ಸುಳ್ಳು ಸುದ್ದಿಗಳು ಸಮಾಜಕ್ಕೆ ಕೆಟ್ಟ ಸಂದೇಶ ನೀಡಲಿವೆ-ಸಚಿವ ದಿನೇಶ್ ಗುಂಡೂರಾವ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುಳ್ಳು ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಕೆಲ ಮಾಧ್ಯಮಗಳು, ಜಾಲತಾಣಗಳು ಹಬ್ಬಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.

ಕರ್ನಾಟಕ ಮಾಧ್ಯಮ ಆಕಾಡೆಮಿ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಗಾಂಧಿ ಸ್ಮಾರಕ ಭವನದ ಸಹಕಾರೊಂದಿಗೆ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾದ  ಸುಳ್ಳು ಸುದ್ದಿ – ಸಾಮಾಜಿಕ ನ್ಯಾಯದ ಮೇಲೆ ಪರಿಣಾಮಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಸುಳ್ಳು ಸುದ್ದಿ ಪ್ರಸಾರ ಮಾಡುವ ಕೆಲವು ಮಾಧ್ಯಮಗಳು ಜನರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಸುಳ್ಳನೇ ಸತ್ಯವಾಗಿ ಬಿಂಬಿಸಿ ಜನರನ್ನು ದಾರಿ ತಪ್ಪಿಸುವ ಕಾರ್ಯ ನಡೆಸುತ್ತಿದ್ದಾರೆ.

ಇದು ಈ ಹಿಂದೆ ಇರಲಿಲ್ಲ. ಈಗ ಆರೇಳು ವರ್ಷಗಳಿಂದ ಇದು ಹೆಚ್ಚಾಗುತ್ತಿದೆ. ಟಿ.ವಿ ಮಾಧ್ಯಮಗಳು, ಬಿಗ್ ಬ್ರೇಕಿಂಗ್ ನ್ಯೂಸ್‍ನಲ್ಲಿ ನೋಡುಗರ ಅಭಿರುಚಿಗೆ ತಕ್ಕಂತೆ ಸುದ್ದಿ ಪ್ರಸಾರ ಮಾಡುತ್ತಿದ್ದು, ಅದು ಚಾನಲ್‍ಗಳ ಟಿ.ಆರ್.ಪಿ. ಸಹ ಹೆಚ್ಚಿಸಿದೆ. ಇದರಿಂದ ಇವು ಆದಾಯ ಗಳಿಕೆಯಲ್ಲೂ ಸಹಕಾರಿಯಾಗಿದೆ ಎಂದರು.

ಸುಳ್ಳು ಸುದ್ದಿಗಳು ಸಮಾಜಕ್ಕೆ ಕೆಟ್ಟ ಸಂದೇಶಗಳನ್ನು ನೀಡುತ್ತದೆ. ಜನರಿಗೆ ಯಾವುದು ಸತ್ಯ, ಯಾವುದು ಸುಳ್ಳು ಎಂಬುದರ ಬಗ್ಗೆ ಕೆಲವೊಮ್ಮೆ ಗೊಂದಲ ಮೂಡಿಸುತ್ತದೆ. ಆದ್ದರಿಂದ ಇದರ ವಸ್ತು ಪರಿಶೀಲನೆ (Fact Check) ಮಾಡುವುದರ ಮೂಲಕ ಗೃಹ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗಳು ನಿಗಾ ವಹಿಸಬೇಕು. ಇದರಿಂದ ಇಂತಹ ಸುದ್ದಿಗಳು ಹರಡುವುದನ್ನು ತಡೆಯಬಹುದೆಂದರು.

ಕಾರ್ಯಕ್ರಮದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಪತಿಗಳು ಹಾಗೂ ಇಂಡಿಯನ್ ಕಮ್ಯೂನಿಕೇಷನ್ ಕಾಂಗ್ರೆಸ್‍ನ ಕಾರ್ಯ ನಿರ್ವಾಹಕ ಅಧ್ಯಕ್ಷ ಪ್ರೊ. ಬಿ.ಕೆ. ರವಿ ಮಾತನಾಡಿ ಜನರು ಯಾವುದೇ ಸುದ್ದಿಯನ್ನು ಸತ್ಯವೆಂದೇ ನಂಬುತ್ತಾರೆ. ಪತ್ರಿಕೋದ್ಯಮ ಅದರಲ್ಲೂ ಸುದ್ದಿ ನೀಡುವ ಪತ್ರಕರ್ತರ ವೃತ್ತಿ ಪವಿತ್ರವಾದದ್ದು. ಇತ್ತೀಚಿನ ವರ್ಷಗಳಲ್ಲಿ ಕೆಲ ಚಾನೆಲ್, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು, ನಕರಾತ್ಮಕ ಸುದ್ದಿಗಳು ಹೆಚ್ಚು ಪ್ರಸಾರವಾಗುತ್ತಿದೆ. ಇದು ಜನರ ಮತ್ತು ಸಮಾಜದಲ್ಲಿನ ಶಾಂತಿಯನ್ನು ಕೆಡಿಸುತ್ತಿದೆ. ಇದು ಆರೋಗ್ಯಕರ ಬೆಳವಣಿಗೆ ಅಲ್ಲ. ಮಾಧ್ಯಮಗಳ ಸಹಕಾರ ಸಮಾಜಕ್ಕೆ ಅತ್ಯವಶ್ಯಕ. ಹಾಗೆಯೇ ಮಾಧ್ಯಮಗಳು ಸಹ ತಮ್ಮ ಇತಿ – ಮಿತಿಗಳನ್ನು  ಅರಿತು ಒಳ್ಳೆಯ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವ ಕೆಲಸ ಮಾಡಬೆಕೆಂದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಶಾ ಖಾನಂ, ತಮ್ಮನ್ನು ಮಾಧ್ಯಮ ಅಕಾಡೆಮಿಗೆ ಮೊದಲ ಮಹಿಳಾ ಅಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದ್ದು, ಗಾಂಧಿ ಭವನದಲ್ಲಿ ತಮ್ಮ ಮೊದಲ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.

ಪತ್ರಿಕೋದ್ಯಮಕ್ಕೆ ಅಗಾದವಾದ ಶಕ್ತಿ ಇದ್ದು, ಇದರ ದುರುಪಯೋಗ ಮಹಾ ಅಪರಾಧ ಎಂದು ಗಾಂಧಿಜಿಯವರು ತಿಳಿಸದ್ದರು. ಸುಳ್ಳು ಸುದ್ದಿಯ ಪ್ರಸಾರ ಸಮಾಜವನ್ನು ವಿರೂಪಗೊಳಿಸುತ್ತದೆ. ಅಲ್ಲದೆ ಸಾಮಾಜಿಕ ನ್ಯಾಯದ ಮೇಲೆ ಸಹ ಪರಿಣಮ ಬೀರುತ್ತದೆ ಎಂದರು.
ಪತ್ರಕರ್ತರ ವೃತ್ತಿ ನೈಪುಣ್ಯತೆ ಹೆಚ್ಚಿಸುವ ನಿಟ್ಟಿನಲ್ಲಿ ಮಾಧ್ಯಮ ಅಕಾಡೆಮಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅಕಾಡೆಮಿ ಡಿಜಿಟಲ್ ರೂಪ ತಳೆದು ವೆಬ್‍ಸೈಟ್‍ನ್ನು ಮತ್ತಷ್ಟು ಕ್ರಿಯಾಶೀಲಗೊಳಿಸಲು ಉದ್ದೇಶಿಸಿದೆ. ನೈಜಸುದ್ದಿ, ಕ್ರಿಯಾಶೀಲ ಪತ್ರಿಕೋದ್ಯಮ ಉತ್ತೇಜಿಸುವುದು ಅಕಾಡೆಮಿಯ ಮುಖ್ಯ ಗುರಿ ಎಂದರು.

 

- Advertisement -  - Advertisement -  - Advertisement - 
Share This Article
error: Content is protected !!
";