ಚಂದ್ರವಳ್ಳಿ ನ್ಯೂಸ್, ವಿಜಯನಗರ:
ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಲೋಕೋಪಯೋಗಿ ಇಲಾಖೆ ಯ ಎಕ್ಸಿಕ್ಯೂಟಿವ್ ಎಂಜನಿಯರ್ ಹಾಗೂ ಅಕೌಂಟೆಂಟ್ ಸಿಕ್ಕಿಬಿದ್ದ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.
ಫೆಬ್ರವರಿ-10 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಲೋಕೋಪಯೋಗಿ ಇಲಾಖೆ ಕಚೇರಿಯಲ್ಲಿ ಎಕ್ಸಿಕ್ಯೂಟಿವ್ ಎಂಜನಿಯರ್ ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಂದ ಟ್ರಾಪ್ಗೆ ಒಳಗಾದರು.
ಹೂವಿನ ಹಡಗಲಿ ತಾಲೂಕಿನ ದೂರುದಾರ ಮಹೇಶ್ ಹಲಗೇರಿ ಅವರು ಲೋಕಾಯುಕ್ತರಿಗೆ ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ನಡೆದಿದ್ದು, ದೂರುದಾರರು ಲೋಕೋಪಯೋಗಿ ಇಲಾಖೆಯ ಕಾಮಗಾರಿಗೆ ಟೆಂಡರ್ ಪಡೆದು ಕಾಮಗಾರಿ ಪೂರ್ಣಗೊಳಿಸಿದ್ದರು. ಆದರೆ ಕಾಮಗಾರಿಯ ಬಿಲ್ ಮಂಜೂರು ಮಾಡಿಕೊಡುವುದಕ್ಕಾಗಿ ಎಕ್ಸಿಕ್ಯೂಟಿವ್ ಎಂಜನಿಯರ್ ದೇವದಾಸ್ ಹಾಗೂ ಅಕೌಂಟೆಂಟ್ ಮಾರುತಿ ಒಟ್ಟು 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಲಂಚದ ಹಣವನ್ನು ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ. ಈ ಸಂಬಂಧ ಲೋಕಾಯುಕ್ತರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ವಿಜಯನಗರ ಲೋಕಾಯುಕ್ತ ಉಪ ಪೊಲೀಸ್ ಅಧೀಕ್ಷಕ ಸಚಿನ್ ಎಸ್. ಛಲವಾದಿ ಅವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕರಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಸೇರಿದಂತೆ ಸಿಬ್ಬಂದಿಗಳು ದಾಳಿ ನಡೆಸಿದರು.
ಸರ್ಕಾರಿ ಇಲಾಖೆಯಲ್ಲಿ ಲಂಚದ ವಿರುದ್ಧ ಲೋಕಾಯುಕ್ತರ ನಿರಂತರ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

