ಕನ್ನಡ ಭಾಷೆಯ ಸೌಂದರ್ಯಕ್ಕೆ ತಪ್ಪಿಲ್ಲದ ಭಾಷೆ ಪ್ರಯೋಗ ಅತ್ಯಂತ ಅವಶ್ಯಕ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕನ್ನಡ ಭಾಷೆ ಅತ್ಯಂತ ಪುರಾತನವಾದದ್ದು, ಭಾಷೆಯ ಸೌಂದರ್ಯ ಕಾಪಾಡಬೇಕಾದರೆ ತಪ್ಪಿಲ್ಲದ ಭಾಷೆ ಪ್ರಯೋಗ ಅತ್ಯಂತ ಅವಶ್ಯಕ ಎಂದು ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.

ವಿಶ್ವ ಪುಸ್ತಕ ದಿನಾಚರಣೆ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಹಯೋಗದಲ್ಲಿ ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕನ್ನಡ ಕರಡು ತಿದ್ದುಪಡಿ ಕಮ್ಮಟಉದ್ಘಾಟಿಸಿ ಅವರು ಮಾತನಾಡಿದರು.

ಭಾಷಾ ಬಳಕೆಗೆ ಲಿಪಿಯು ಒಂದು ಉತ್ತಮ ಸಲಕರಣೆ. ಸಲಕರಣೆಯನ್ನು ಸೂಕ್ತವಾಗಿ ಹಾಗೂ ಅತ್ಯಂತ ಸಮರ್ಪಕವಾಗಿ ಬಳಸುವ ಅವಶ್ಯವಿದೆ. ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಆಯೋಜಿಸಿರುವ ಇಂತಹ ಕನ್ನಡ ಕರಡು ತಿದ್ದುಪಡಿ ಕಮ್ಮಟವು ಪ್ರಾಧ್ಯಾಪಕರಿಗೆ ಹಾಗೂ ಕನ್ನಡ ಕಲಿಯುವ ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಲಿದೆ ಎಂದು ಹೇಳಿದರು.

ಪುರಾತನ ಕಾಲದಿಂದ ಸಾವಿರಾರು ಭಾಷೆಗಳು ಚಿತ್ರಗಳ ಮೂಲಕ ಲಿಪಿಯನ್ನು ಆರಂಭಿಸಿ ಹಂತ ಹಂತವಾಗಿ ಅವು ಬೆಳೆದು ಅಕ್ಷರ ರೂಪ ತಾಳಿವೆ. ಅಕ್ಷರ ರೂಪ ತಪ್ಪುಗಳಿಲ್ಲದೆ ಬಳಕೆಯಾದಾಗ ಭಾಷೆಯ ಸೌಂದರ್ಯ ವೃದ್ಧಿಯಾಗುತ್ತದೆ ಎಂದು ಅವರು ಕಿವಿ ಮಾತು ಹೇಳಿದ ಅವರು, ಪುರಾತನ ಲಿಪಿಗಳಲ್ಲಿ ಕನ್ನಡವೂ ಒಂದು.

ಇದನ್ನು ಜಗತ್ತಿನ ಭಾಷೆಗಳ ರಾಣಿ ಎಂದು ವಿನೋಬಾ ಭಾವೆಯವರು ಹೇಳಿದ್ದಾರೆ ಎಂಬುದನ್ನು ಅವರು ಸ್ಮರಿಸಿದರು.
ಕಮ್ಮಟದ ನಿರ್ದೇಶಕ ಕೆ.ರಾಜಕುಮಾರ್ ಮಾತನಾಡಿ, ಕನ್ನಡ ಭಾಷಾ ಬಳಕೆ ಬಗ್ಗೆ ಅತ್ಯಂತ ಎಚ್ಚರವಾಗಿರಬೇಕು. ಬಹಳಷ್ಟು ಜನರು ಕನ್ನಡವನ್ನು ತಪ್ಪು ತಪ್ಪಾಗಿ ಬಳಸುತ್ತಾರೆ. ಲೇಖನ ಚಿಹ್ನೆಗಳ ಬಗ್ಗೆ ಬಹಳಷ್ಟು ಜನರಿಗೆ ತಿಳುವಳಿಕೆ ಕಡಿಮೆ. ಇವುಗಳನ್ನು ತಿಳಿಸಿ ಕೊಡುವುದೇ ಕಮ್ಮಟದ ಉದ್ದೇಶವಾಗಿದೆ ಎಂದರು.

ಡಿಟಿಪಿ ಮಾಡುವವರು ಹಾಗೂ ಲೇಖಕರು ತಮ್ಮ ಹಸ್ತಪ್ರತಿಗಳನ್ನು ತಿದ್ದುವಾಗ ಅತ್ಯಂತ ಎಚ್ಚರಿಕೆಯಿಂದ ಲೇಖನ ಚಿಹ್ನೆಗಳನ್ನು ತಿದ್ದುಪಡಿ ಮಾಡುವ ವಿಧಾನವನ್ನು ಸಮರ್ಥವಾಗಿ ಕಲಿತಿರಬೇಕು ಎಂದು ಅವರು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಮಾತನಾಡಿ, ಮನೆಯ ಕತ್ತಲೆ ಓಡಿಸಲು ಮನೆಗೊಂದು ಕಿಟಕಿ ಇರಬೇಕು. ಮನದ ಕತ್ತಲೆ ತೊಳೆಯಲು ಪ್ರತಿ ಮನಸ್ಸಿಗೂ ಒಂದು ಪುಸ್ತಕವಿರಬೇಕು ಎಂದರು.

ಪುಸ್ತಕಗಳು ಮನುಷ್ಯನಿಗೆ ಬದುಕು ಕಲಿಸುತ್ತದೆ. ಬದುಕು ಎಂದರೆ ಬರೀ ಬದುಕುವುದಲ್ಲ. ಬದುಕಿಗೊಂದು ಅರ್ಥ ಬರಬೇಕಾದರೆ ಅಧ್ಯಯನ ಬಹಳ ಮುಖ್ಯ. ಹಾಗಾಗಿ ಪುಸ್ತಕಗಳು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ನಾವು ಓದುವ ಅಭಿರುಚಿಯನ್ನು ಬೆಳೆಸಬೇಕು. ಪುಸ್ತಕ ಪ್ರೀತಿಯನ್ನು ಬೆಳೆಸಬೇಕು ಎಂದು ಹೇಳಿದರು.  
ಪುಸ್ತಕ ಪ್ರಾಧಿಕಾರದ ಯೋಜನೆಗಳ ಬಗ್ಗೆ ವಿವರಿಸಿದ ಮಾನಸ ಅವರು, ಇಂತಹ ಕಮ್ಮಟಗಳು ಸಮರ್ಥ ಭಾಷಾ ಬಳಕೆಗೆ ಅತ್ಯಂತ ಉಪಯುಕ್ತ ಎಂದು ಹೇಳಿದರು.

ಸಮಾರಂಭದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಪುಸ್ತಕ ಪ್ರಾಧಿಕಾರದ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಚಿಕ್ಕಣ್ಣ ಯಣ್ಣೆಕಟ್ಟೆ, ಸಿರಿಗೆರೆ ಬೃಹನ್ಮಠದ ವಿದ್ಯಾಂಸ್ಥೆಗಳ ಆಡಳಿತಾಧಿಕಾರಿ ಡಾ. ಎಚ್.ಪಿ.ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಬಿ ಜತ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಚಿತ್ರದುರ್ಗದ ಸಹಾಯಕ ನಿರ್ದೇಶಕ ಡಾ.ಬಿ.ಎಂ. ಗುರುನಾಥ್ ಇದ್ದರು.

 

Share This Article
error: Content is protected !!
";