ನೇತ್ರಾದಾನ, ಅಂಗಾಂಗ ದಾನದ ಅರಿವು ಮೂಡಿಸಲು ವಾಕಥಾನ್

WhatsApp
Telegram
Facebook
Twitter
LinkedIn

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:

ಲಯನ್ಸ್‌ಕ್ಲಬ್ ಆಫ್ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌, ಅಕ್ಷಯ ಲಿಯೋ ಕ್ಲಬ್ ಹಾಗೂ ಶ್ರೀ ದೇವರಾಜ ಅರಸ್‌ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಹಯೋಗದಲ್ಲಿ ಅಂಗಾಂಗ ದಾನ ಹಾಗೂ ನೇತ್ರದಾನದ ಕುರಿತು ಅರಿವು ಮೂಡಿಸುವ ಸಲುವಾಗಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು 3 ಕಿಲೋ ಮೀಟರ್‌ವಾಕಥಾನ್‌ನಡೆಸಿದರು. 

ನಗರದ ಜಯಚಾಮರಾಜೇಂದ್ರ ವೃತ್ತದ ಬಳಿ ಇರುವ ನೆಲದಾಂಜನೇಯಸ್ವಾಮಿ ದೇವಾಲಯದ ಮುಂಭಾಗ ವಾಕಥಾನ್‌ಗೆ ಲಯನ್ಸ್‌ಜಿಲ್ಲಾ ದೃಷ್ಟಿ ವಿಭಾಗದ ಸಂಯೋಜಕ ವಿಜಯಕುಮಾರ್ ಹಾಗೂ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ಚಾಲನೆ ನೀಡಿದರು.

 

ಟಿ.ಸಿದ್ದಲಿಂಗಯ್ಯ ವೃತ್ತ, ಕೊಂಗಾಡಿಯಪ್ಪ ಬಸ್‌ನಿಲ್ದಾಣ, ಸೌಂದರ್ಯಮಹಲ್ ವೃತ್ತ, ಚೌಕ, ಮುಕ್ತಾಂಬಿಕಾ ರಸ್ತೆ, ಎಚ್.ಮುಗುವಾಳಪ್ಪ ವೃತ್ತ, ಶಾಂತಿನಗರ ಮೂಲಕ ಆರ್.ಎಲ್.ಜಾಲಪ್ಪ ವಿದ್ಯಾ ಸಂಸ್ಥೆ ಕ್ಯಾಂಪಸ್‌ಗೆ ವಾಕಥಾನ್‌ನಡೆಸಲಾಯಿತು.

 

 ವಿದ್ಯಾರ್ಥಿಗಳು ಅಂಗಾಂಗ ದಾನ, ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಸಂದೇಶಗಳನ್ನು ಹೊತ್ತ ಬಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳ ಮೂಲಕ ಸಾರ್ವಜನಿಕರಿಗೆ ಸಂದೇಶ ರವಾನಿಸಿದರು. 

ನೇತ್ರದಾನದ ಬಗ್ಗೆ ತಪ್ಪುಗ್ರಹಿಕೆ ಬೇಡ:

ಇಲ್ಲಿನ ಶ್ರೀದೇವರಾಜ ಅರಸ್‌ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜಿನ ನೇತ್ರತಜ್ಞ ಡಾ.ನರೇಂದ್ರ ಮಾತನಾಡಿ, 18 ವರ್ಷ ಮೀರಿದ ಯಾವುದೇ ವ್ಯಕ್ತಿ ನೇತ್ರದಾನಕ್ಕೆ ನೊಂದಣಿ ಮಾಡಬಹುದು. ಡಾ.ರಾಜ್‌ಕುಮಾರ್, ಪುನಿತ್‌ರಾಜ್‌ಕುಮಾರ್‌, ಜಾಲಪ್ಪ ಸೇರಿದಂತೆ ಅನೇಕ ಮಹನೀಯರು ನೇತ್ರದಾನ ಮಾಡುವ ಮಾಡುವ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಇಂತಹ ಗಣ್ಯರ ನಡೆ ಇತರರಿಗೂ ಮಾದರಿಯಾಗಿದ್ದು, ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಜನರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದರು.

 

ಕಣ್ಣಿನ ದಾನದ ಬಗ್ಗೆ ಹಲವು ಮೂಢನಂಬಿಕೆಗಳು ಜನರಲ್ಲಿದ್ದು, ಅವುಗಳಿಂದ ಮುಕ್ತವಾಗುವುದು ಅಗತ್ಯ. ತಪ್ಪುಗ್ರಹಿಕೆಯನ್ನು ದೂರಮಾಡಿ, ವೈಜ್ಞಾನಿಕ ಸತ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಆಗಬೇಕು. ಒಬ್ಬ ವ್ಯಕ್ತಿಯ ಕಣ್ಣುಗಳು ನಾಲ್ವರಿಗೆ ದೃಷ್ಟಿ ನೀಡಲು ನೆರವಾಗುತ್ತವೆ ಎಂದು ತಿಳಿಸಿದರು.

 

ಲಯನ್ಸ್‌ಜಿಲ್ಲೆ 317ಎಫ್‌ನ ದೃಷ್ಟಿ ವಿಭಾಗದ ಸಂಯೋಜಕ ವಿಜಯಕುಮಾರ್ ಮಾತನಾಡಿ, ಮಾನವೀಯ ನೆಲೆಗಟ್ಟಿನ ಉದ್ದೇಶವೊಂದರ ಸಾಫಲ್ಯಕ್ಕೆ ನೂರಾರು ಜನರು ಕೈಜೋಡಿಸಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದರು.

 

ಎಸ್‌ಡಿಯುಇಟಿ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ನೇತ್ರದಾನದಲ್ಲಿ ದೊಡ್ಡಬಳ್ಳಾಪುರ ತನ್ನದೇ ಆದ ಮಹತ್ವವನ್ನು ಹೊಂದಿದೆ. ಈವರೆಗೆ ಸುಮಾರು ಎರಡೂವರೆ ಸಾವಿರ ಕಣ್ಣುಗಳನ್ನು ದಾನ ಮಾಡಿರುವ ಅನನ್ಯ ಕಾರ್ಯವನ್ನು ಈ ತಾಲೂಕು ಮಾಡಿದ್ದು, ಈ ಬಗ್ಗೆ ಮತ್ತಷ್ಟು ಜಾಗೃತಿ ಉಂಟಾಗಬೇಕು ಎಂದರು. 

 

ಲಯನ್ಸ್‌ಕ್ಲಬ್‌ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ನ ಅಧ್ಯಕ್ಷ ಜೆ.ಆರ್.ರಾಕೇಶ್‌ಅಧ್ಯಕ್ಷತೆ ವಹಿಸಿದ್ದರು. ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್‌, ಜಿಲ್ಲಾ ಗ್ರಾಮೀಣ ಡಯಾಬಿಟಿಕ್‌ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ಉಪಾಧ್ಯಕ್ಷ ಪ್ರೊ.ಕೆ.ಆರ್.ರವಿಕಿರಣ್, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಸಂಜೆ ಕಾಲೇಜು ಪ್ರಾಂಶುಪಾಲ ಡಾ.ಚಿಕ್ಕಣ್ಣ, ಲಯನ್ಸ್‌ಕ್ಲಬ್‌ಪದಾಧಿಕಾರಿಗಳು ಭಾಗವಹಿಸಿದ್ದರು. 

 

ಇದೇ ವೇಳೆ ನೇತ್ರದಾನ ನೊಂದಣಿ ಕಾರ್ಯ ನಡೆಯಿತು. ಹಲವರು ತಮ್ಮ ಮರಣಾನಂತರ ಕಣ್ಣುಗಳನ್ನು ದಾನ ಮಾಡುವುದಾಗಿ ನೊಂದಣಿ ಮಾಡಿದರು.

 

 

News Desk   About Us
For Feedback - [email protected]

LATEST Post

error: Content is protected !!
WhatsApp Icon Telegram Icon