟಿ ಸಮುದಾಯಗಳ ಆಂತರಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ಸವಲತ್ತುಗಳನ್ನು ವಿಸ್ತರಿಸುವುದಕ್ಕಾಗಿ ವಿವಿಧ ಗುಂಪುಗಳಾಗಿ ಉಪ-ವರ್ಗೀಕರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಸಾಂವಿಧಾನಿಕ ಪೀಠ ಎತ್ತಿ ಹಿಡಿದಿತ್ತು.

ಮೀಸಲಾತಿ ಸವಲತ್ತುಗಳು ಅಂತಹ ಸಮುದಾಯಗಳಲ್ಲಿ ಈಗಲೂ ಹಿಂದುಳಿದವರಿಗೆ ತಲುಪುವಂತಾಗಲು ಕೆನೆಪದರ ಗುರುತಿಸುವಿಕೆಗೆ ಏಳು ಸದಸ್ಯರ ಪೀಠದಲ್ಲಿ ನಾಲ್ವರು ಒಮ್ಮತ ವ್ಯಕ್ತಪಡಿಸಿದ್ದರು.

ಪ್ರಸ್ತುತ, ಕೆನೆ ಪದರದ ನೀತಿಯು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಮಾತ್ರ ಅನ್ವಯಿಸುತ್ತಿದೆ. ಎಸ್‌ಸಿ/ಎಸ್‌ಟಿ ಸಮುದಾಯಗಳಿಗೆ ಅನ್ವಯವಾಗುತ್ತಿಲ್ಲ.

 

 

Share This Article
error: Content is protected !!
";