ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಗುರಿಯನ್ನಾಗಿಸಿಕೊಂಡು ಪೊಲೀಸ್ ದೌರ್ಜನ್ಯಗಳು ಪುನರಾವರ್ತನೆ ಯಾಗುತ್ತಲೇಯಿದೆ. ಸುಳ್ಳು ದೂರುಗಳನ್ನು ದಾಖಲಿಸಿಕೊಂಡು ಕಾರ್ಯಕರ್ತರ ವಿರುದ್ಧ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಕೊಡಗಿನ ವಿನಯ್ ಸೋಮಯ್ಯ ಪ್ರಕರಣ ಹಸಿಯಾಗಿರುವಾಗಲೇ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಸ್ವತಃ ಜಿಲ್ಲಾ ಎಸ್.ಪಿಯೇ ಹಿಂದೂ ಸಂಘಟನೆಯ ಕಾರ್ಯಕರ್ತ ಶ್ರೀನಿವಾಸ್ ನಾಯ್ಕ ಅವರ ಮೇಲೆ ಹಲ್ಲೆ ನಡೆಸಿರುವುದು ಅತ್ಯಂತ ಅಮಾನವೀಯ, ಅಧಿಕಾರ ದುರ್ಬಳಕೆ ಹಾಗೂ ಪೊಲೀಸ್ ದಬ್ಬಾಳಿಕೆಯನ್ನು ಸಾಕ್ಷೀಕರಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿ ಹಾಗೂ ವಿವಿಧ ಹಿಂದೂ ಸಂಘಟನೆಗಳು ರಾತ್ರಿ ಇಡೀ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿವೆ.
ಇಷ್ಟಾಗಿಯೂ ಹಿಂದೂ ಕಾರ್ಯಕರ್ತರ ಮೇಲೆ ಪ್ರಲಾಪ ತೋರಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಅವರ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ಜರುಗಿಸದೇ ಮೌನ ವಹಿಸಿರುವುದು ಅತ್ಯಂತ ಖಂಡನೀಯ ನಡೆ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಈ ಧೋರಣೆ ಹಾಗೂ ವರ್ತನೆಯನ್ನು ಇನ್ನು ಮುಂದೆ ಸಹಿಸಿ ಕೂರಲಾಗದು. ಸದ್ಯ ಮುಂದುವರೆದಿರುವ ಜನಾಕ್ರೋಶ ಯಾತ್ರೆಯಲ್ಲಿ ಈ ಬಗ್ಗೆ ದನಿಯೆತ್ತಲಾಗುವುದು ಎಂದು ವಿಜಯೇಂದ್ರ ತಿಳಿಸಿದ್ದಾರೆ.